ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ದೇಶದ ಉದ್ದನೆಯ ಸಾಗರ ಸೇತುವೆ ಎಂಟಿಎಚ್‌ಎಲ್‌ಗೆ ₹250 ಟೋಲ್‌ ನಿಗದಿ

ಜ.12ರಂದು ಪ್ರಧಾನಿ ಮೋದಿ ಉದ್ಗಾಟಿಸುವ ಸಾಧ್ಯತೆ
Published 4 ಜನವರಿ 2024, 15:34 IST
Last Updated 4 ಜನವರಿ 2024, 15:34 IST
ಅಕ್ಷರ ಗಾತ್ರ

ಮುಂಬೈ: ದೇಶದ ಉದ್ದನೆಯ ಸಾಗರ ಸೇತುವೆ ‘ಮುಂಬೈ ಟ್ರಾನ್ಸ್‌ ಹಾರ್ಬರ್ ಲಿಂಕ್’ (ಎಂಟಿಎಚ್‌ಎಲ್‌) ಮೂಲಕ ಸಂಚಾರಕ್ಕೆ ಮಹಾರಾಷ್ಟ್ರ ಸರ್ಕಾರ ₹250 ಟೋಲ್‌ ಶುಲ್ಕ ನಿಗದಿ ಮಾಡಿದೆ.

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. 

ಈ ಸೇತುವೆಯನ್ನು ‘ಅಟಲ್‌ ಬಿಹಾರಿ ವಾಜಪೇಯಿ ಸ್ಮೃತಿ ಸೇವರಿ ನ್ಹಾವಾ ಶೇವಾ ಅಟಲ್ ಸೇತು’ ಎಂದೂ ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇತುವೆಯನ್ನು ಜ.12ರಂದು ಉದ್ಘಾಟಿಸುವ ನಿರೀಕ್ಷೆ ಇದೆ.

ಈ ಸಾಗರ ಸೇತುವೆಯು ಮುಂಬೈನ ಸೇವರಿ ಹಾಗೂ ರಾಯಗಡ ಜಿಲ್ಲೆಯ ನ್ಹಾವಾ ಶೇವಾ ನಗರವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ಸ್ಥಳಗಳ ನಡುವಿನ ಸಂಚಾರಕ್ಕೆ ಎರಡೂವರೆ ಗಂಟೆಗೂ ಅಧಿಕ ಸಮಯ ಬೇಕು. ಒಂದೊಮ್ಮೆ ಈ ಸಾಗರ ಸೇತುವೆ ಸಂಚಾರಕ್ಕೆ ಮುಕ್ತಗೊಂಡಾಗ, ಪ್ರಯಾಣಕ್ಕೆ 15–20 ನಿಮಿಷಗಳಷ್ಟು ಸಾಕು.

ಎಂಟಿಎಚ್‌ಎಲ್‌ ಒಟ್ಟು 21.8 ಕಿ.ಮೀ. ಉದ್ದ ಇದ್ದು, ಸಾಗರದಲ್ಲಿ ಹಾಯ್ದು ಹೋಗುವ ಸೇತುವೆಯ ಉದ್ದ 16.5 ಕಿ.ಮೀ.ನಷ್ಟಿದೆ. ಈ ಸೇತುವೆಗೆ ಸಂಪರ್ಕ ಕಲ್ಪಿಸುವ ವಯಾಡಕ್ಟ್‌ಗಳ ಉದ್ದ 5.5 ಕಿ.ಮೀ. ಇದೆ.

ಚೀನಾದಲ್ಲಿರುವ ಹ್ಯಾಂಗ್‌ಜೌ ಬೇ ಬ್ರಿಡ್ಜ್ (36 ಕಿ.ಮೀ. ಉದ್ದ) ಹಾಗೂ ಸೌದಿ ಅರೇಬಿಯಾದಲ್ಲಿ ಕಿಂಗ್‌ ಫಹಾದ್ ಕಾಸ್‌ವೇ (26 ಕಿ.ಮೀ. ಉದ್ದ) ವಿಶ್ವದ ಇತರ ಎರಡು ಸಾಗರ ಸೇತುವೆಗಳಾಗಿವೆ.

‘ನಾಗರಿಕರ ಮೇಲೆ ಹೊರೆ’: ಎಂಟಿಎಚ್‌ಎಲ್‌ ಟೋಲ್‌ ₹ 250 ನಿಗದಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಆರ್‌ಟಿಐ ಕಾರ್ಯಕರ್ತ ಅನಿಲ್‌ ಗಲಗಲಿ ಟೀಕಿಸಿದ್ದಾರೆ.

‘ಟೋಲ್‌ ಶುಲ್ಕವನ್ನು ₹ 250 ನಿಗದಿ ಮಾಡಲಾಗಿದೆ. ಮತ್ತೊಂದೆಡೆ, ಸೇತುವೆ ನಿರ್ಮಿಸಿದ ಗುತ್ತಿಗೆದಾರರಿಗೆ ₹2,200 ಕೋಟಿ ಪಾವತಿಸಲಾಗುತ್ತದೆ. ಹೀಗಾಗಿ, ಈ ಸೇತುವೆ ನಿರ್ಮಾಣದ ಹೊರೆಯನ್ನು ಜನರೇ ಹೊರಬೇಕಾಗಿದೆ’ ಎಂದು ಹೇಳಿದ್ದಾರೆ.

‘ಈಗ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಟೋಲ್‌ ಶುಲ್ಕವನ್ನು ಕಡಿಮೆ ನಿಗದಿ ಮಾಡಲಾಗಿದೆ. ಚುನಾವಣೆ ನಂತರ ಈ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ಮಾತುಗಳನ್ನು ತಳ್ಳಿ ಹಾಕಲಾಗದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT