ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹತೆ ಅರ್ಜಿ ಇತ್ಯರ್ಥ ವಿಳಂಬ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ತರಾಟೆ

Published 13 ಅಕ್ಟೋಬರ್ 2023, 16:03 IST
Last Updated 13 ಅಕ್ಟೋಬರ್ 2023, 16:03 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಅವರ ಬಣದ ಶಾಸಕರ ಅನರ್ಹತೆ ಅರ್ಜಿಯನ್ನು ಇತ್ಯರ್ಥಪಡಿಸುವಲ್ಲಿ ವಿಳಂಬ ಮಾಡುತ್ತಿರುವ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ರಾಹುಲ್‌ ನರ್ವೆಕರ್‌ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ಅನರ್ಹತೆ ಪ್ರಕರಣವನ್ನು ಒಂದು ಪ್ರಹಸನವಾಗಿಸಬಾರದು. ಮುಂದಿನ ವಿಧಾನಸಭೆ ಚುನಾವಣೆ ವರಗೆ ಎಳೆದಾಡಿ, ಇಡೀ ಪ್ರಕ್ರಿಯೆಯು ವ್ಯರ್ಥವಾಗುವಂತೆ ಮಾಡಬಾರದು. ಅರ್ಜಿಯ ಇತ್ಯರ್ಥಕ್ಕೆ ಅಕ್ಟೋಬರ್ 17ರ ಒಳಗಾಗಿ ಸಮಯ ನಿಗದಿ ಮಾಡಿ ತಿಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತು.

‘ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ, ಸ್ಪೀಕರ್‌ಗೆ ನ್ಯಾಯಿಕ ಅಧಿಕಾರವಿದೆ. ಅವರು ನೀಡಿದ ತೀರ್ಪು ಈ ನ್ಯಾಯಾಲಯದ ವ್ಯಾ‍ಪ್ತಿಯಲ್ಲಿಯೇ ಇರುತ್ತದೆ. ಆತ್ಮವಿಶ್ವಾಸ ಮೂಡುವಂತೆ ನಾವು ನಡೆದುಕೊಳ್ಳಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿದೆ. 

‘ಸ್ಪೀಕರ್‌ ಅವರು ವಿಚಾರಣೆಗೆ ವೇಳಾಪಟ್ಟಿ ನಿಗದಿ ಮಾಡುವಂತೆ ನೀವು ತಿಳಿಸಬೇಕು. ನಮ್ಮ ಆದೇಶ ಪಾಲನೆ ಆಗುತ್ತಿಲ್ಲ ಎಂಬ ಕಳವಳ ನಮ್ಮಲ್ಲಿ ಇದೆ’ ಎಂದು ಪೀಠವು ಮೆಹ್ತಾ ಅವರಿಗೆ ಹೇಳಿತು. 

‘ಸಮಯದ ಬಗ್ಗೆ ನಮಗೆ ತೃಪ್ತಿಯಾಗದೇ ಹೋದರೆ, ಎರಡು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಬೇಕಾಗುತ್ತದೆ. ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದ ನಿರ್ಧಾರಗಳನ್ನು ಕೈಗೊಂಡಾಗ ನ್ಯಾಯಾಲಯವು ಮಧ್ಯಪ್ರವೇಶಿಸಲೇಬೇಕಾಗುತ್ತದೆ. ಈ ಅರ್ಜಿಯ ವಿಚಾರಣೆಯನ್ನು ಸೋಮವಾರ ಅಥವಾ ಮಂಗಳವಾರ ಮತ್ತೆ ನಡೆಸುತ್ತೇವೆ’ ಎಂದು ನ್ಯಾ. ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ಪೀಠ ತಿಳಿಸಿತು.  

ಶಿಂದೆ ಮತ್ತು ಇತರ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಇತ್ಯರ್ಥದ ವೇಳಾಪಟ್ಟಿಯನ್ನು ನಿಗದಿ ಮಾಡುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 18ರಂದು ಸೂಚಿಸಿತ್ತು.

ಬಂಡಾಯ ಶಾಸಕರ ಅನರ್ಹತೆಗಾಗಿ ಸ್ಪೀಕರ್‌ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಶೀಘ್ರ ಇತ್ಯರ್ಥಪಡಿಸಲು ನಿರ್ದೇಶನ ಕೋರಿ ಶಿವಸೇನಾ (ಉದ್ಧವ್‌ ಠಾಕ್ರೆ) ಬಣ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT