ಕೋಲ್ಕತ್ತ: ಮಾತುಕತೆಗೆ ಕಿರಿಯ ವೈದ್ಯರು ಮುಂದಿಟ್ಟಿದ್ದ ಕೆಲವು ಷರತ್ತುಗಳನ್ನು ಪಶ್ಚಿಮ ಬಂಗಾಳ ಸರ್ಕಾರ ತಿರಸ್ಕರಿಸಿದ ಕಾರಣ ಬುಧವಾರ ಸಂಜೆ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ. ಕರ್ತವ್ಯಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಕಿಮ್ಮತ್ತು ನೀಡದ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ.
ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಿಕ್ಕಟ್ಟು ಪರಿಹರಿಸಲು ಕಿರಿಯ ವೈದ್ಯರನ್ನು ಸರ್ಕಾರ ಬುಧವಾರ ಮಾತುಕತೆಗೆ ಆಹ್ವಾನಿಸಿ, ನಸುಕಿನಲ್ಲಿ ಇಮೇಲ್ ಸಂದೇಶ ಕಳುಹಿಸಿತ್ತು. ಆದರೆ, ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖ ದಲ್ಲಿ ಚರ್ಚೆ ಆಗಬೇಕು ಮತ್ತು ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂದು ಷರತ್ತು ವಿಧಿಸಿದರು.
ಆದರೆ, ಸರ್ಕಾರವು ತನ್ನ ನಿಲುವಿಗೆ ದೃಢವಾಗಿ ಅಂಟಿಕೊಂಡು, ಮಾತುಕತೆಯ ಪೂರ್ವ ಷರತ್ತುಗಳಿಗೆ ಸಮ್ಮತಿಸಲು ನಿರಾಕರಿಸಿತು.
ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಚರ್ಚೆ ನಡೆಸಲು ಸರ್ಕಾರ ಮುಕ್ತವಾಗಿದೆ. ಆದರೆ, ‘ರಾಜ ಕೀಯ ಶಕ್ತಿಗಳು’ ಪ್ರತಿಭಟನೆಗಳ ಮೇಲೆ ಪ್ರಭಾವ ಬೀರುತ್ತಿವೆ ಎಂದು ಹೇಳಿದರು.
ಸಚಿವರ ಈ ಹೇಳಿಕೆಯು ವೈದ್ಯರ ಕಡೆಯಿಂದಲೂ ಸರ್ಕಾರದ ಮಾತುಕತೆಯ ಆಹ್ವಾನವನ್ನು ತ್ವರಿತವಾಗಿ ತಿರಸ್ಕರಿಸಲು ಕಾರಣವಾಯಿತು. ಅಲ್ಲದೆ, ಸಚಿವೆಯ ಹೇಳಿಕೆಯನ್ನು ವೈದ್ಯರು ಆಧಾರರಹಿತವೆಂದು ತಳ್ಳಿಹಾಕಿದರು.
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಗೌರವಿಸುವ ಮೂಲಕ ವೈದ್ಯರು ಪುನಃ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸಿದ ಸಚಿವರು, ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ರಾಜ್ಯ ಸರ್ಕಾರವು ದಂಡನಾ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂಬುದರ ಬಗ್ಗೆ ನೇರ ಉತ್ತರ ನೀಡಲಿಲ್ಲ.
ಏತನ್ಮಧ್ಯೆ, ಟಿಎಂಸಿ ನಾಯಕರು ಮತ್ತು ಶಾಸಕರು ಧರಣಿನಿರತ ಕಿರಿಯ ವೈದ್ಯರನ್ನು ‘ರಾಷ್ಟ್ರ ವಿರೋಧಿಗಳು’ ಎಂದು ಜರೆಯುವ ಮೂಲಕ ಅವರಿಗೆ ಪರೋಕ್ಷವಾಗಿ ಬೆದರಿಕೆಗಳನ್ನು ಹಾಕಿದರು. ಮುಷ್ಕರನಿರತ ವೈದ್ಯರ ವಿರುದ್ಧ ಪಕ್ಷವೂ ಪ್ರತಿಭಟನೆಗಳನ್ನು ನಡೆಸಬಹುದು ಎಂದು ಎಚ್ಚರಿಕೆ ನೀಡಿದರು.
33ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬುಧವಾರ 33ನೇ ದಿನಕ್ಕೆ ಕಾಲಿಟ್ಟಿತು. ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್, ರಾಜ್ಯ ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಶಿಕ್ಷಣ ನಿರ್ದೇಶಕರು ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರನ್ನು ವಜಾಗೊಳಿಸುವಂತೆ ಒತ್ತಾಯಿಸಿ ವೈದ್ಯರು ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಚೇರಿ ಸ್ವಾಸ್ಥ್ಯ ಭವನದ ಹೊರಗೆ ಧರಣಿ ನಡೆಸುತ್ತಿದ್ದಾರೆ.
ಸಾಕ್ಷ್ಯಗಳನ್ನು ತಿರುಚುವಲ್ಲಿ ಭಾಗಿಯಾಗಿರುವ ಆರ್.ಜಿ. ಕರ್ ಆಸ್ಪತ್ರೆಯ ಹಿಂದಿನ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರರ ಅಮಾನತಿಗೂ ಅವರು ಒತ್ತಾಯಿಸಿದ್ದಾರೆ.
ಆರೋಗ್ಯ ವೃತ್ತಿಪರರಿಗೆ ಎದುರಾಗಿರುವ ಬೆದರಿಕೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಲು ಹೆಚ್ಚು ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವು ಆಡಳಿತದಲ್ಲಿ ಲಭಿಸು ವಂತಾಗಬೇಕು ಎಂದೂ ಕಿರಿಯ ವೈದ್ಯರು ಒತ್ತಾಯಿಸಿದ್ದಾರೆ. ಸ್ವಾಸ್ಥ್ಯ ಭವನದ ಹೊರಗೆ ಧರಣಿ ನಿರತ ಕಿರಿಯ ವೈದ್ಯರು, ಸ್ಥಳಕ್ಕೆ ಆಗಮಿಸಿದ ಬಿಜೆಪಿಯ ಹಿರಿಯ ನಾಯಕ ಅಗ್ನಿಮಿತ್ರ ಪೌಲ್ ಅವರಿಗೆ ‘ಹಿಂತಿರುಗಿ’ ಎಂಬ ಘೋಷಣೆ ಕೂಗಿದ ಪ್ರಸಂಗವು ನಡೆಯಿತು.
ವೈದ್ಯರು ಕೆಲಸಕ್ಕೆ ಮರಳುತ್ತಾರೆ ಮತ್ತು ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವುದಾಗಿ ರಾಜ್ಯ ಸರ್ಕಾರ ಆಶಿಸುತ್ತಿದೆ.–ಮನೋಜ್ ಪಂತ್, ಮುಖ್ಯ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸರ್ಕಾರ
ಷರತ್ತುಗಳ ಹೊರತಾಗಿಯೂ ಚರ್ಚೆಗೆ ಬಾಗಿಲುಗಳು ತೆರೆ ದಿರುತ್ತವೆ. ಮಾತುಕತೆಯಲ್ಲಿ ಸಿ.ಎಂ ಕಡ್ಡಾಯ ಉಪಸ್ಥಿತಿ ಬೇಡಿಕೆ ಸ್ವೀಕರಿಸಲ್ಲ.–ಚಂದ್ರಿಮಾ ಭಟ್ಟಾಚಾರ್ಯ, ಆರೋಗ್ಯ ರಾಜ್ಯ ಸಚಿವ
ವೈದ್ಯರ ಮುಷ್ಕರದಿಂದ ಜನರು ಬಳಲುತ್ತಿರುವ ಕಾರಣ ವೈದ್ಯರ ವಿರುದ್ಧ ಪಕ್ಷದ ವತಿಯಿಂದ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ.–ಹುಮಾಯೂನ್ ಕಬೀರ್, ಟಿಎಂಸಿ ಶಾಸಕ
ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಮುಷ್ಕರ ನಡೆಸುತ್ತಿರುವ ವೈದ್ಯರು ರಾಷ್ಟ್ರ ವಿರೋಧಿಗಳು–ಚಂದನ್ ಮುಖೋಪಾಧ್ಯಾಯ, ಟಿಎಂಸಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.