ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಹಿತಿ ವರದಿ ಆಧರಿಸಿ ನೂತನ ಕಾಯ್ದೆ’

ಬಡ್ತಿ ಮೀಸಲಾತಿ; ಬಿ.ಕೆ. ಪವಿತ್ರ ಪ್ರಕರಣ
Last Updated 29 ನವೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಪರಿಷ್ಕೃತ ಬಡ್ತಿ ಮೀಸಲಾತಿ ಕಾಯ್ದೆಯನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡಿದೆ.ಗುರುವಾರ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ಅವರು ವಾದ ಮಂಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಿಂದುಳಿದಿರುವಿಕೆ, ಪ್ರಾತಿನಿಧ್ಯದ ಕೊರತೆ ಮತ್ತು ದಕ್ಷತೆ ಕುರಿತಾಗಿನ ಮಾಹಿತಿ ಸಂಗ್ರಹಿಸಲೆಂದೇ ಸರ್ಕಾರ ರಚಿಸಿದ್ದ ರತ್ನಪ್ರಭಾ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಈ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ನೇತೃತ್ವದ ಕಾನೂನು ಆಯೋಗ ಅಂಗೀಕರಿಸಿದೆ. ವರದಿ ಆಧರಿಸಿಯೇ ನೂತನ ಕಾಯ್ದೆ ರೂಪಿಸಲಾಗಿದೆ ಎಂದು ವಿವರಿಸಿದರು.

ಬಡೆಪ್ಪನವರ್‌ ಪ್ರಕರಣದ ತೀರ್ಪಿನ ಅನ್ವಯ ತತ್ಪರಿಣಾಮ ಜ್ಯೇಷ್ಠತೆಯನ್ನು ಮುಂದುವರಿಸಲೂ ನಿರ್ಧರಿಸಲಾಗಿದೆ. ಸಂವಿಧಾನದ ತಿದ್ದುಪಡಿ ವೇಳೆ ಅಳವಡಿಸಿದ್ದ ಅಂಶಗಳ ಪ್ರಕಾರವೇ ನೂತನ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇಂದಿರಾ ಸಹಾನಿ, ಎಂ.ನಾಗರಾಜ್‌ ಹಾಗೂ 2017ರ ಬಿ.ಕೆ. ಪವಿತ್ರ ಪ್ರಕರಣಗಳ ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲಿ ಕೆನೆಪದರದ ತತ್ವದ ಪ್ರಸ್ತಾಪವಿಲ್ಲ. ಹಾಗಾಗಿ, ನೂತನ ಕಾಯ್ದೆಯಲ್ಲಿ ಕೆನೆಪದರದ ತತ್ವವನ್ನು ಅಳವಡಿಸಿಕೊಳ್ಳಲು ಆಗದು ಎಂದು ಅವರು ತಿಳಿಸಿದರು.

‘ಸೇವಾ ಜ್ಯೇಷ್ಠತೆಯು ನಾಗರಿಕ ಹಕ್ಕೇ ವಿನಾ ಮೂಲಭೂತ ಹಕ್ಕಲ್ಲ’ ಎಂಬ ಅಂಶದ ಕುರಿತು 2017ರ ಬಿ.ಕೆ. ಪವಿತ್ರ ಪ್ರಕರಣದ ವಿಚಾರಣೆಯ ವೇಳೆಯೇ ಸ್ಪಷ್ಟಪಡಿಸಲಾಗಿದೆ. ನೂತನ ಕಾಯ್ದೆ ರೂಪಿಸುವಾಗಲೂ ಸರ್ಕಾರ ಅದಕ್ಕೆ ಬದ್ಧವಾಗಿದೆ ಎಂದು ಪಾಟೀಲ ಒತ್ತಿ ಹೇಳಿದರು.

ನೇಮಕಾತಿಗೆ ಕೆನೆಪದರ: ಮೀಸಲಾತಿ ಅಡಿ ಸರ್ಕಾರಿ ಹುದ್ದೆಗೆ ನೇಮಕವಾಗುವ ಸಂದರ್ಭದಲ್ಲಿ ಕೆನೆಪದರದ ತತ್ವ ಅನ್ವಯವಾಗಬೇಕೇ ವಿನಾ, ಬಡ್ತಿ ಪಡೆಯುವಾಗ ಅಲ್ಲ ಎಂದು ಬಸವಪ್ರಭು ಪಾಟೀಲ ವಿಚಾರಣೆ ವೇಳೆ ಪ್ರತಿಪಾದಿಸಿದರು.

ಎಂ.ನಾಗರಾಜ್‌ ಹಾಗೂ ಜರ್ನೇಲ್‌ ಸಿಂಗ್‌ ಪ್ರಕರಣದಲ್ಲಿ ಇತ್ತೀಚೆಗೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠವು ಕೆನೆಪದರ ತತ್ವದ ಕುರಿತು ಪ್ರಸ್ತಾಪಿಸಿರುವುದು ಈ ಅಂಶದ ಮೇಲೆ ಬೆಳಕು ಚೆಲ್ಲಿದೆ ಎಂದು ಅವರು ಹೇಳಿದರು.

‘ಬಡ್ತಿ ಮೀಸಲಾತಿ ವೇಳೆ ಕೆನೆಪದರದ ತತ್ವ ಅನ್ವಯವಾಗಬಾರದು ಎಂದಾದಲ್ಲಿ ನೇಮಕಾತಿಯ ವೇಳೆ ಈ ತತ್ವ ಅನ್ವಯವಾಗುತ್ತಿದೆಯೇ’ ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ.ಚಂದ್ರಚೂಡ್‌ ಪ್ರಶ್ನಿಸಿದರು.

ನೇಮಕಾತಿಯ ವೇಳೆ ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಸಮುದಾಯದವರ ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಕೆನೆಪದರ ತತ್ವವನ್ನು ಪರಿಗಣಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ನೇಮಕಾತಿ ವೇಳೆ ಈ ತತ್ವವನ್ನು ಅಳವಡಿಸುವುದಕ್ಕೆ ಸಾಮಾಜಿಕವಾಗಿ ಹಿಂದುಳಿದಿರುವಿಕೆ ಹಾಗೂ ಅಸ್ಪೃಶ್ಯತೆಯ ಅಂಶವನ್ನು ಪರಿಗಣಿಸಲಾಗುತ್ತಿದೆ ಎಂದು ಪಾಟೀಲ ವಿವರಿಸಿದರು.

ಚರ್ಚೆ ಅಗತ್ಯ: ‘ಮೀಸಲಾತಿ ಸೌಲಭ್ಯ ಪಡೆದು ಉನ್ನತ ಹುದ್ದೆಗಳಿಗೆ ನೇಮಕಗೊಳ್ಳುವ ಪರಿಶಿಷ್ಟ ವರ್ಗದ ಅಧಿಕಾರಿಗಳ ಮಕ್ಕಳು ಶೋಷಣೆ ಮತ್ತು ಅಸ್ಪೃಶ್ಯತೆ ಮುಕ್ತ ಸಾಮಾಜಿಕ ಪರಿಸರದಲ್ಲಿ ಬೆಳೆಯುವುವದರಿಂದ ಅವರಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡುವಾಗ ಕೆನೆಪದರದ ತತ್ವವನ್ನು ಪರಿಗಣಿಸದಿರುವುದು ಸೂಕ್ತವೇ’ ಎಂದೂ ನ್ಯಾಯಪೀಠ ಪ್ರಶ್ನಿಸಿದಾಗ, ಈ ಕುರಿತು ವಿಸ್ತೃತ ಚರ್ಚೆ ಅಗತ್ಯವಿದೆ ಎಂದು ಪಾಟೀಲ ಹೇಳಿದರು. ಸರ್ಕಾರಗಳು ಈ ಅಂಶದ ಬಗ್ಗೆ ಚಿಂತನೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಲಾಗಿದ್ದು, ರಾಜ್ಯ ಸರ್ಕಾರದ ವಾದ ಮುಂದುವರಿಯಲಿದೆ.

‘ನಾಡೋಜ ಎಂದರೆ ಏನು?’
ನವದೆಹಲಿ:
ರತ್ನಪ್ರಭಾ ಸಮಿತಿ ಸಲ್ಲಿಸಿರುವ ವರದಿಯನ್ನು ‘ನಾಡೋಜ’ ಎಸ್‌.ಆರ್‌. ನಾಯಕ್‌ ನೇತೃತ್ವದ ರಾಜ್ಯ ಕಾನೂನು ಆಯೋಗ ಅಂಗೀಕರಿಸಿದೆ ಎಂದು ಪಾಟೀಲ ಅವರು ನ್ಯಾಯಪೀಠಕ್ಕೆ ತಿಳಿಸುತ್ತಿದ್ದಂತೆಯೇ, ‘ನಾಡೋಜ ಎಂದರೆ ಏನು’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಶ್ನಿಸಿದರು.

ನಾಡೋಜವು ಕರ್ನಾಟಕದ ವಿಶ್ವವಿದ್ಯಾಲಯವೊಂದು ನೀಡುವ ಗೌರವ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಗೌರವ ಡಾಕ್ಟರೇಟ್‌ ಪದವಿಗೆ ನಾಡೋಜ ಎಂದು ನಾಮಕರಣ ಮಾಡಿದೆ ಎಂದು ಪಾಟೀಲ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT