ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ದಿನಗಳಲ್ಲಿ ನ್ಯಾಯ ಸಾಧ್ಯವೇ

‘ದಿಶಾ’ ಮಸೂದೆ ಅಂಗೀಕಾರ ವಿಚಾರ: ಸಂತೋಷ್‌ ಹೆಗ್ಡೆ ಪ್ರಶ್ನೆ
Last Updated 14 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಸಿಗಬೇಕು. ಆದರೆ, ಆತುರ ಸರಿಯಲ್ಲ ಎಂದು ಅಭಿಪ್ರಾಯ
ಪಟ್ಟಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ‘ತಪ್ಪಿತಸ್ಥರಿಗೆ 21 ದಿನಗಳಲ್ಲಿ ಶಿಕ್ಷೆ ವಿಧಿಸಲು ಸಾಧ್ಯವೇ’ ಎಂದು ಶನಿವಾರ ಇಲ್ಲಿ ಪ್ರಶ್ನಿಸಿದರು.

ಅಖಿಲ ಭಾರತ ವಕೀಲರ ಒಕ್ಕೂಟದ (ಎಐಎಲ್‌ಯು) 8ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ವಿಧಾನಸಭೆಯು ‘ದಿಶಾ’ ಮಸೂದೆಗೆ ಅನುಮೋದನೆ ನೀಡಿರುವ ಕ್ರಮವನ್ನು ಒರೆಗೆ ಹಚ್ಚಿದರು.

‘ಪ್ರಕರಣ ತ್ವರಿತವಾಗಿ ಇತ್ಯರ್ಥವಾಗಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕಾನೂನು ತಂದಿದೆ. ಪ್ರಕರಣ ನಡೆದ 21 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಸಾಕ್ಷಿ ಹೇಳುವವರನ್ನು ಸಂಗ್ರಹಿಸಿ ಚಾರ್ಜ್‌ಶೀಟ್‌ ಹಾಕುವುದೇ ಕಷ್ಟ. ಇಂಥದ್ದರಲ್ಲಿ ಶಿಕ್ಷೆ ಪ್ರಕಟಿಸಲು ಸಾಧ್ಯವೇ?’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

‘ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಪೊಲೀಸರು, ಎನ್‌ಕೌಂಟರ್‌ ಮಾಡಿ ನಾಲ್ವರನ್ನು ಮುಗಿಸಿದರು. ಇದನ್ನು ಸಮಾಜದ ಬಹುತೇಕರು ಬೆಂಬಲಿಸಿದರು. ಆದರೆ, ಪೊಲೀಸರಿಗೆ ಇಷ್ಟು ಧೈರ್ಯ ಬಂದಿದ್ದು ಎಲ್ಲಿಂದ’ ಎಂದು ಅವರು ಪ್ರಶ್ನಿಸಿದರು.

‘ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರಾ ವಿಳಂಬವಾಗುತ್ತಿದ್ದು, ಇದು ಬದಲಾಗಬೇಕಿದೆ. ಜನರಿಗೆ ತ್ವರಿತ ನ್ಯಾಯ ಸಿಗುವಂತೆ ನೋಡಿಕೊಂಡು ನ್ಯಾಯಾಂಗದ ಗೌರವವನ್ನು ಎತ್ತಿ ಹಿಡಿಯುವ ಜೊತೆಗೆ ನ್ಯಾಯಾಲಯಗಳ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಬೇಕು’ ಎಂದು ಹೇಳಿದರು.

‘ಒಂದು ಧರ್ಮ ಬಿಟ್ಟು ಕಾಯ್ದೆ ಜಾರಿ ಸರಿ ಅಲ್ಲ’

ಒಂದು ಧರ್ಮವನ್ನು ಹೊರಗಿಟ್ಟು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದು ಒಳಿತಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

‘ಮಾನವೀಯತೆಯ ದೃಷ್ಟಿಯಿಂದ ಇರುವಂಥ ಕಾಯ್ದೆ ಇದು. ಬೇರೆ ದೇಶಗಳಲ್ಲಿ ಜೀವಿಸಲು ಸಾಧ್ಯವಾಗದ ಜನರು ಭಾರತಕ್ಕೆ ಬಂದರೆ ಅವರಿಗೆ ಆಶ್ರಯ ನೀಡಲು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಒಂದು ಜಾತಿ ಅಥವಾ ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸಬಾರದು. ಎಲ್ಲ ಧರ್ಮದವರೂ ನಮ್ಮ ದೇಶದಲ್ಲಿ ಜೀವಿಸಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT