ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕ ಅಸಿಂಧು ಆದೇಶಕ್ಕೆ ತಡೆ

Published 7 ಮೇ 2024, 16:23 IST
Last Updated 7 ಮೇ 2024, 16:23 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಒಟ್ಟು 25,753 ಹುದ್ದೆಗಳಿಗೆ ನಡೆದ ಶಿಕ್ಷಕರು ಹಾಗೂ ಶಿಕ್ಷಕೇತರರ ನೇಮಕಾತಿ ಪ್ರಕ್ರಿಯೆಯನ್ನು ಅಸಿಂಧುಗೊಳಿಸಿದ್ದ ಕಲ್ಕತ್ತ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ.

ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಯಬಹುದು, ರಾಜ್ಯ ಸಂಪುಟದ ಸದಸ್ಯರನ್ನೂ ವಿಚಾರಣೆಗೆ ಗುರಿಪಡಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ಹೇಳಿದೆ.

ಆದರೆ ತನಿಖೆಯ ಸಂದರ್ಭದಲ್ಲಿ ಬಂಧಿಸುವ ಕೆಲಸ ಬೇಡ ಎಂದು ಪೀಠವು ಸಿಬಿಐಗೆ ಸೂಚನೆ ನೀಡಿದೆ.

ಇದಕ್ಕೂ ಮೊದಲು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠವು, ‘ನೇಮಕಾತಿಯಲ್ಲಿನ ಹಗರಣವು ಸಮಾಜವನ್ನು ಬಾಧಿಸುವಂತಹ ಆರ್ಥಿಕ ಅಪರಾಧ’ ಎಂದು ಹೇಳಿತ್ತು. ನೇಮಕಾತಿಗಳಿಗೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳನ್ನು ಕಾಪಿಡುವ ಹೊಣೆಯು ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಹೇಳಿತ್ತು.

ಸರ್ಕಾರದ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಹುದ್ದೆಗಳಿಗೆ ನಡೆದ ನೇಮಕಾತಿಯನ್ನು ಕಲ್ಕತ್ತ ಹೈಕೋರ್ಟ್‌ ಏಪ್ರಿಲ್‌ 22ರಂದು ಅಸಿಂಧುಗೊಳಿಸಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸುತ್ತಿದೆ.

‘ಸರ್ಕಾರಿ ಉದ್ಯೋಗಗಳ ಸಂಖ್ಯೆ ಬಹಳ ಕಡಿಮೆ ಇದೆ... ಜನರು ಇರಿಸಿರುವ ವಿಶ್ವಾಸ ಕೊನೆಗೊಂಡರೆ ಇನ್ನೇನೂ ಉಳಿದುಕೊಳ್ಳುವುದಿಲ್ಲ. ಇದು ಇಡೀ ಸಮಾಜಕ್ಕೆ ಮಾಡಿದ ವಂಚನೆ. ಇಂದು ಸರ್ಕಾರಿ ಹುದ್ದೆಗಳು ಬಹಳ ಕಡಿಮೆ ಇವೆ. ಎಲ್ಲರೂ ಸಾಮಾಜಿಕ ಚಲನೆಯ ಉದ್ದೇಶದಿಂದ ಅವುಗಳತ್ತ ಗಮನ ಇಟ್ಟಿರುತ್ತಾರೆ. ನೇಮಕಾತಿಗಳು ಕಳಂಕಿತವಾದರೆ ವ್ಯವಸ್ಥೆಯಲ್ಲಿ ಇನ್ನೇನು ಉಳಿದುಕೊಳ್ಳುತ್ತದೆ? ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ, ಇದನ್ನು ನೀವು ಹೇಗೆ ನಿಭಾಯಿಸುತ್ತೀರಿ’ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದರು.

ಅಧಿಕಾರಿಗಳು ಅಗತ್ಯ ದತ್ತಾಂಶವನ್ನು ಕಾಪಿಟ್ಟುಕೊಂಡಿದ್ದಾರೆ ಎಂಬುದನ್ನು ತೋರಿಸಲು ಸರ್ಕಾರದ ಬಳಿ ಏನೂ ಇಲ್ಲ ಎಂದು ಪೀಠವು ಹೇಳಿತು. ‘ದತ್ತಾಂಶ ಇಲ್ಲ ಎಂಬುದು ಸ್ಪಷ್ಟವಾಗಿದೆ...’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT