ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿಪುರ ತಾಜ್ಯ ಘಟಕದಲ್ಲಿ ಬೆಂಕಿ: ಉಸಿರಾಡಲು ಪರದಾಟ

Published 23 ಏಪ್ರಿಲ್ 2024, 14:55 IST
Last Updated 23 ಏಪ್ರಿಲ್ 2024, 14:55 IST
ಅಕ್ಷರ ಗಾತ್ರ

ನವದೆಹಲಿ: ಗಾಜಿಪುರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು 24 ಗಂಟೆಗೂ ಹೆಚ್ಚು ಸಮಯವಾಗಿದೆ. ಅದರಿಂದ ಏಳುತ್ತಿರುವ ಹೊಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆವರಿಸುತ್ತಿದ್ದು, ಅಲ್ಲಿನ ಜನರು ಉಸಿರಾಡಲೂ ಪರದಾಡುತ್ತಿದ್ದಾರೆ.

ಈ ಮಧ್ಯೆ, ಹೊಗೆಯ ಸುತ್ತ ರಾಜಕೀಯದಾಟ ಆರಂಭವಾಗಿದೆ. ‘ಬೆಂಕಿ ಹೊತ್ತಿಕೊಳ್ಳುವುದಕ್ಕೆ ಎಎಪಿ ನೇತೃತ್ವದ ಎಂಸಿಡಿಯ ನಿರ್ಲಕ್ಷ್ಯವೇ ಕಾರಣ’ ಎಂದು ಬಿಜೆಪಿ ಆರೋಪಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಅವರು, ‘ಘಟನೆಗೆ ಮೇಯರ್‌ ಶೆಲ್ಲಿ ಅವರೂ ಕಾರಣ. ಆದರೆ ಇದು ರಾಜಕಾರಣ ಮಾಡುವ ಹೊತ್ತಲ್ಲ’ ಎಂದಿದ್ದಾರೆ.

‘ತಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಕಾರಣಗಳೇನು? ಮತ್ತು ಬೇಸಿಗೆ ಕಾಲದಲ್ಲಿ ಇಂಥ ಘಟನೆಗಳನ್ನು ತಡೆಗಟ್ಟಲು ಕೈಗೊಳ್ಳಲಿರುವ ಕ್ರಿಯಾ ಯೋಜನೆಗಳೇನು ಎಂಬುದರ ವಿವರವಾದ ವರದಿ ಸಲ್ಲಿಸಬೇಕು’ ಎಂದು ದೆಹಲಿ ಸರ್ಕಾರವು ಪರಿಸರ ಇಲಾಖೆಗೆ ಸೋಮವಾರ ನಿರ್ದೇಶನ ನೀಡಿತ್ತು.

‘3 ಸಾವಿರ ಚದರ ಮೀಟರ್‌ ಪ್ರದೇಶದ ಘಟಕಲ್ಲಿ ಹೊತ್ತಿಕೊಂಡಿದ್ದ ಶೇ 90ರಷ್ಟು ಬೆಂಕಿಯನ್ನು ಈಗಾಗಲೇ ನಂದಿಸಲಾಗಿದೆ. ಸುಮಾರು 40ರಿಂದ 50 ಚಿಕ್ಕ ಚಿಕ್ಕ ಸ್ಥಳಗಳಲ್ಲಿ ಮಾತ್ರ ಬೆಂಕಿ ಉಳಿದುಕೊಂಡಿದೆ’ ಎಂದು ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ ಸೋಮವಾರ ತಡರಾತ್ರಿ ತಿಳಿಸಿತ್ತು.

‘ಬೆಂಕಿಯನ್ನು ನಂದಿಸಲು ನಾವು ಎರಡು ಪರಿಣಾಮಕಾರಿ ವಿಧಾನಗಳನ್ನು; ಒಂದು–ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತಿರುವ ತಾಜ್ಯವನ್ನು ನಾಶಪಡಿಸುವುದು ಮತ್ತು ಎರಡು: ಅಗ್ನಿಶಾಮಕದಳದ ನೆರವಿನಿಂದ ಬೆಂಕಿ ನಂದಿಸುವ ಕ್ರಿಯೆ– ಬಳಸುತ್ತಿದ್ದೇವೆ’ ಎಂದು ಅದು ತಿಳಿಸಿದೆ.

‘ಮಂಗಳವಾರ ರಾತ್ರಿಯ ವೇಳೆಗೆ ಬೆಂಕಿ ಸಂಪೂರ್ಣವಾಗಿ ನಂದುವ ವಿಶ್ವಾಸವಿದೆ. ಕೆಲಸಗಾರರು ಮತ್ತು ಯಂತ್ರಗಳು ನಿರಂತರವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದೂ ಅದು ತಿಳಿಸಿದೆ.

ಘಟಕದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಎಂಸಿಡಿ ತನಿಖೆ ನಡೆಸಲಿದೆ’ ಎಂದು ಮೇಯರ್ ಶೆಲ್ಲಿ ಒಬೆರಾಯ್‌ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT