ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಸಿಗಬೇಕಿದ್ದ ಹಣ ತಡೆಹಿಡಿದ ಕೇಂದ್ರ: ಕಾಂಗ್ರೆಸ್ ಆರೋಪ

Published 25 ಮಾರ್ಚ್ 2024, 13:34 IST
Last Updated 25 ಮಾರ್ಚ್ 2024, 13:34 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಹಣವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಕರ್ನಾಟಕದ ಜನರು ತಮ್ಮ ಪ್ರಜಾತಾಂತ್ರಿಕ ಹಕ್ಕು ಚಲಾಯಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಚುನಾಯಿಸಿದ್ದಕ್ಕಾಗಿ ಈ ಬೆಲೆ ತೆರುವಂತೆ ಮಾಡಲಾಗಿದೆ ಎಂದು ಕಿಡಿಕಾರಿದೆ.

ರಾಜ್ಯಗಳ ಹಣಕಾಸಿನ ವ್ಯವಸ್ಥೆಯ ಉಸಿರುಗಟ್ಟಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಮಾಡುತ್ತಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳುಗಳನ್ನು ಹೇಳಿ ಜನರ ದಾರಿತಪ್ಪಿಸುವ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್‌’ ವೇದಿಕೆಯಲ್ಲಿ ಬರೆದ ನಂತರದಲ್ಲಿ ರಮೇಶ್ ಅವರು ಈ ಮಾತು ಹೇಳಿದ್ದಾರೆ.

‘15ನೇ ಹಣಕಾಸು ಆಯೋಗವು 2020–21ರ ಮಧ್ಯಂತರ ವರದಿಯಲ್ಲಿ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ವಿಶೇಷ ಅನುದಾನ ₹6,764 ಕೋಟಿ (ರಾಜ್ಯಕ್ಕೆ ₹5,495 ಕೋಟಿ, ತೆಲಂಗಾಣಕ್ಕೆ ₹723 ಕೋಟಿ ಹಾಗೂ ಮಿಜೋರಾಂಗೆ ₹546 ಕೋಟಿ) ನೀಡುವಂತೆ ಶಿಫಾರಸು ಮಾಡಿತ್ತು. ಇದು ನಮ್ಮ ಮೇಲಿನ ವಿಶೇಷ ಪ್ರೀತಿ ಇಲ್ಲವೇ ಔದಾರ್ಯದಿಂದ ಮಾಡಿರುವ ಶಿಫಾರಸುಗಳಲ್ಲ. ಇವೆಲ್ಲವೂ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯಕ್ಕೆ ನೀಡಿರುವ ಪರಿಹಾರ ಅಷ್ಟೆ’ ಎಂದು ಸಿದ್ದರಾಮಯ್ಯ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

15ನೇ ಹಣಕಾಸು ಆಯೋಗವು ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ₹6,000 ಕೋಟಿ ಶಿಫಾರಸು ಮಾಡಿತ್ತು, ಇದರಲ್ಲಿ ₹3,000 ಕೋಟಿಯನ್ನು ಜಲಮೂಲಗಳ ಸಂರಕ್ಷಣೆಗೆ ಹಾಗೂ ₹3,000 ಕೋಟಿಯನ್ನು ಬೆಂಗಳೂರಿನ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ನೀಡುವಂತೆ ಶಿಫಾರಸು ಮಾಡಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಎರಡು ಶಿಫಾರಸುಗಳನ್ನು ಒಪ್ಪಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿತು. ಆ ಮೂಲಕ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಪಾಲನ್ನು ನಿರಾಕರಿಸಲಾಯಿತು ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ನಿರ್ಮಲಾ ಅವರೇ, ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ವಿಶೇಷ ಅನುದಾನ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳುತ್ತಿಲ್ಲ. ಈ ಯೋಜನೆಗಳಿಗೆ ಬೇಕಿರುವ ಅನುದಾನವನ್ನು ಬಜೆಟ್‌ನಲ್ಲೇ ಮೀಸಲಿಟ್ಟಿದ್ದೇವೆ’ ಎಂದು ಕೂಡ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಬರೆದಿರುವುದನ್ನು ಟ್ಯಾಗ್ ಮಾಡಿರುವ ರಮೇಶ್ ಅವರು, ‘ಮೋದಿ ನೇತೃತ್ವದ ಸರ್ಕಾರ ಹಾಗೂ ಆದರ ರಿಮೋಟ್ ಕಂಟ್ರೋಲ್ ನಿಯಂತ್ರಿತ ಸಚಿವರು ಒಕ್ಕೂಟ ವ್ಯವಸ್ಥೆಯ ಆಶಯವನ್ನು ಉಲ್ಲಂಘಿಸಲು, ಸಾಂವಿಧಾನಿಕ ಸಂಸ್ಥೆಗಳ ಶಿಫಾರಸುಗಳನ್ನು ಬದಿಗೆ ತಳ್ಳಲು ಹಾಗೂ ರಾಜಕೀಯ ದ್ವೇಷಸಾಧನೆಗೆ ಎಲ್ಲ ಮಿತಿಗಳನ್ನೂ ಮೀರುವ ಕೆಲಸ ಮಾಡುತ್ತಾರೆ’ ಎಂದು ಆರೋಪಿಸಿದ್ದಾರೆ.

ಕರ್ನಾಟಕವು ತೆರಿಗೆ ನಿಧಿಗೆ ಪ್ರತಿವರ್ಷ ₹4.3 ಲಕ್ಷ ಕೋಟಿ ನೀಡುತ್ತಿದ್ದರೂ, ಕರ್ನಾಟಕದಿಂದಲೇ ರಾಜ್ಯಸಭೆ ಪ್ರವೇಶಿಸಿರುವ ನಿರ್ಮಲಾ ಅವರು ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಲ್ಲಬೇಕಿರುವ ಸರಿಸುಮಾರು ₹12 ಸಾವಿರ ಕೋಟಿ ಮೊತ್ತವನ್ನು ತಡೆಹಿಡಿದಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ರಾಜ್ಯಗಳಿಗೆ ನೀಡಬೇಕಿರುವ ತೆರಿಗೆ ಪಾಲನ್ನು ಕಡಿಮೆ ಮಾಡುವಂತೆ ಮೋದಿ ನೇತೃತ್ವದ ಸರ್ಕಾರವು 14ನೇ ಹಣಕಾಸು ಆಯೋಗವನ್ನು ಬೆದರಿಸುವ ಕೆಲಸ ಮಾಡಿತ್ತು ಎಂಬುದನ್ನು ನೀತಿ ಆಯೋಗದ ಅಧಿಕಾರಿಯೊಬ್ಬರು ಕೆಲವು ತಿಂಗಳುಗಳ ಹಿಂದೆ ಬಹಿರಂಗಪಡಿಸಿದ್ದರು ಎಂದು ಕೂಡ ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT