ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಪ್ರತಿಭಟನೆ: ಸುದ್ದಿ ಪ್ರಕಟಿಸಲು ಮಾಧ್ಯಮಗಳ ಮೇಲೆ ಬೆದರಿಕೆ ತಂತ್ರ

ಕೇರಳದಲ್ಲಿ ಬಲಪಂಥೀಯ ಸಂಘಟನೆಗಳಿಂದ ಅಭಿಯಾನ
Last Updated 8 ಅಕ್ಟೋಬರ್ 2018, 10:00 IST
ಅಕ್ಷರ ಗಾತ್ರ

ಬೆಂಗಳೂರು: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಸುದ್ದಿ ಪ್ರಕಟಿಸುವಂತೆ ಕೇರಳದಲ್ಲಿ ಮಾಧ್ಯಮಗಳ ಮೇಲೆ ಬಲಪಂಥೀಯ ಸಂಘಟನೆಗಳು ಒತ್ತಡ ಹೇರುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಸುದ್ದಿಗೆ ಪ್ರಾಮುಖ್ಯ ಕೊಡದೆ ಪ್ರತಿಭಟನೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ‘ಮಾತೃಭೂಮಿ’ ಪತ್ರಿಕೆಯನ್ನು ಅನ್‌ಸಬ್‌ಸ್ಕ್ರೈಬ್ ಮಾಡಿ (ಚಂದಾವನ್ನು ರದ್ದುಗೊಳಿಸಿ ಅಥವಾ ಖರೀದಿಸಬೇಡಿ) ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸದ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಕೇರಳದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಇತ್ತೀಚೆಗೆ ‘ಪಂದಳಂ’ನಲ್ಲಿಯೂ ಪ್ರತಿಭಟನೆ ನಡೆದಿದ್ದು, 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದರಲ್ಲಿ ಬಹುಪಾಲು ಮಹಿಳೆಯರೇ ಇದ್ದರು. ಈ ಕುರಿತು ಕೇರಳದ ಪ್ರಮುಖ ದಿನಪತ್ರಿಕೆ ‘ಮಲಯಾಳ ಮನೋರಮ’ ಮುಖಪುಟದಲ್ಲಿ ಚಿತ್ರ ಪ್ರಕಟಿಸಿತ್ತು. ಆದರೆ, ‘ಮಾತೃಭೂಮಿ’ ಪತ್ರಿಕೆ ಒಳಪುಟದಲ್ಲಿ ಚಿತ್ರರಹಿತ ಸುದ್ದಿ ಪ್ರಕಟಿಸಿತ್ತು.

ನಂಬಿಕೆಗಳಿಗೆ ಘಾಸಿ ಮಾಡಲಾಗಿದೆ. ಕೆಲವು ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಪ್ರತಿಭಟನೆಯನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಸಂಘಪರಿವಾರಕ್ಕೆ ಸೇರಿದ ಸಂಘಟನೆ ಹಿಂದೂ ಐಕ್ಯವೇದಿಯ ವಕೀಲ ವಿ.ಎಸ್‌. ರಾಜನ್ ಆರೋಪಿಸಿರುವುದಾಗಿ ದಿ ಟೆಲಿಗ್ರಾಫ್ ಸುದ್ದಿತಾಣ ವರದಿ ಮಾಡಿದೆ.

‘ಸಮತೋಲಿತ ವಿಧಾನವನ್ನು ನಾವು ನಿರೀಕ್ಷಿಸುತ್ತೇವೆ. ಮಾಧ್ಯಮಕ್ಕೆ ಅದರದ್ದೇ ಆದ ಸ್ವಾತಂತ್ರ್ಯವಿದೆ. ಆದಾಗ್ಯೂ, ಪ್ರಮುಖ ಘಟನೆಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸುವುದನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ’ ಎಂಬ ರಾಜನ್ ಹೇಳಿಕೆಯನ್ನೂ ವರದಿ ಉಲ್ಲೇಖಿಸಿದೆ.

‘ಸಂಘ ಪರಿವಾರದ ದೃಷ್ಟಿಯಲ್ಲಿ ನಾವೆಲ್ಲ ಹಿಂದೂ ವಿರೋಧಿಗಳು. ಇವತ್ತು ಅವರು ಮಾತೃಭೂಮಿಯನ್ನು ಗುರಿಯಾಗಿಸುತ್ತಿದ್ದಾರೆ. ನಾಳೆ ಅವರ ಗುರಿ ನಾವು ಯಾರೂ ಆಗಿರಬಹುದು’ ಎಂಬ ಪತ್ರಕರ್ತರೊಬ್ಬರ ಹೇಳಿಕೆಯೂ ವರದಿಯಲ್ಲಿ ಉಲ್ಲೇಖವಾಗಿದೆ.

‘ಹಿಂದೂ ಧರ್ಮಕ್ಕೆ ಸೇರಿದ ಎಲ್ಲವನ್ನೂ ದ್ವೇಷಿಸುವ ಮಾತೃಭೂಮಿ ಮತ್ತು ಮನೋರಮ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿವೆ. ದಯಮಾಡಿ ಅವುಗಳನ್ನು ಖರೀದಿಸಬೇಡಿ’ ಎಂದು ಕೆ.ಪಿ. ಗೋಪಾಲಕೃಷ್ಣ ಮೆನನ್ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ಮೊದಲಲ್ಲ

ಮಾತೃಭೂಮಿ ವಿರುದ್ಧ ಬಲಪಂಥೀಯ ಸಂಘಟನೆಗಳು ಈ ಹಿಂದೆಯೂ ಪ್ರತಿಭಟನೆ ನಡೆಸಿವೆ. ಮಲಯಾಳ ಲೇಖಕ ಎಸ್‌. ಹರೀಶ್‌ ಅವರ ‘ಮೀಶ’ ಕಾದಂಬರಿ ‘ಮಾತೃಭೂಮಿ’ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಹಿಂದೂ ಮಹಿಳೆಯರು ದೇಗುಲಕ್ಕೆ ಹೋಗುವುದನ್ನು ಕಾದಂಬರಿಯಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪತ್ರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ನಂತರ ‘ಜೀವ ಬೆದರಿಕೆ ಬಂದ ಕಾರಣ ಕಾದಂಬರಿಯನ್ನು ಹಿಂಪಡೆದಿದ್ದೇನೆ’ ಎಂದು ಹರೀಶ್ ಹೇಳಿದ್ದರು.

ಇದನ್ನೂ ಓದಿ: ಬಲಪಂಥೀಯ ಸಂಘಟನೆ ಬೆದರಿಕೆ: ಕಾದಂಬರಿ ಹಿಂಪಡೆದ ಮಲೆಯಾಳಂ ಲೇಖಕ

ಆದರೆ, ‘ಮೀಶ’ ಕಾದಂಬರಿ ನಿಷೇಧಿಸುವಂತೆ ಕೋರಿ ದೆಹಲಿ ನಿವಾಸಿ ಎನ್‌. ರಾಧಾಕೃಷ್ಣನ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಇದನ್ನೂ ಓದಿ: ಮಲಯಾಳದ ‘ಮೀಶ’ ಕಾದಂಬರಿ ನಿಷೇಧ ಅರ್ಜಿ ವಜಾಗೊಳಿಸಿದ ಸುಪ್ರೀಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT