ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ: ಎನ್‌ಕೌಂಟರ್‌ನಲ್ಲಿ 10 ನಕ್ಸಲರ ಹತ್ಯೆ

Published 30 ಏಪ್ರಿಲ್ 2024, 7:15 IST
Last Updated 30 ಏಪ್ರಿಲ್ 2024, 7:15 IST
ಅಕ್ಷರ ಗಾತ್ರ

ನಾರಾಯಣಪುರ/ರಾಯಪುರ/ ಭುವನೇಶ್ವರ: ಛತ್ತೀಸಗಢ ರಾಜ್ಯದ ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿ 10 ನಕ್ಸಲರು ಮೃತಪಟ್ಟಿದ್ದಾರೆ ಎಂದು ಗೃಹ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಮಂಗಳವಾರ ತಿಳಿಸಿದ್ದಾರೆ.

15 ದಿನಗಳಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಎರಡನೇ ಪ್ರಮುಖ ಕಾರ್ಯಾಚರಣೆ ಇದಾಗಿದೆ. ‘ಇದು ರಾಜ್ಯದಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಗೆ ದೊರೆತ ಮಹತ್ವದ ಯಶಸ್ಸು’ ಎಂದು ಶರ್ಮಾ ಬಣ್ಣಿಸಿದ್ದಾರೆ. 

ನಕ್ಸಲರು ಪ್ರಬಲವಾಗಿರುವ ಅಬುಜ್ಮದ್‌ ಪ್ರದೇಶದ ಟೆಕ್ಮೆಟಾ ಮತ್ತು ಕಾಕೂರ್ ಗ್ರಾಮಗಳಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ನಕ್ಸಲರ ಗುರುತು ಇನ್ನೂ ಪತ್ತೆ ಹಚ್ಚಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಶರ್ಮಾ, ‘ಕಾರ್ಯಾಚರಣೆ ಸೋಮವಾರ ರಾತ್ರಿಯಿಂದ ಪ್ರಾರಂಭವಾಯಿತು. ಮಂಗಳವಾರ ಬೆಳಿಗ್ಗೆ ಎನ್‌ಕೌಂಟರ್‌ ನಡೆಯಿತು’ ಎಂದಿದ್ದಾರೆ.

‘ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಿಂದ ಎಕೆ–47 ರೈಫಲ್‌, ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ವೇಳೆ ಭದ್ರತಾ ಪಡೆಯ ಕಡೆ ಯಾವುದೇ ಹಾನಿ ಆಗಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘ಮುಖ್ಯವಾಹಿನಿಗೆ ಬನ್ನಿ’:

ಭದ್ರತಾ ಪಡೆಯ ಈ ಯಶಸ್ಸಿಗೆ ಅಭಿನಂದಿಸಿರುವ ಶರ್ಮಾ ಅವರು, ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ, ಮುಖ್ಯವಾಹಿನಿಗೆ ಬರುವಂತೆಯೂ ಕೋರಿದ್ದಾರೆ.

‘ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ನೇತೃತ್ವದ ಸರ್ಕಾರವು ನಕ್ಸಲ್‌ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಬಯಸಿದೆ. ಸಣ್ಣ ಅಥವಾ ದೊಡ್ಡ ನಕ್ಸಲ್‌ ಗುಂಪುಗಳು ವಿಡಿಯೊ ಕರೆ ಮೂಲಕ ಅಥವಾ ಮಧ್ಯವರ್ತಿ ಮೂಲಕ ಸರ್ಕಾರದ ಜತೆ ಮಾತುಕತೆ ನಡೆಸಬಹುದು. ಮುಖ್ಯವಾಹಿನಿಗೆ ಬರಲು ಬಯಸುವವರಿಗೆ ಉತ್ತಮ ಪುನರ್‌ವಸತಿ ಕಲ್ಪಿಸಸಲಾಗುವುದು. ಬಸ್ತಾರ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಮತ್ತು ಪ್ರದೇಶದ ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶ’ ಎಂದು ಅವರು ಹೇಳಿದ್ದಾರೆ.

ನಾರಾಯಣಪುರ, ಕಂಕೇರ್‌ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಈ ವರ್ಷ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಲ್ಲಿಯವರೆಗೆ 88 ನಕ್ಸಲರು ಮೃತಪಟ್ಟಿದ್ದಾರೆ. ಏಪ್ರಿಲ್‌ 16ರಂದು ಕಂಕೇರ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT