ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿ ಸಹಾಯಧನ ಕಡಿತಕ್ಕೆ ಆಕ್ಷೇಪ

Published 24 ಮೇ 2023, 0:10 IST
Last Updated 24 ಮೇ 2023, 0:10 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಮೇಲಿನ ಸಹಾಯಧನವನ್ನು ಶೇ 40ರಿಂದ ಶೇ 15ಕ್ಕೆ ಇಳಿಸಿದ ಕೇಂದ್ರ ಸರ್ಕಾರದ ಕ್ರಮವು ಉದ್ಯಮವನ್ನು ಬಾಧಿಸಲಿದೆ ಎಂದು ವಿದ್ಯುತ್ ಚಾಲಿತ ವಾಹನಗಳ ತಯಾರಕರ ಸೊಸೈಟಿ (ಎಸ್‌ಎಂಇವಿ) ಹೇಳಿದೆ.

ಆದರೆ, ವಿದ್ಯುತ್ ಚಾಲಿತ ವಾಹನ ತಯಾರಕ ನವೋದ್ಯಮಗಳು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿವೆ.

ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ಫೇಮ್‌–2 ಯೋಜನೆ ಅಡಿ ಸಹಾಯಧನ ನೀಡುತ್ತಿತ್ತು. ಈ ಕಾರ್ಯಕ್ರಮದ ಅಡಿ ಇವಿ–ದ್ವಿಚಕ್ರ ವಾಹನಗಳಿಗೆ ನೀಡುತ್ತಿದ್ದ ಶೇ 40ರಷ್ಟು ಸಹಾಯಧನವನ್ನು ಜೂನ್‌ 1ರಿಂದ ಅನ್ವಯವಾಗುವಂತೆ ಶೇ 15ಕ್ಕೆ ಇಳಿಸಲಾಗಿದೆ.

ಸಹಾಯಧನ ಕಡಿತದ ನಂತರ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳ ಬೆಲೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಪ್ರೀಮಿಯಂ ವಿದ್ಯುತ್ ಚಾಲಿತ ಸ್ಕೂಟರ್‌ಗಳ ಬೆಲೆಯಲ್ಲಿ ₹22,000ದಿಂದ ₹37,000ರದವರೆಗೂ ಏರಿಕೆಯಾಗಬಹುದು ಎಂದು ಉದ್ಯಮದ ಮೂಲಗಳು ಹೇಳಿವೆ.

‘ಸಹಾಯಧನವನ್ನು ದಿಢೀರ್‌ ಎಂದು ಕಡಿತ ಮಾಡಿದ್ದರಿಂದ, ಇವಿ–ದ್ವಿಚಕ್ರವಾಹನಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಇದರಿಂದ ಅವುಗಳ ಮಾರಾಟ ಇಳಿಕೆಯಾಗಲಿದೆ. ಈಡೀ ಉದ್ಯಮ ಕ್ಷೇತ್ರವು ಗಣನೀಯ ಅವಧಿಯವರೆಗೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಎಸ್‌ಎಂಇವಿ ಹೇಳಿದೆ. 

ಭಾರತದ ಮಾರುಕಟ್ಟೆಯು ಈಗಲೂ ಬೆಲೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸಹಾಯಧನ ಹೊರತುಪಡಿಸಿದ ವಿದ್ಯುತ್ ಚಾಲಿತ ದ್ವಿಚಕ್ರ  ವಾಹನಗಳ ನೈಜ ಬೆಲೆಗೆ ಭಾರತೀಯ ಗ್ರಾಹಕರು ಇನ್ನೂ ಹೊಂದಿಕೊಂಡಿಲ್ಲ. ಈಗ ಸಹಾಯಧನವನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಿದರೆ, ಇವಿ ದ್ವಿಚಕ್ರವಾಹನಗಳು ದುಬಾರಿ ಎನಿಸಿಬಿಡುತ್ತವೆ. ಹೀಗಾಗಿ ಸಹಾಯಧನವನ್ನು ಹಂತ–ಹಂತವಾಗಿ ಕಡಿತ ಮಾಡಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ಎಸ್‌ಎಂಇವಿ ಪ್ರಧಾನ ನಿರ್ದೇಶಕ ಸೊಹಿಂದರ್ ಗಿಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT