ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಪರಾಸಿ’ಗಳೂ ಮಾರ್ಗದರ್ಶನ ನೀಡುವಂತಾಗಿರುವುದು ಹಾಸ್ಯಾಸ್ಪದ- ಮನೀಶ್‌ ತಿವಾರಿ

ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಟೀಕೆ
Last Updated 27 ಆಗಸ್ಟ್ 2022, 16:04 IST
ಅಕ್ಷರ ಗಾತ್ರ

ನವದೆಹಲಿ: ‘ನಿನ್ನೆಯವರೆಗೂ ಕಾಂಗ್ರೆಸ್‌ ಮುಖಂಡರ ಜವಾನರಾಗಿದ್ದವರು (ಚಪರಾಸಿ) ಈಗ ಪಕ್ಷ ಸಂಘಟನೆ ಬಗ್ಗೆ ಮಾರ್ಗದರ್ಶನ ನೀಡುವಂತಾಗಿರುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಸಂಸದ ಮನೀಶ್‌ ತಿವಾರಿ ಶನಿವಾರ ಹೇಳಿದ್ದಾರೆ.

ಗುಲಾಂ ನಬಿ ಆಜಾದ್‌ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ನಂತರ ಅವರು ಪಕ್ಷದ ಆಂತರಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ್ದಾರೆ.

‘ವಾರ್ಡ್‌ಮಟ್ಟದ ಚುನಾವಣೆಗೇ ಸ್ಪರ್ಧಿಸುವ ಅರ್ಹತೆ ಇಲ್ಲದವರು, ಚುನಾವಣೆ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಪಕ್ಷದ 23 ಹಿರಿಯ ಮುಖಂಡರು ಕಾಂಗ್ರೆಸ್‌ನ ಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಎರಡು ವರ್ಷಗಳ ಹಿಂದೆಯೇ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದಾದ ನಂತರ ನಡೆದ ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷ ಸೋಲು ಕಂಡಿತ್ತು. ಸೋನಿಯಾ ಅವರ ನಿವಾಸದಲ್ಲಿ 2020ರ ಡಿಸೆಂಬರ್ 20ರಂದು ನಡೆದ ಸಭೆಯ ವೇಳೆ ಚರ್ಚಿಸಲಾದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪಕ್ಷಕ್ಕೆ ಇಂತಹ ಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ತಿಳಿಸಿದ್ದಾರೆ.

‘42 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಯಾವ ಪ್ರಮಾಣ ಪತ್ರದ ಅಗತ್ಯವೂ ಇಲ್ಲ. ನಾವು ಈ ಸಂಸ್ಥೆಯ (ಕಾಂಗ್ರೆಸ್‌) ಸದಸ್ಯರೇ ಹೊರತು ಬಾಡಿಗೆದಾರರಲ್ಲ. ಈ ಮಾತನ್ನು ಹಿಂದೆಯೂ ಹೇಳಿದ್ದೇನೆ’ ಎಂದಿದ್ದಾರೆ.

ಕೊನೆಗೂ ಗುಲಾಂ ಸ್ವತಂತ್ರರಾಗಿದ್ದಾರೆ: ಸಿಂಧಿಯಾ

ಗ್ವಾಲಿಯರ್‌ ವರದಿ: ‘ಹಲವು ವರ್ಷಗಳ ಹಿಂದೆಯೇ ಕಾಂಗ್ರೆಸ್‌ನ ಆಂತರಿಕ ಸ್ಥಿತಿ ಬಿಗಡಾಯಿಸಿತ್ತು. ಕೊನೆಗೂ ಆ ಪಕ್ಷ ತೊರೆಯುವ ಮೂಲಕ ಗುಲಾಂ ನಬಿ ಆಜಾದ್‌ ಸ್ವತಂತ್ರರಾಗಿದ್ದಾರೆ’ ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.

‘ಸೋಲಿಗೆ ಒಬ್ಬರನ್ನೇ ಹೊಣೆಯಾಗಿಸುವುದು ತಪ್ಪು’

ನವದೆಹಲಿ (ಪಿಟಿಐ):‘ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಒಬ್ಬರನ್ನೇ ಹೊಣೆ ಮಾಡುವುದು ತಪ್ಪು’ ಎಂದು ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆ ಸೋಲಿಗೆ ರಾಹಲ್‌ ಗಾಂಧಿಯೇ ಕಾರಣ ಎಂದು ಆಜಾದ್‌ ದೂರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್‌, ‘ಆಜಾದ್‌ ಸೇರಿದಂತೆ ಕಾಂಗ್ರೆಸ್‌ನಲ್ಲಿದ್ದವರೆಲ್ಲರೂ ಯುಪಿಎ ಸರ್ಕಾರದ ಭಾಗವಾಗಿದ್ದರು. ಹೀಗಿರುವಾಗ ಚುನಾವಣೆ ಸೋಲಿಗೆ ಒಬ್ಬರತ್ತ ಬೊಟ್ಟು ಮಾಡುವುದು ತಪ್ಪು’ ಎಂದಿದ್ದಾರೆ.

‘ಆಜಾದ್‌ ಅವರು 50 ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಬಿಜೆಪಿ ದುರಾಡಳಿತದ ವಿರುದ್ಧ ಹೋರಾಡುವ ಸಮಯದಲ್ಲಿ ಅವರು ಪಕ್ಷ ತ್ಯಜಿಸಿದ್ದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT