ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಡು ವಿವಾದ| ಕಲಬೆರಕೆ ತುಪ್ಪ ಬಳಸಿದ್ದಕ್ಕೆ ಪುರಾವೆ ಇದೆಯೇ?: ನಾಯ್ಡುಗೆ SC ತರಾಟೆ

Published : 30 ಸೆಪ್ಟೆಂಬರ್ 2024, 23:50 IST
Last Updated : 30 ಸೆಪ್ಟೆಂಬರ್ 2024, 23:50 IST
ಫಾಲೋ ಮಾಡಿ
Comments

ನವದೆಹಲಿ: ತಿರುಪತಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಹೇಳಿಕೆಯನ್ನು ಪ್ರಬಲ ಪುರಾವೆಗಳು ಇಲ್ಲದೆಯೇ ನೀಡಿದ್ದಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. 

‘ಈ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸುವ ಮತ್ತು ಎಸ್‌ಐಟಿ ತನಿಖೆಗೆ ಆದೇಶಿಸುವ ಮುನ್ನವೇ ಮಾಧ್ಯಮಗಳ ಬಳಿ ಹೋಗಿದ್ದೇಕೆ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿತು.

ತಿರುಪತಿ ಲಾಡು ವಿವಾದದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆ ಯಲ್ಲಿ ತನಿಖೆ ನಡೆಯಬೇಕೆಂದು ಕೋರಿ ಬಿಜೆಪಿ ಮುಖಂಡ ಸುಬ್ರಮಣ್ಯನ್‌ ಸ್ವಾಮಿ ಒಳಗೊಂಡಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು.

‘ತುಪ್ಪ ಕಲಬೆರಕೆಯಾಗಿರುವು ದಕ್ಕೆ ಸಂಬಂಧಿಸಿದ ಪ್ರಯೋಗಾಲಯದ ವರದಿ ಸ್ಪಷ್ಟವಾಗಿಲ್ಲ. ಕಳಪೆ ಗುಣಮಟ್ಟದ ಕಾರಣ ತಿರಸ್ಕರಿಸಲಾದ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ನೀವು ತನಿಖೆಗೆ ಆದೇಶಿಸಿದ್ದೀರಿ. ಅದರ ವರದಿ ಬರುವ ಮುನ್ನವೇ ಈ ವಿಷಯ ಬಹಿರಂಗಪಡಿಸುವ ಅಗತ್ಯವಾದರೂ ಏನಿತ್ತು’ ಎಂದು ಆಂಧ್ರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರನ್ನು ಪ್ರಶ್ನಿಸಿತು.

‘ಲಾಡುಗಳ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿರುವ ಬಗ್ಗೆ ಯಾವುದೇ ಪ್ರಬಲ ಪುರಾವೆಗಳು ಇಲ್ಲದೇ ಇದ್ದರೂ ಸೆಪ್ಟೆಂಬರ್‌ 18ರಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೇಕೆ? ಲಾಡು ತಯಾರಿಕೆಗೆ ಐದು ಸಂಸ್ಥೆಗಳು ತುಪ್ಪ ಪೂರೈಸುತ್ತಿದ್ದು, ಒಂದು ಸಂಸ್ಥೆ ಪೂರೈಸಿದ ತುಪ್ಪ ಮಾತ್ರ ಕಲಬೆರಕೆಯಾಗಿರುವುದು ಕಂಡುಬಂದಿದೆ’ ಎಂದು ಹೇಳಿತು.

ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ಈ ವಿವಾದದ ಕುರಿತ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ನೆರವಾಗುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿಕೊಂಡಿತು. 

‘ಇದು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಲಾಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ್ದರೆ ಅದನ್ನು ಒಪ್ಪಲಾಗದು’ ಎಂದು ಮೆಹ್ತಾ, ಪೀಠಕ್ಕೆ ತಿಳಿಸಿದರು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ನಿಗದಿಪಡಿಸಿದೆ. 

ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪ ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಇತ್ತೀಚೆಗೆ ಆರೋಪ ಮಾಡಿದ್ದರು. 

ಅದಕ್ಕೆ ಪೂರಕವಾಗಿ, ಟಿಟಿಡಿಗೆ ಪೂರೈಕೆಯಾಗಿದ್ದ ತುಪ್ಪದಲ್ಲಿ ಹಂದಿ ಮತ್ತು ಇತರ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವ ಕುರಿತು ಗುಜರಾತ್‌ನ ಎನ್‌ಡಿಡಿಬಿ ಪ್ರಯೋಗಾಲಯದ ವರದಿಯನ್ನು ಟಿಡಿಪಿ ಪ್ರಕಟಿಸಿತ್ತು.

ಪೀಠ ಹೇಳಿದ್ದು...

  • ಕನಿಷ್ಠ, ದೇವರನ್ನಾದರೂ ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ.

  • ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಇಂತಹ ಹೇಳಿಕೆ ನೀಡುವುದು ಸೂಕ್ತವಲ್ಲ. ಇದು ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. 

  • ಒಟ್ಟು ಐದು ಸಂಸ್ಥೆಗಳು ತುಪ್ಪ ಪೂರೈಸಿದ್ದು, ಲಾಡು ತಯಾರಿಸಲು ಎಲ್ಲ ಸಂಸ್ಥೆಗಳು ಪೂರೈಕೆ ಮಾಡಿರುವ ತುಪ್ಪವನ್ನು ಮಿಶ್ರಣ ಮಾಡಲಾಗಿದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT