ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್: ಸಾತ್ವಿಕ್–ಚಿರಾಗ್‌ಗೆ ಥಾಯ್ಲೆಂಡ್‌ ಓಪನ್ ಪ್ರಶಸ್ತಿ

Published 19 ಮೇ 2024, 15:55 IST
Last Updated 19 ಮೇ 2024, 15:55 IST
ಅಕ್ಷರ ಗಾತ್ರ

ಬ್ಯಾಂಕಾಕ್: ವಿಶ್ವದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾನುವಾರ ಥಾ‌ಯ್ಲೆಂಡ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಜಯಿಸಿತು.

ಸಾತ್ವಿಕ್–ಚಿರಾಗ್ ಜೋಡಿಯು 21–15, 21–15ರಲ್ಲಿ ನೇರ ಗೇಮಗಳಿಂದ ಚೆನ್ ಬೋ ಯಾಂಗ್–ಲಿಯು ಯಿ (ಚೀನಾ) ಜೋಡಿಯನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್  ಪದಕ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ.

ಮಾರ್ಚ್‌ನಲ್ಲಿ ಫ್ರೆಂಚ್ ಓಪನ್ ಸೂಪರ್ 750 ಟೂರ್ನಿ ಜಯಗಳಿಸಿದ ನಂತರ ಏಷ್ಯನ್ ಗೇಮ್ಸ್ ಚಾಂಪಿಯನ್‌ರಿಗೆ ಇದು ಋತುವಿನ ಎರಡನೇ ಪ್ರಶಸ್ತಿಯಾಗಿದೆ. ಈ ಜೋಡಿಯು ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಸೂಪರ್ 750 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.

ಸಾತ್ವಿಕ್ ಮತ್ತು ಚಿರಾಗ್ ಅವರ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿ ಈ ಪ್ರಶಸ್ತಿ ಬಂದಿದೆ. ಈ ಜೋಡಿಯು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತಿತ್ತು. ನಂತರ ಸಾತ್ವಿಕ್ ಗಾಯದಿಂದಾಗಿ ಏಷ್ಯಾ ಚಾಂಪಿಯನ್‌ಷಿಪ್‌ನಿಂದ ಹೊರಗುಳಿಯಬೇಕಾಯಿತು. ಥಾಮಸ್ ಕಪ್ ಅಭಿಯಾನವೂ ಹೆಚ್ಚು ಫಲಪ್ರದವಾಗಲಿಲ್ಲ. 

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸಾತ್ವಿಕ್–ಚಿರಾಗ್ ಜೋಡಿ ಲು ಮಿಂಗ್–ಚೆ ಮತ್ತು ಟ್ಯಾಂಗ್ ಕೈ–ವಿ (ಚೀನಾ ತೈಪೆ) ಜೋಡಿಯನ್ನು ನೇರ ಗೇಮ್‌ಗಳಿಂದ ಸೋಲಿಸಿತು.

ಸಾತ್ವಿಕ್ ಮತ್ತು ಚಿರಾಗ್ 5-1ರ ಮುನ್ನಡೆ ಸಾಧಿಸುವ ಮೂಲಕ ಉತ್ತಮ ಆರಂಭ ನೀಡಿದರು. ಬಳಿಕ ಪುಟಿದೆದ್ದ ಚೀನಾ ಜೋಡಿ 10–7ರಲ್ಲಿ ಮುನ್ನಡೆ ಸಾಧಿಸಿತು. ಮರು ಹೋರಾಟ ನಡೆಸಿದ ಭಾರತದ ಜೋಡಿ ಆಕರ್ಷಕ ಹೊಡೆತಗಳ ಮೂಲಕ ಲೀಡ್ ಹೆಚ್ಚಿಸಿ, ಎದುರಾಳಿಗೆ ಅವಕಾಶ ನೀಡದೆ ಗೇಮ್ ಗೆದ್ದುಕೊಂಡಿತು.  

‘ಇದು ನಮಗೆ ಅದೃಷ್ಟದ ಟೂರ್ನಿಯಾಗಿದೆ. 2019ರಲ್ಲಿ ಈ ಪ್ರಶಸ್ತಿ ಜಯಸಿದ್ದೆವು. ಮತ್ತೆ ಈಗ ಗೆದ್ದಿದ್ದೇವೆ. ಮುಂಬರುವ ಪ್ರಮುಖ ಟೂರ್ನಿಗಳಿಗೆ ಇದು ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದು ಆಶಿಸುತ್ತೇವೆ’ ಎಂದು ಸಾತ್ವಿಕ್ ಗೆಲುವಿನ ನಂತರ ಹೇಳಿದರು.

‘ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಉತ್ತಮ ಆಟವಾಡಿ ಪದಕ ಗೆಲ್ಲುತ್ತೇವೆ’ ಎಂದು ಚಿರಾಗ್ ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT