ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ರೋಡಾ ಮಾತಿಗೆ ಪ್ರಧಾನಿ ಕಿಡಿ

ಅಂತರ ಕಾಯ್ದುಕೊಂಡ ಕಾಂಗ್ರೆಸ್‌ * ಬಿಜೆಪಿ, ಮಿತ್ರ ಪಕ್ಷಗಳ ವಾಗ್ದಾಳಿ
Published 8 ಮೇ 2024, 16:30 IST
Last Updated 8 ಮೇ 2024, 16:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಅವರು ಭಾರತದ ವೈವಿಧ್ಯವನ್ನು ವಿವರಿಸುವಾಗ ನೀಡಿರುವ ಹೇಳಿಕೆ ಬುಧವಾರ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. 

‘ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಿದ್ದರೆ, ಪಶ್ಚಿಮದ ರಾಜ್ಯಗಳಲ್ಲಿರುವವರು ಅರಬ್ಬರ ಥರ ಕಾಣುತ್ತಾರೆ. ಅದೇ ರೀತಿ, ಉತ್ತರ ಭಾಗಗಳ ಜನರು ಬಹುಶಃ ಬಿಳಿಯರಂತೆ ಕಂಡರೆ ದಕ್ಷಿಣದಲ್ಲಿರುವವರು ಆಫ್ರಿಕಾದವರಂತೆ ಕಾಣುತ್ತಾರೆ. ಈ ವೈವಿಧ್ಯದ ನಡುವೆಯೂ ನಾವು ಏಕತೆಯನ್ನು ಸಾಧಿಸಿದ್ದೇವೆ’ ಎಂದು ಪಿತ್ರೋಡಾ ಹೇಳಿದ್ದು, ವಿವಾದದ ಕಿಡಿ ಹೊತ್ತಿಸಿದೆ. 

ಇತ್ತೀಚೆಗೆ ಅವರು ನೀಡಿದ್ದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಹೇಳಿಕೆಯಿಂದ ಎದ್ದಿದ್ದ ವಿವಾದ ತಣ್ಣಗಾಗುವ ಮುನ್ನವೇ, ಅವರ ಮತ್ತೊಂದು ಹೇಳಿಕೆ ವಿವಾದಕ್ಕೀಡಾಗಿದೆ.

ಪಿತ್ರೋಡಾ ಅವರ ಈ ಹೇಳಿಕೆ ಕುರಿತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿವೆ. ‘ಇಂತಹ ಜನಾಂಗೀಯ ದ್ವೇಷದ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷದ ವಿಭಜಕ ರಾಜಕಾರಣ ಬಹಿರಂಗಗೊಂಡಿದೆ’ ಎಂದು ಬಿಜೆಪಿ ಟೀಕಿಸಿದೆ. ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದೆ.

ಈ ಹೇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ, ಅವರ ಚರ್ಮದ ಬಣ್ಣ ಕಪ್ಪು ಎಂಬ ಕಾರಣಕ್ಕೆ ಅವರನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷ ಮುಂದಾಗಿತ್ತು ಎಂಬುದು ನನಗೆ ಈಗ ಅರ್ಥವಾಗುತ್ತಿದೆ’ ಎಂದು ಹೇಳಿದ್ದಾರೆ.

ಪಿತ್ರೋಡಾ ಹೇಳಿದ್ದೇನು?: ನಿಯತಕಾಲಿಕೆಯ ಪಾಡ್‌ಕಾಸ್ಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ನಮಗೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಸಂದಿವೆ. ಕೆಲ ಸಣ್ಣ–ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ, ನಾವು (ಭಾರತೀಯರು) ಸಂತಸದ ವಾತಾವರಣದಲ್ಲಿ ಬದುಕುತ್ತಿದ್ದೇವೆ’ ಎಂದು ಪಿತ್ರೋಡಾ ಹೇಳಿದ್ದಾರೆ.

‘ವಿವಿಧ ಭಾಷೆ ಮತ್ತು ಧರ್ಮಗಳು, ಬೇರೆಬೇರೆ ಆಚರಣೆಗಳು, ಆಹಾರದಲ್ಲಿ ವೈವಿಧ್ಯವನ್ನು ನಾವು ಗೌರವಿಸುತ್ತೇವೆ’ ಎಂದು ಪಿತ್ರೋಡಾ ಅವರು ಹೇಳಿದ್ದ ಸಂದರ್ಶನದ ಭಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದೆ.

‘ಒಬ್ಬ ಗುಜರಾತಿಯಾಗಿ ನಾನು ದೋಸೆಯನ್ನು ಇಷ್ಟಪಡುತ್ತೇನೆ. ನನಗೆ ಇಡ್ಲಿಯೂ ಇಷ್ಟ. ಅದು ನನ್ನ ಆಹಾರ. ಅದು ಈಗ ದಕ್ಷಿಣ ಭಾರತೀಯರ ಆಹಾರವಾಗಿ ಉಳಿದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಅಭಿಪ್ರಾಯ ಹೊಂದಲು ಅವಕಾಶ ಇದೆ ಹಾಗೂ ಪ್ರತಿಯೊಬ್ಬರೂ ಒಂದಿನಿತಾದರೂ ರಾಜಿ ಆಗುತ್ತಾರೆ. ಅಂತಹ ಭಾರತದಲ್ಲಿ ನಾನು ನಂಬಿಕೆ ಹೊಂದಿದ್ದೇನೆ’ ಎಂದೂ ಹೇಳಿದ್ದಾರೆ.

‘ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವ ಹಾಸುಹೊಕ್ಕಾಗಿರುವ ಭಾರತವೇ ನನ್ನ ದೇಶ. ಇಂತಹ ಕಲ್ಪನೆಯ ಭಾರತಕ್ಕೆ ರಾಮ ಮಂದಿರ ಮತ್ತು ರಾಮ ನವಮಿ ಎಂಬ ಸಂಗತಿಗಳು ಸವಾಲು ಒಡ್ಡುತ್ತವೆ. ಪ್ರಧಾನಿ ಯಾವಾಗಲೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಒಬ್ಬ ರಾಷ್ಟ್ರೀಯ ನಾಯಕರಾಗಿ ಮಾತನಾಡದೇ ಒಬ್ಬ ಬಿಜೆಪಿ ಮುಖಂಡನಂತೆ ಮಾತನಾಡುತ್ತಾರೆ’ ಎಂದು ಪಿತ್ರೋಡಾ ಹೇಳಿದ್ದಾರೆ.

‘ರಾಮ ಮಂದಿರ, ದೇವರು, ಇತಿಹಾಸ, ಪರಂಪರೆ, ಭಗವಾನ್‌ ಹನುಮಾನ್‌, ಬಜರಂಗ ದಳದಂತಹ ವಿಷಯಗಳನ್ನು ಕೇಂದ್ರೀಕರಿಸಿ ಅಭಿಪ್ರಾಯಗಳನ್ನು ನಿರ್ಮಿಸಲಾಗುತ್ತಿದೆ. ಅವರ ಇಂತಹ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ’ ಎಂದೂ ಹೇಳಿದ್ದಾರೆ.

‘ನಮ್ಮ ಹಿರಿಯರು ಬ್ರಿಟಿಷರ ವಿರುದ್ಧ ಹೋರಾಡಿದ್ದು, ಜಾತ್ಯತೀತ ದೇಶವನ್ನು ನಿರ್ಮಿಸುವುದಕ್ಕಾಗಿಯೇ ಹೊರತು ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದಕ್ಕಾಗಿ ಅಲ್ಲ ಎಂಬುದಾಗಿ ಹೇಳುವ ಮತ್ತೊಂದು ಗುಂಪು ಇದೆ. ಧರ್ಮದ ಆಧಾರದಲ್ಲಿಯೇ ರಾಷ್ಟ್ರ ಸೃಷ್ಟಿಯಾಗಬೇಕು ಎಂದು ಪಾಕಿಸ್ತಾನ ನಿರ್ಧರಿಸಿತು. ಈಗ, ಆ ರಾಷ್ಟ್ರದ ಗತಿ ಏನಾಗಿದೆ? ಭಾರತ ಇಡೀ ವಿಶ್ವದಲ್ಲಿಯೇ ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಿದರ್ಶನವಾಗಿ ನಿಂತಿದೆ’ ಎಂದು ಪಿತ್ರೋಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT