ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

Published 29 ಡಿಸೆಂಬರ್ 2023, 3:04 IST
Last Updated 29 ಡಿಸೆಂಬರ್ 2023, 3:04 IST
ಅಕ್ಷರ ಗಾತ್ರ

ನವದೆಹಲಿ: ಐವರು ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಗುರುವಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ, ಗೌಹಾಟಿ, ಅಲಹಾಬಾದ್ ಹಾಗೂ ಜಾರ್ಖಂಡ್‌ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕಮಾಡಲು ಶಿಫಾರಸು ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್ ಗವಾಯಿ ಕೊಲಿಜಿಯಂನ ಸದಸ್ಯರಾಗಿದ್ದಾರೆ.

ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಮನೀಂದ್ರ ಮೋಹನ್ ಶ್ರೀವಾಸ್ತವ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ನ್ಯಾ. ಶೀಲ್‌ ನಾಗು, ಗೌಹಾಟಿ ಹೈಕೋರ್ಟ್‌ಗೆ ನ್ಯಾ. ವಿಜಯ್ ಬಿಷ್ಣೋಯ್, ಅಲಹಾಬಾದ್ ಹೈಕೋರ್ಟ್‌ಗೆ ನ್ಯಾ. ಅರುಣ್ ಬನ್ಸಾಲಿ ಮತ್ತು ಜಾರ್ಖಂಡ್‌ ಹೈಕೋರ್ಟ್‌ಗೆ ನ್ಯಾ. ಬಿ.ಆರ್ ಸಾರಂಗಿ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಉನ್ನತೀಕರಿಸಿದ ಬಳಿಕ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಖಾಲಿಯಾಗಿದೆ.

ಛತ್ತೀಸಗಢ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾ. ಮನೀಂದ್ರ ಮೋಹನ್ ಶ್ರೀವಾಸ್ತವ ಅವರನ್ನು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.

ನ್ಯಾ. ಶೀಲ್ ನಾಗು ಅವರು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಎಲ್ಲಾ ರೀತಿಯಲ್ಲೂ ಯೋಗ್ಯರು ಮತ್ತು ಸೂಕ್ತರು ಎಂದು ಪರಿಗಣಿಸಲಾಗಿದೆ. ನ್ಯಾ. ಬಿಷ್ಣೋಯ್ ಅವರು ಉನ್ನತ ಮಟ್ಟದ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಕೊಲಿಜಿಯಂ ಹೇಳಿದೆ.

ನ್ಯಾ. ಬನ್ಸಾಲಿ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಸೇವೆಸಲ್ಲಿಸಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ಉತ್ತಮ ಕಾನೂನು ಚಾಣಾಕ್ಷತೆಯನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದ್ದರಿಂದ ಅವರು ದೇಶದ ಅತಿದೊಡ್ಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಸೂಕ್ತವಾದ ಆಯ್ಕೆ ಎಂದು ಅದು(ಕೊಲಿಜಿಯಂ) ಹೇಳಿದೆ.

ನ್ಯಾ. ಬಿ. ಆರ್ ಸಾರಂಗಿ ಅವರು 10 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ಪ್ರಕರಣಗಳ ವಿಲೇವಾರಿ ಮೂಲಕ ನ್ಯಾಯಾಂಗಕ್ಕೆ ನೀಡಿದ ಕೊಡುಗೆಯನ್ನು ಕೊಲಿಜಿಯಂ ಉಲ್ಲೇಖಿಸಿದೆ.

ಸಾರಂಗಿ ಅವರು ಜಾರ್ಖಂಡ್‌ನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಎಲ್ಲಾ ರೀತಿಯಲ್ಲೂ ಅರ್ಹರು ಮತ್ತು ಸೂಕ್ತರು ಎಂದು ಕೊಲಿಜಿಯಂ ಪರಿಗಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT