ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಮೂವರು ಆತ್ಮಹತ್ಯೆ

Last Updated 13 ಡಿಸೆಂಬರ್ 2022, 2:30 IST
ಅಕ್ಷರ ಗಾತ್ರ

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಇಬ್ಬರು ಬಿಹಾರದವರು ಮತ್ತು ಒಬ್ಬ ವಿದ್ಯಾರ್ಥಿ ಮಧ್ಯಪ್ರದೇಶದವರು. ಆತ್ಮಹತ್ಯೆ ಸ್ಥಳದಲ್ಲಿ ಡೆತ್‌ನೋಟ್ ಲಭ್ಯವಾಗಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.

ಬಿಹಾರದ ವಿದ್ಯಾರ್ಥಿಗಳನ್ನು ಸುಫೌಲ್‌ ಜಿಲ್ಲೆಯ ಅನೂಷ್‌ ಆನಂದ್‌ (18) ಹಾಗೂ ಗಯಾ ಜಿಲ್ಲೆಯ ಉಜ್ವಲ್‌ ಕುಮಾರ್‌ (17) ಎಂದು ಗುರುತಿಸಲಾಗಿದೆ. ಅನುಷ್‌ ನೀಟ್‌ ಹಾಗೂ ಉಜ್ವಲ್‌ ಜೆಇಇ ಪರೀಕ್ಷೆಆಕಾಂಕ್ಷಿಯಾಗಿದ್ದರು.ಜವಾಹರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಲವಾಂಡಿ ಪ್ರದೇಶದಲ್ಲಿರುವ ಪಿಜಿಯಲ್ಲಿದ್ದ ಇವರ ಶವಗಳು, ಸೋಮವಾರ ಮುಂಜಾನೆ ತಮ್ಮ ತಮ್ಮ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮತ್ತೊಂದು ಪ್ರಕರಣದಲ್ಲಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವಿದ್ಯಾರ್ಥಿ ಪ್ರಣವ್‌ ವರ್ಮಾ (17)ಕುನ್ಹಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಹಾಸ್ಟೆಲ್‌ನಲ್ಲಿ ಭಾನುವಾರ ತಡರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನುಷ್‌ ಹಾಗೂಉಜ್ವಲ್‌ ಅವರು ಒಂದೇ ಕೋಚಿಂಗ್‌ ಸೆಂಟರ್‌ನಲ್ಲಿ ಕಳೆದೆರಡು ವರ್ಷಗಳಿಂದ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ 11 ಗಂಟೆಯಾದರೂ ಕೋಣೆಯ ಬಾಗಿಲು ತೆರೆಯದಿದ್ದದ್ದನ್ನು ಗಮನಿಸಿ, ಪರಿಶೀಲಿಸಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಜವಾಹರ್‌ ನಗರ ಪ್ರದೇಶದ ಡಿಎಸ್‌ಪಿ ಅಮರ್‌ ಸಿಂಗ್‌ ಹೇಳಿದ್ದಾರೆ.

ಅಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಇವರಿಬ್ಬರೂ ತರಗತಿಗಳಿಗೆ ಪದೇಪದೆ ಗೈರಾಗುತ್ತಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಉಜ್ವಲ್‌ ಅವರ ಸಹೋದರಿ ಸಹ ಕೋಟಾದಲ್ಲಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.

ನೀಟ್‌ ಆಕಾಂಕ್ಷಿಯಾಗಿದ್ದ, ಮಧ್ಯಪ್ರದೇಶದ ಪ್ರಣವ್ ವರ್ಮಾ ಅವರು ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಹಾಸ್ಟೆಲ್‌ನ ಮೇಲ್ಛಾವಣಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು ಎಂದು ಕುನ್ಹಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾ ಸಹಾಯ್‌ ಶರ್ಮಾ ತಿಳಿಸಿದ್ದಾರೆ.

ಶವಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ನೀಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT