ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ: ಕಾಂಗ್ರೆಸ್‌ನ ಇಬ್ಬರು ಮಾಜಿ ಶಾಸಕರು ಬಿಜೆಪಿಗೆ

Published 11 ಮಾರ್ಚ್ 2024, 14:19 IST
Last Updated 11 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶ ಕಾಂಗ್ರೆಸ್‌ಗೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಇಬ್ಬರು ಮಾಜಿ ಶಾಸಕರು ಪಕ್ಷ ತೊರೆದು ಆಡಳಿತಾರೂಢ ಬಿಜೆಪಿಯನ್ನು ಸೋಮವಾರ ಸೇರಿದರು. 

ಕೇಂದ್ರದ ಮಾಜಿ ಸಚಿವ ಸುರೇಶ್‌ ಪಚೌರಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

2008ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಖುರೈ ಕ್ಷೇತ್ರದಲ್ಲಿ ಗೆದ್ದಿದ್ದ ಅರುಣೋದಯ್‌ ಚೌಬೆ ಮತ್ತು 2018ರಲ್ಲಿ ಗುನ್ನೌರ್‌ ಕ್ಷೇತ್ರದಿಂದ ಗೆದ್ದಿದ್ದ ಶಿವದಯಾಳ್ ಬಾಗ್ರಿ ಅವರು ಭೋಪಾಲ್‌ನಲ್ಲಿಯ ರಾಜ್ಯ ಬಿಜೆಪಿ ಮುಖ್ಯಕಚೇರಿಯಲ್ಲಿ ಪಕ್ಷ ಸೇರಿದರು. ರಾಜ್ಯದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರು ಇಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡರು.

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಶ್‌ ಜೋಶಿ ಅವರ ಮಗ, ಕಾಂಗ್ರೆಸ್‌ನ ಮಾಜಿ ಶಾಸಕ ದೀಪಕ್‌ ಜೋಶಿ ಅವರೂ ಚೌಬೆ ಮತ್ತು ಬಾಗ್ರಿ ಅವರ ಜೊತೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಇತ್ತು. ಆದರೆ ಅವರು ಸೋಮವಾರ ಬಿಜೆಪಿ ಸೇರಿಲ್ಲ. ಈ ಕುರಿತು ಸುದ್ದಿದಾರರು ಕೇಳಿದ ಪ್ರಶ್ನೆಗೆ, ‘ಜನರು ಬಿಜೆಪಿಗೆ ಬರುತ್ತಲೇ ಇರುತ್ತಾರೆ, ಕುಟುಂಬ ದೊಡ್ಡದಾಗುತ್ತಲೇ ಇರುತ್ತದೆ’ ಎಂದು ವಿ.ಡಿ. ಶರ್ಮಾ ಪ್ರತಿಕ್ರಿಯಿಸಿದರು.

ದೀಪಕ್‌ ಅವರು 2023ರ ರಾಜ್ಯ ವಿಧಾನಸಭೆಗೂ ಮುನ್ನ ಕಾಂಗ್ರೆಸ್‌ ಸೇರಿ, ಪಕ್ಷದ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲುಂಡಿದ್ದರು.

ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್‌ ರಾಜೂಖೇಡಿ, ಮಾಜಿ ಶಾಸಕರಾದ ಸಂಜಯ್‌ ಶುಕ್ಲಾ, ಅರ್ಜುನ್‌ ಪಾಲಿಯಾ, ವಿಶಾಲ್‌ ಪಟೇಲ್‌ ಅವರು ಭಾನುವಾರವಷ್ಟೇ ಬಿಜೆಪಿ ಸೇರಿದ್ದರು. ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳಿಂದ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಛಿಂದ್ವಾಢ ತೊರೆಯುವುದಿಲ್ಲ: ಕಮಲ್ ನಾಥ್‌

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ತಾವು ಜಬಲಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹಬ್ಬಿರುವ ಸುದ್ದಿಯನ್ನು ವದಂತಿಯಷ್ಟೆ ಎಂದಿರುವ  ಮಧ್ಯಪ್ರದೇಶದ ಕಾಂಗ್ರೆಸ್‌ ಹಿರಿಯ ನಾಯಕ ಕಮಲ್ ನಾಥ್‌ ತಾವು ಛಿಂದ್ವಾಢ ತೊರೆಯುವುದಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದರು. ಛಿಂದ್ವಾಢವು ರಾಜಕೀಯವಾಗಿ ಕಮಲ್‌ ನಾಥ್‌ ಅವರ ಭದ್ರಕೋಟೆ. ಈ ಕ್ಷೇತ್ರದಿಂದ ಅವರು ಒಂಬತ್ತು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಸದ್ಯ ಅವರು ಛಿಂದ್ವಾಢ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು ಅವರ ಮಗ ನಕುಲ್‌ ನಾಥ್‌ ಅವರು ಛಿಂದ್ವಾಢದ ಸಂಸದರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸುರೇಶ್‌ ಪಚೌರಿ ಅವರು ಬಿಜೆಪಿಗೆ ಸೇರ್ಪಡೆಯಾದ ಕುರಿತು ಕೇಳಿದ ಪ್ರಶ್ನೆಗೆ ‘ಅದು ಅವರ ಇಚ್ಛೆ’ ಎಂದು ಕಮಲ್‌ ನಾಥ್‌ ಹೇಳಿದರು. ಛಿಂದ್ವಾಢ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗನೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ ಎಂದು ಈ ಹಿಂದೆ ಕಮಲ್‌ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT