ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತಪ್ಪು ಒಪ್ಪಿಕೊಳ್ಳದ ರಾಹುಲ್‌: ಸುಪ್ರೀಂ ಕೋರ್ಟ್‌ ಗರಂ

ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲು ಅವಕಾಶ
Last Updated 30 ಏಪ್ರಿಲ್ 2019, 20:05 IST
ಅಕ್ಷರ ಗಾತ್ರ

ನವದೆಹಲಿ: ‘ಚೌಕಿದಾರನೇ ಕಳ್ಳ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂಬ ಹೇಳಿಕೆ ಕುರಿತು ನೇರವಾಗಿ ತಪ್ಪೊಪ್ಪಿಕೊಳ್ಳದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಡೆ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ‘ಚೌಕಿದಾರನೇ ಕಳ್ಳ’ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ. ಹೀಗಾಗಿ, ರಾಹುಲ್‌ ಗಾಂಧಿ ಸೋಮವಾರ ಪ್ರಮಾಣ ಪತ್ರ ಸಲ್ಲಿಸಿದ್ದರು.

‘ನೀವು ತಪ್ಪು ಮಾಡಿದ್ದರೆ, ಒಪ್ಪಿಕೊಳ್ಳಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಹೇಳಿತು.

‘ಪ್ರಮಾಣಪತ್ರದಲ್ಲಿನ ನಿಮ್ಮ ಸಮರ್ಥನೆಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗುತ್ತಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ರಾಜಕೀಯ ನಿಲುವುಗಳು ನಮಗೆ ಸಂಬಂಧವಿಲ್ಲದ್ದು’ ಎಂದು ಪೀಠ ಹೇಳಿತು.

‘ನಮ್ಮ ತೀರ್ಪಿನಲ್ಲಿ ಆ ರೀತಿ ಎಲ್ಲಿ ಹೇಳಿದ್ದೇವೆ? ಎಲ್ಲ ಹೇಳಿಕೆಗಳನ್ನು ಪೀಠವೇ ಹೇಳಿದೆ ಎಂದು ಹೇಗೆ ಹೇಳುತ್ತೀರಿ’ ಎಂದು ಪ್ರಶ್ನಿಸಿದರು.

‘ಪ್ರಮಾಣಪತ್ರದಲ್ಲಿ ಕಂಸದಲ್ಲಿ ಬಳಸಿರುವ ‘ವಿಷಾದ’ ಪದದ ಅರ್ಥವೇನು?’ ಎಂದು ರಾಹುಲ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಘ್ವಿ ಅವರು, ‘ವಿಷಾದವು ಕ್ಷಮೆ ಇದ್ದಂತೆ. ಶಬ್ದಕೋಶದಲ್ಲೂ ನಾನು ಪರಿಶೀಲಿಸಿದ್ದೇನೆ. ಇನ್ನೂ ಉತ್ತಮವಾದ ಹಾಗೂ ಸ್ಪಷ್ಟವಾದ ಪ್ರಮಾಣಪತ್ರ ಸಲ್ಲಿಸಲು ಮುಂದಿನ ಸೋಮವಾರದವರೆಗೆ ಅವಕಾಶ ನೀಡಬೇಕು’ ಎಂದು ಕೋರಿದರು. ಈ ಮೂಲಕ ಪ್ರಾಮಾಣಿಕವಾಗಿ ರಾಹುಲ್‌ ಗಾಂಧಿ ಅವರು ನ್ಯಾಯಾಲಯದ ಕ್ಷಮೆ ಕೋರುತ್ತಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದರು.

ಪ್ರಮಾಣಪತ್ರದಲ್ಲಿನ ಅಂಶಗಳ ಬಗ್ಗೆಯೂ ಕಿಡಿಕಾರಿದ ಪೀಠವು, ‘ಈ ವಿಷಯವನ್ನು ಇನ್ನೆಷ್ಟು ದಿನಗಳವರೆಗೂ ಕೊಂಡೊಯ್ಯುತ್ತೀರಿ’ ಎಂದು ಪೀಠ ಪ್ರಶ್ನಿಸಿತು. ಈಗಿರುವ ಪ್ರಮಾಣಪತ್ರದಲ್ಲಿನ ಗೊಂದಲಗಳನ್ನು ನಿವಾರಿಸಲು ಇನ್ನೊಂದು ಸ್ಪಷ್ಟವಾದ ಪ್ರಮಾಣಪತ್ರ ಸಲ್ಲಿಸುವಂತೆ ಸಿಂಘ್ವಿ ಅವರಿಗೆ ಪೀಠವು ಸೂಚಿಸಿತು.

ಮೀನಾಕ್ಷಿ ಲೇಖಿ ಪರ ವಕೀಲರಾದ ಮುಕುಲ್‌ ರೋಹಟಗಿ ಮತ್ತು ರುಚಿ ಕೊಹ್ಲಿ ಅವರು ಪ್ರಮಾಣಪತ್ರದಲ್ಲಿನ ಅಂಶಗಳನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವುದಾಗಿ ಸಿಂಘ್ವಿ ಪೀಠಕ್ಕೆ ತಿಳಿಸಿದರು.

ರಾಹುಲ್‌ ಅವರ ಪ್ರಮಾಣಪತ್ರವನ್ನು ಲೇಖಿ ಪರ ವಕೀಲರಿಗೆ ಓದಲು ಸೂಚಿಸಿದ ಪೀಠವು, ‘ನನ್ನನ್ನು ತಪ್ಪು ದಾರಿಗೆಳೆಯಲಾಯಿತು. ಉದ್ದೇಶಪೂರ್ವಕ ಹೇಳಿಕೆ ನೀಡಿಲ್ಲ ಎಂದು ಒಂದು ಪುಟದಲ್ಲಿ ಹೇಳಿದ್ದೀರಿ. ಇನ್ನೊಂದೆಡೆ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳುತ್ತೀರಿ. ಪ್ರಮಾಣಪತ್ರದಲ್ಲೇ ವ್ಯತಿರಿಕ್ತ ಹೇಳಿಕೆಗಳನ್ನು ಉಲ್ಲೇಖಿಸಿದ್ದೀರಿ’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ ಅವರು, ‘ತಪ್ಪು ಮಾಡಿರುವುದನ್ನು ರಾಹುಲ್‌ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಕ್ಷಮೆ ಸಹ ಕೋರಿದ್ದಾರೆ ಎನ್ನುವುದು ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ತಪ್ಪು ಒಪ್ಪಿಕೊಂಡಿದ್ದೇನೆ ಮತ್ತು ತಪ್ಪು ತೋರಿಸುತ್ತಿದ್ದೇನೆ. ನನ್ನ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು’ ಎಂದು ಸಿಂಘ್ವಿ ಪ್ರತಿಪಾದಿಸಿದರು.‘ನಿಮ್ಮೆಲ್ಲರ ಬಗ್ಗೆ ತಿಳಿದುಕೊಳ್ಳುವ ಉದ್ದೇಶ ನನಗಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಪ್ರತಿಕ್ರಿಯಿಸಿದರು.

***

ಕಾಂಗ್ರೆಸ್‌ ಅಧ್ಯಕ್ಷರು ಒಂದು ಹಂತದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ನಿಂದನೆಯ ಹೇಳಿಕೆ ನೀಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.

- ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT