ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಪು ಹಲ್ಲೆ: ಪ್ರಮುಖ ಆರೋಪಿ ಖುಲಾಸೆ– ಸಂತ್ರಸ್ತೆ ಅಳಲು

Published : 26 ಮೇ 2023, 19:41 IST
Last Updated : 26 ಮೇ 2023, 19:41 IST
ಫಾಲೋ ಮಾಡಿ
Comments

ಜೈಪುರ: ‘ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯಾದ ವಿಎಚ್‌ಪಿ ನಾಯಕ ನವಲ್ ಕಿಶೋರ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿರುವುರಿಂದ ನನಗೆ ಇನ್ನೂ ನ್ಯಾಯ ದೊರಕಿಲ್ಲ’ ಎಂದು ಮೃತನ ಪತ್ನಿ ಅಸ್ಮಿನಾ ಶುಕ್ರವಾರ ದೂರಿದ್ದಾರೆ. 

ದನಗಳನ್ನು ಸಾಗಿಸುತ್ತಿದ್ದ ರಕ್ಬರ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಆರೋಪ ಹೊತ್ತಿದ್ದ ಧರ್ಮೇಂದ್ರ ಯಾದವ್, ವಿಜಯ್ ಕುಮಾರ್, ಪರಮಜೀತ್ ಸಿಂಗ್ ಮತ್ತು ನರೇಶ್ ಕುಮಾರ್ ಅವರಿಗೆ ಅಲ್ವಾರ್ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಎಚ್‌ಪಿ ನಾಯಕ ನವಲ್ ಕಿಶೋರ್ ಅವರನ್ನು ಖುಲಾಸೆಗೊಳಿಸಿದೆ. 

‘ನಮಗಿನ್ನೂ ನ್ಯಾಯ ದೊರೆತಿಲ್ಲ. ಅವರು ನನ್ನ ಗಂಡನನ್ನು ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿ ನವಲ್ ಕಿಶೋರ್ ಖುಲಾಸೆಯಾಗಿದ್ದಾರೆ. ಉಳಿದ ನಾಲ್ವರಿಗೆ ಕಡಿಮೆ ಪ್ರಮಾಣದ ಶಿಕ್ಷೆಯಾಗಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕಿತ್ತು’ ಎಂದು ಅಸ್ಮಿನಾ ಹೇಳಿದ್ದಾರೆ. 

ವಿಚಾರಣಾ ನ್ಯಾಯಾಲಯದ ಆದೇಶವನ್ನು ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಖಾನ್ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ರಕ್ಬರ್ ಖಾನ್ ಅವರಿಗೆ ಪತ್ನಿ ಮತ್ತು ಏಳು ಮಕ್ಕಳಿದ್ದಾರೆ. ಹತ್ಯೆ ನಡೆದ ಎರಡು ವರ್ಷಗಳ ಬಳಿಕ ಖಾನ್ ಅವರ ತಂದೆ ಸುಲೇಮಾನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್‌ಪಿ ಮುಖಂಡ ನವಲ್ ಕಿಶೋರ್, ‘ಉಳಿದ ನಾಲ್ವರು ಕೂಡಾ  ಅಮಾಯಕರು. ವಿಚಾರಣಾ ನ್ಯಾಯಾಲಯದ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ನ್ಯಾಯಾಲಯ ಕಾನೂನು ಪ್ರಕಾರವೇ ನಡೆದುಕೊಂಡಿದೆ. ಪ್ರಕರಣ ಕುರಿತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೂ, ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ಇದೆ’ ಎಂದು ಹೇಳಿದ್ದಾರೆ.

ಶಿಕ್ಷೆಯ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು  ‘ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿ, ನಾವು ಮುಂದೆ ಏನು ಮಾಡಬಹುದು’ ಎಂದು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT