ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿನ ಶುಚಿತ್ವ ರಾಷ್ಟ್ರೀಯ ಏಕರೂಪ ನೀತಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಚಾಟಿ

Published 24 ಜುಲೈ 2023, 14:30 IST
Last Updated 24 ಜುಲೈ 2023, 14:30 IST
ಅಕ್ಷರ ಗಾತ್ರ

ನವದೆಹಲಿ: ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ವೇಳೆ ಶುಚಿತ್ವಕ್ಕಾಗಿ ರಾಷ್ಟ್ರೀಯ ಏಕರೂಪ ನೀತಿ ರೂಪಿಸುವ ಸಂಬಂಧ ಇದುವರೆಗೆ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಆಗಸ್ಟ್‌ 31ರ ಒಳಗೆ ಅಭಿಪ್ರಾಯ ತಿಳಿಸದಿದ್ದರೆ ಕಾನೂನಿನ ಬಲ ಪ್ರಯೋಗಿಸುವ ಎಚ್ಚರಿಕೆಯನ್ನೂ ನೀಡಿದೆ. 

ಶಾಲೆಗಳಲ್ಲಿ 6 ರಿಂದ 12 ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ಮತ್ತು ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಜಯಾ ಠಾಕೂರ್‌ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಮುಟ್ಟಿನ ಶುಚಿತ್ವಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಏಕರೂಪ ನೀತಿ ರೂಪಿಸಲು, ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ)ಸಿದ್ಧಪಡಿಸುವಂತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳಬೇಕಾದ ರಾಷ್ಟ್ರೀಯ ಮಾದರಿಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಏಪ್ರಿಲ್‌ 10ರಂದು ಸೂಚಿಸಿತ್ತು. ಈ ವಿಚಾರದಲ್ಲಿ ರಾಜ್ಯಗಳು ಕೇಂದ್ರಕ್ಕೆ ಅಭಿಪ್ರಾಯ ನೀಡಬೇಕು ಎಂದೂ ಹೇಳಿತ್ತು.  

ಆದರೆ, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳು ತಮ್ಮ ಅಭಿಪ್ರಾಯ ತಿಳಿಸಿಲ್ಲ ಎಂದು ಕೇಂದ್ರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌  ನೇತೃತ್ವದ ಪೀಠಕ್ಕೆ ಸೋಮವಾರ ತಿಳಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ರಾಜ್ಯಗಳಿಗೆ ಎಚ್ಚರಿಕೆ ರವಾನಿಸಿದೆ.  

ಆಗಸ್ಟ್‌ 31ರ ಒಳಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಬೇಕು. ಇದರ ನಂತರವೂ ಅಭಿಪ್ರಾಯ ದಾಖಲಿಸುವಲ್ಲಿ ವಿಫಲವಾದರೆ ನ್ಯಾಯಾಲಯವು ಕಾನೂನಿನ ಬಲ ಪ್ರಯೋಗಕ್ಕೆ ಮುಂದಾಗಲಿದೆ’ ಎಂದು  ಪೀಠವು ಹೇಳಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ನವೆಂಬರ್‌ ಎರಡನೇ ವಾರಕ್ಕೆ ಕೋರ್ಟ್‌ ನಿಗದಿ ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT