ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಎಸ್ ಬಿಆರ್‌ಎಸ್ ಆಗಿದೆ, ಕೆಸಿಆರ್ ಶೀಘ್ರ ವಿಆರ್‌ಎಸ್ ಪಡೆಯುತ್ತಾರೆ: ನಡ್ಡಾ

Last Updated 16 ಡಿಸೆಂಬರ್ 2022, 2:18 IST
ಅಕ್ಷರ ಗಾತ್ರ

ಹೈದರಾಬಾದ್: ಟಿಆರ್‌ಎಸ್ ಬಿಆರ್‌ಎಸ್ ಆಗಿದ್ದು, ಕೆ ಚಂದ್ರಶೇಖರ್ ರಾವ್ ಅವರು ಶೀಘ್ರದಲ್ಲೇ ವಿಆರ್‌ಎಸ್ (ಸ್ವಯಂ ನಿವೃತ್ತಿ) ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕುಟುಕಿದ್ದಾರೆ.

ಅಲ್ಲದೆ, ಮುಂದಿನ ವರ್ಷ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾ ವರ್ಗದ ಜನರಿಗೆ ಅವರು ಮನವಿ ಮಾಡಿದ್ದಾರೆ.

ತೆಲಂಗಾಣ ಸಿಎಂ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಅಧ್ಯಕ್ಷ ಕೆಸಿಆರ್ ಅವರು ನವದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ಒಂದು ದಿನದ ನಂತರ ನಡ್ಡಾ ಅವರು ಈ ಹೇಳಿಕೆ ನೀಡಿದ್ದಾರೆ.

ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಾಮರ್ಥ್ಯ ಬಿಜೆಪಿಗೆ ಮಾತ್ರ ಇದೆ. ಭ್ರಷ್ಟಾಚಾರ, ಕುಟುಂಬ ಆಡಳಿತದ ವಿರುದ್ಧ ಯಾರೇ ಇರಲಿ, ನಮ್ಮೊಂದಿಗೆ ಕೈಜೋಡಿಸುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.

ಗುರುವಾರ ಕರೀಂನಗರದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರ ಐದನೇ ಹಂತದ ಪ್ರಜಾ ಸಂಗ್ರಾಮ ಪಾದಯಾತ್ರೆಯ ಸಮಾರೋಪಕ್ಕೆ ಉತ್ತರ ತೆಲಂಗಾಣ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ರ್‍ಯಾಲಿಯಲ್ಲಿ ಪಾಲ್ಗೊಂಡು ನಡ್ಡಾ ಮಾತನಾಡಿದರು.

ತೆಲಂಗಾಣದಂತಹ ಶ್ರೀಮಂತ, ಆದಾಯ ಇರುವ ರಾಜ್ಯವನ್ನು ಕೆಸಿಆರ್, ಬಡತನ ಮತ್ತು ಸಾಲದ ಭಾರಕ್ಕೆ ಸಿಲುಕಿಸಿದ್ದಾರೆ. ಆದರೆ, ಅವರ ಕುಟುಂಬವು ಭ್ರಷ್ಟಾಚಾರ ಮಾಡಿ ಅಪಾರ ಸಂಪತ್ತನ್ನು ಸಂಗ್ರಹಿಸಿದೆ ಎಂದು ಆರೋಪಿಸಿದರು.

‘ಕೇಂದ್ರ ಏಜೆನ್ಸಿಗಳು ತಮ್ಮ ಮಗಳು ಕವಿತಾ ಅವರನ್ನು ವಿಚಾರಣೆ ನಡೆಸಿದ್ದಕ್ಕೆ ಕೆಸಿಆರ್ ಕೋಪಗೊಂಡಿರಬಹುದು, ಆದರೆ, ಕಾರಣವನ್ನು ಜನರು ತಿಳಿದುಕೊಳ್ಳಬೇಕು’ಎಂದು ಹೇಳಿದರು.

ಕೆಸಿಆರ್ ಅವರು ಅಧಿಕಾರಕ್ಕೆ ಬಂದ ನಂತರ ರಾಜ್ಯ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ನಿಜವಾದ ಚಳವಳಿಗಾರರನ್ನು ಕಡೆಗಣಿಸಿದಂತೆ ಈಗ ತಮ್ಮ ಪಕ್ಷದ ಹೆಸರಿನಿಂದ ತೆಲಂಗಾಣ ಗುರುತನ್ನು ಅಳಿಸಿದ್ದಾರೆ ಎಂದು ಬಂಡಿ ಸಂಜಯ್ ಸಹ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT