ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಐಬಿ ಫ್ಯಾಕ್ಟ್‌ಚೆಕ್ ಘಟಕ ಸ್ಥಾಪನೆ: ಕೇಂದ್ರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆ

Published 21 ಮಾರ್ಚ್ 2024, 11:07 IST
Last Updated 21 ಮಾರ್ಚ್ 2024, 11:07 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಸುದ್ದಿಗಳ ಪ್ರಸಾರವನ್ನು ಪತ್ತೆ ಮಾಡುವ ಉದ್ದೇಶದಿಂದ ಪ್ರೆಸ್ ಇನ್ಫರ್ಮೇಶನ್ ಬ್ಯೂರೊ(ಪಿಐಬಿ) ಅಡಿ ಫ್ಯಾಕ್ಟ್‌ಚೆಕ್ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಫ್ಯಾಕ್ಟ್‌ಚೆಕ್ ಘಟಕ ಸ್ಥಾಪನೆಗೆ ಇದೇ 20ರಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯವು 2021ರ ಐಟಿ ನಿಯಮಗಳ ಅಡಿ ಅಧಿಸೂಚನೆ ಹೊರಡಿಸಿತ್ತು.

ತಿದ್ದುಪಡಿಯಾಗಿರುವ ಐಟಿ ನಿಯಮಗಳ ಅಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಪತ್ತೆಮಾಡಲು ಫ್ಯಾಕ್ಟ್‌ಚೆಕ್ ಘಟಕ ಸ್ಥಾಪನೆಗೆ ಹೊರಡಿಸಿದ್ದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದ ಮಾರ್ಚ್ 11ರ ಬಾಂಬೆ ಹೈಕೋರ್ಟ್ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತಳ್ಳಿಹಾಕಿದೆ.

ಸಂವಿಧಾನದ ಸೆಕ್ಷನ್ 19(1)(1) ಅಡಿಯ ಹಲವು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿರ್ಣಯವನ್ನು ಗಮನಿಸಿದ್ದೇವೆ ಎಂದು ಪೀಠ ಹೇಳಿದೆ.

‘ಫ್ಯಾಕ್ಟ್‌ಚೆಕ್ ಘಟಕ ಸ್ಥಾಪನೆ ಕುರಿತಾದ ಮಾರ್ಚ್ 20ರ ಅಧಿಸೂಚನೆಗೆ ತಡೆ ನೀಡಬೇಕಿದೆ. ಐಟಿ(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮ 2021ರ ಅಡಿಯ ನಿಯಮ 3(1)(ಬಿ)(5) ಸಿಂಧುತ್ವ ಕುರಿತಾಗಿ ಗಂಭೀರ ಸಾಂವಿಧಾನಿಕ ಪ್ರಶ್ನೆಗಳಿವೆ. ಈ ನಿಯಮದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪರಿಣಾಮವನ್ನೂ ಹೈಕೋರ್ಟ್ ವಿಶ್ಲೇಷಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರದ ಕುರಿತಾದ ಎಲ್ಲ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಗಳನ್ನು ಪತ್ತೆ ಮಾಡಲು ಫ್ಯಾಕ್ಟ್‌ಚೆಕ್ ಘಟಕವು ನೋಡಲ್ ಏಜೆನ್ಸಿಯಾಗಿರಲಿದೆ ಎಂದು ಕೇಂದ್ರ ಹೇಳಿತ್ತು.

ಫ್ಯಾಕ್ಟ್‌ಚೆಕ್ ಘಟಕ ಸ್ತಾಪನೆಯ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಕೆಲ ದಿನಗಳ ಬಳಿಕ ಅಧಿಸೂಚನೆ ಹೊರಬಿದ್ದಿತ್ತು.

ಇದನ್ನು ಪ್ರಶ್ನಿಸಿ ಹಾಸ್ಯ ನಟ ಕುನಾಲ್ ಕಮ್ರಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT