ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ 'ಭಾರತ್ ಶಕ್ತಿ’ಗೆ PM ಮೋದಿ ಚಾಲನೆ

Published 12 ಮಾರ್ಚ್ 2024, 10:56 IST
Last Updated 12 ಮಾರ್ಚ್ 2024, 11:05 IST
ಅಕ್ಷರ ಗಾತ್ರ

ಜೈಸಲ್ಮೇರ್: ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ ’ಭಾರತ್ ಶಕ್ತಿ’ಯು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದರು.

50 ನಿಮಿಷಗಳ ಈ ರೋಮಾಂಚನಕಾರಿ ಪ್ರದರ್ಶನವನ್ನು ಪ್ರಧಾನಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ವೀಕ್ಷಿಸಿದರು.

ಜೈಸಲ್ಮೇರ್‌ನಿಂದ 100 ಕಿ.ಮೀ. ದೂರದಲ್ಲಿರುವ ಪೋಖ್ರಾನ್‌ನಲ್ಲಿ ನಡೆದ ಈ ಪ್ರದರ್ಶನದಲ್ಲಿ ಎಲ್‌ಸಿಎ ತೇಜಸ್, ಎಎಲ್‌ಎಚ್‌ ಎಂಕೆ–4, ಎಲ್‌ಸಿಎಚ್‌ ಪ್ರಚಂಡ, ಮೊಬೈಲ್ ಡ್ರೋಣ್ ನಿರೋಧಕ ವ್ಯವಸ್ಥೆ, ಬಿಎಂಪಿ–2 ಹಾಗೂ ಅದರ ಇತರ ಮಾದರಿಗಳು, ನಾಗ್ ಕ್ಷಿಪಣಿ ವಾಹಕ, ಟಿ90 ಟ್ಯಾಂಕ್‌ಗಳು, ಧನುಶ್, ಕೆ9 ವಜ್ರ ಮತ್ತು ಪಿನಾಕ ರಾಕೇಟ್‌ಗಳು ತಮ್ಮ ಸಾಮರ್ಥ್ಯ ತೋರಿದವು.

‘ದೇಶೀಯವಾಗಿ ಈ ಪ್ರದರ್ಶನ ಅತ್ಯಂತ ನಿರ್ಣಾಯಕ ಎಂದೇ ಪರಿಗಣಿಸಲಾಗುತ್ತದೆ. ನೈಜ ಸಿಡಿತಲೆ ಸಹಿತ ಪ್ರದರ್ಶನಗೊಳ್ಳುವ ಈ ವೇದಿಕೆಯಲ್ಲಿ, ಮೂರೂ ಸೇನೆಗಳ ಕಾರ್ಯಾಚರಣೆಯ ಕೌಶಲ, ಯಾವುದೇ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯ, ಜಾಗತಿಕ ಮಟ್ಟದ ಸ್ಪರ್ಧೆಯನ್ನೂ ಸಮರ್ಥವಾಗಿ ಎದುರಿಸುವ ಪ್ರಾಬಲ್ಯ ಈ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತದೆ’ ಎಂದು ಸೇನಾ ಸಾಧನಗಳ ವಿನ್ಯಾಸ ವಿಭಾಗದ  ಸಹ ಮಹಾ ನಿರ್ದೇಶಕ ಮೇಜರ್ ಜನರಲ್ ಸಿ.ಎಸ್.ಮನ್‌ ತಿಳಿಸಿದರು.

‘ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಏನನ್ನೂ ಗುರಿಯಾಗಿರಿಸಿಕೊಳ್ಳದೇ ನಡೆದ ಮೊದಲ ಸೇನಾ ಪ್ರದರ್ಶನ ಇದಾಗಿದೆ’ ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಪ್ರಸಕ್ತ ಹಾಗೂ ಭವಿಷ್ಯದ ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ಎಲ್ಲಾ ರೀತಿಯ ಸವಾಲುಗಳಿಗೆ ಸಜ್ಜಾಗಲು ಈ ವೇದಿಕೆ ಪ್ರಮುಖವಾಗಿದೆ. ‘ಭಾರತ್ ಶಕ್ತಿ’ ಪ್ರದರ್ಶನದ ಮೂಲಕ ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಶಕ್ತಿ ಜಾಗತಿಕ ಮಟ್ಟಕ್ಕೆ ಪರಿಚಯಗೊಂಡಂತಾಗಿದೆ’ ಎಂದಿದ್ದಾರೆ.

‘ಸೇನಾ ವಲಯದಲ್ಲೂ ದೇಶದ ಆತ್ಮನಿರ್ಭರತೆಯ ಸದೃಢ ಹೆಜ್ಜೆಗಳನ್ನು ಭಾರತ ಇಡುತ್ತಿರುವುದನ್ನು ಈ ಪ್ರದರ್ಶನ ಸಾಬೀತುಪಡಿಸಿದೆ. ಜತೆಗೆ ಸೇನಾ ವಲಯದ ಕೈಗಾರಿಕೆಗಳನ್ನು ಕಟ್ಟುವ ಬದ್ಧತೆಯನ್ನು ದೇಶದ ಸಶಸ್ತ್ರ ಬಲವು ಪ್ರದರ್ಶಿಸಿದೆ’ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT