ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪ್ರಮಾಣಪತ್ರ ಅಕ್ರಮ ಪ್ರಕರಣ: ಅರ್ಜಿಗಳನ್ನು ವರ್ಗಾಯಿಸಿದ ಸುಪ್ರೀಂ ಕೋರ್ಟ್

Published 29 ಜನವರಿ 2024, 16:09 IST
Last Updated 29 ಜನವರಿ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್‌ ಪ್ರವೇಶಾತಿಗೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಇರುವ ಎಲ್ಲ ಅರ್ಜಿಗಳನ್ನೂ ಸುಪ್ರಿಂ ಕೋರ್ಟ್‌ ತನ್ನಲ್ಲಿಗೆ ವರ್ಗಾಯಿಸಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಪೀಠವು ಸೋಮವಾರ ಈ ನಿರ್ಧಾರ ತೆಗೆದುಕೊಂಡಿದೆ. ಅರ್ಜಿಗಳನ್ನು ಮೂರು ವಾರಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿಯೂ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯ ಕಾಂತ್ ಮತ್ತು ಅನಿರುದ್ಧ ಬೋಸ್ ಅವರೂ ಈ ಪೀಠದಲ್ಲಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ನೀಡಿದ್ದ ಆದೇಶಗಳಿಗೆ ಸುಪ್ರೀಂ ಕೋರ್ಟ್‌ ಶನಿವಾರ ತಡೆ ನೀಡಿತ್ತು. ಶನಿವಾರ ಕೋರ್ಟ್‌ ಕಲಾಪ ಇಲ್ಲದಿದ್ದರೂ, ಈ ಪ್ರಕರಣದ ವಿಚಾರಣೆಗಾಗಿ ಪೀಠವು ವಿಶೇಷ ಕಲಾಪ ನಡೆಸಿತ್ತು.

ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇದ್ದ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು, ಮೀಸಲಾತಿ ಪ್ರವರ್ಗಗಳ ಅಡಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ದೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಸಿಬಿಐ ತನಿಖೆಗೆ ಬುಧವಾರ ಆದೇಶಿಸಿತ್ತು.

ಪಶ್ಚಿಮ ಬಂಗಾಳ ಸರ್ಕಾರವು ಗುರುವಾರ, ನ್ಯಾಯಮೂರ್ತಿಗಳಾದ ಸೌಮೆನ್ ಸೆನ್ ಮತ್ತು ಉದಯಕುಮಾರ್ ಅವರು ಇದ್ದ ದ್ವಿಸದಸ್ಯ ಪೀಠದ ಎದುರು ಮೇಲ್ಮನವಿ ಸಲ್ಲಿಸಿತ್ತು. ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT