ನವದೆಹಲಿ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನ 'ಸ್ವಚ್ಛ ಭಾರತ ಮಿಷನ್' ಅಡಿಯಲ್ಲಿ ದೇಶದಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರ ಫಲವಾಗಿ ಪ್ರತಿವರ್ಷ ಸುಮಾರು 60 ಸಾವಿರದಿಂದ 70 ಸಾವಿರ ಶಿಶು ಮರಣ ತಪ್ಪಿದೆ ಎಂದು ವರದಿಯೊಂದು ಹೇಳಿದೆ.
ಯುಎಸ್ ಮೂಲದ 'ಇಂಟರ್‌ನ್ಯಾಷನಲ್ ಫುಡ್ ಪಾಲಿಸಿ ರೀಸರ್ಚ್ ಸಂಸ್ಥೆ'ಯ ಸಂಶೋಧಕರ ತಂಡ, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 600 ಜಿಲ್ಲೆಗಳ 20 ವರ್ಷದ ಅಂಕಿ–ಅಂಶಗಳನ್ನು ವಿಶ್ಲೇಷಿಸಿದೆ.
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೂ, 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ಪ್ರಮಾಣ ಇಳಿಕೆಯಾಗಿರುವುದಕ್ಕೂ ಸಂಬಂಧವಿದೆ ಎಂದು ವರದಿಯಲ್ಲಿ ಹೇಳಿದೆ.
'ಶೌಚಾಲಯಗಳ ನಿರ್ಮಾಣದಿಂದಾಗಿ ಪ್ರತಿವರ್ಷವು ಅಂದಾಜು 60,000 – 70,000 ಶಿಶುಗಳ ಮರಣ ತಪ್ಪಿದೆ' ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರವು 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿತ್ತು. ಆಗಿನಿಂದ 2014ರ ಜುಲೈ ವೇಳೆಗೆ (9 ವರ್ಷಗಳಲ್ಲಿ) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿಕೆ ನೀಡಿದ್ದಾರೆ.