ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslides: ಅಳಿದ ಊರಲ್ಲಿ ಉಳಿದ ವಸ್ತುಗಳ ಹೆಕ್ಕುತ್ತ...

ಅವಶೇಷಗಳಡಿ ಮನೆಯ ಕುರುಹು ಹುಡುಕಿ ಕಣ್ಣೀರು ಹಾಕುತ್ತಿರುವ ‘ಹಳೆಯ’ ನಿವಾಸಿಗಳು
Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕಲ್ಪೆಟ್ಟ (ವಯನಾಡು ಜಿಲ್ಲೆ): ಸರಿಯಾಗಿ ಒಂದು ವಾರದ ಹಿಂದೆಯೇ ಉರುಳಿ ಬಿದ್ದಂತಹ ಮಹಾ ಸದ್ದಿಗೆ ಬೆದರಿ ಪ್ರಾಣ ಉಳಿದರೆ ಸಾಕು ಕಾಡು–ಗುಡ್ಡದತ್ತ ಓಡಿದವರು ತಮ್ಮೂರು ನೋಡಲು ಮಂಗಳವಾರ ಬಂದರು. ಅಳಿದುಳಿದಿದ್ದು ಸೊಗಸು ಕಳೆದುಕೊಂಡು ಮೈಚಾಚಿ ಬಿದ್ದಿರುವುದನ್ನು ಕಂಡು ಅವರೆಲ್ಲರೂ ಕಣ್ಣೀರಾದರು.

ಜುಲೈ 29 ರಂದು ತಡರಾತ್ರಿ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂ ಭಾಗಗಳಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಂಡು ವಿವಿಧ ಕಾಳಜಿ ಕೇಂದ್ರಗಳಲ್ಲಿ ಕಳೆಯುತ್ತಿರುವವರು ಮೇಲಕ್ಕೆ ಕೆಲವರಿಗೆ ತಾವಿದ್ದ ಮನೆಗಳಿಗೆ ತೆರಳಲು ಅವಕಾಶ ಲಭಿಸಿತ್ತು. ಆದರೆ ಬಂದವರ ಬಹುತೇಕರ ಮನೆಯ ಕುರುಹು ಕೂಡ ಇರಲಿಲ್ಲ. ಸ್ಥಳದ ದಾರಿ ಇಲ್ಲ, ಸಂಜೆ ಕುಳಿತು ಸುಖ–ದುಃಖ ಹಂಚಿಕೊಂಡ ಕಟ್ಟೆ ಇರಲಿಲ್ಲ. ಮುದ ನದಿ ನೀಡಿದ, ಸಾಮಗ್ರಿ ಅಂಗಡಿ ಯಾವುದೂ ಇರಲಿಲ್ಲ.

ಮೇಪ್ಪಾಡಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಿಂದ ಜಯೇಶ್, ಯಶೋದಾ ಮತ್ತು ಮಕ್ಕಳು ಅಪರ್ಣಾ ಹಾಗೂ ಅಕ್ಷಯ, ಚೂರಲ್‌ಮಲ ಶಾಲೆಯ ಬಳಿ ತಮ್ಮ ಮನೆ ಇದ್ದ ಜಾಗವನ್ನು ಹುಡುಕಿದರು. ಕೊನೆಗೆ ಹೇಗೋ ಅಲ್ಲಿಗೆ ತಲುಪಿ ನೋಡಿದಾಗ ಮುರಿದು ಬಿದ್ದ ಮನೆಯ ಒಳಗೆ ಕಂಡದ್ದು ಪ್ರಶಸ್ತಿಗಳು ಮತ್ತು ಹಿರಿಯರ ಭಾವಚಿತ್ರ ಮಾತ್ರ.

ಭೂಕುಸಿತದಿಂದ ನಲುಗಿದ ಚೂರಲ್ಮಲ ಶಾಲೆಯ ಎದುರಿನ ಪ್ರದೇಶದಲ್ಲಿ ಮನೆ ಇದ್ದ ಜಾಗದ ಹುಡುಕಾಟ – ಪ್ರಜಾವಾಣಿ ಚಿತ್ರ

ಭೂಕುಸಿತದಿಂದ ನಲುಗಿದ ಚೂರಲ್ಮಲ ಶಾಲೆಯ ಎದುರಿನ ಪ್ರದೇಶದಲ್ಲಿ ಮನೆ ಇದ್ದ ಜಾಗದ ಹುಡುಕಾಟ – ಪ್ರಜಾವಾಣಿ ಚಿತ್ರ

ಅಪರ್ಣಾ ಅವರ ಸ್ನಾತಕೋತ್ತರ ಪದವಿ ಮತ್ತು ಅಕ್ಷಯ ಅವರ ಪದವಿ ಮುಗಿದಿದೆ. ಕಾಲೇಜು ದಿನಗಳಲ್ಲಿ ಅಕ್ಷಯ ಗೆದ್ದ ಬಹುಮಾನಗಳಲ್ಲಿ ಕೆಲವು ಮನೆ ಇದ್ದ ಜಾಗದಲ್ಲಿ ಬಿದ್ದಿದ್ದವು. ಅವರನ್ನು ಹೆಕ್ಕಿ ಎದೆಗವುಚಿಕೊಂಡು ಗಳಗಳನೆ ಅತ್ತರು. ಅಜ್ಜಿಯ ಭಾವಚಿತ್ರ ಎತ್ತಿಕೊಂಡ ಅಪರ್ಣಾ ಅವರಿಗೂ ಬೇಸರ ತಡೆಯಲಾಗಲಿಲ್ಲ. ಅಷ್ಟು ತಡೆದು ನಿಲ್ಲಿಸಿದ ಜಯೇಶ್ ಮತ್ತು ಯಶೋದಾ ಅವರ ಮುಂದೆ ಕಟ್ಟೆಯೂ ಒಡೆಯಿತು. ನಿಮಿಷಾರ್ಧದಲ್ಲಿ ವಾತಾವರಣವಿಡೀ ಶೋಕಮಯವಾಯಿತು.

ಹ್ಯಾರಿಸನ್ಸ್ ಮಲಯಾಳಂ ಚಹಾ ಎಸ್ಟೇಟ್‌ನಲ್ಲಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ ಮೂರು ಹಿಂದೆ ಜಯೇಶ್ ಮನೆ ಕಟ್ಟಿದ್ದರು. 'ಈಗ ಎಲ್ಲವೂ ಇರುವುದಿಲ್ಲ, ಸುತ್ತಮುತ್ತ ಇದ್ದವರೆಲ್ಲರೂ ಹೋದರು. ಈ ದುರಂತದ ಮನಸ್ಸಿನಿಂದ ಮಾಸಿ ಹೋಗುವಷ್ಟು ಕಾಲ ಬೇಕಾದೀತೋ...' ಎಂದು ಕಣ್ಣೀರು ಒರೆಸುತ್ತಲೇ ಹೇಳಿದರು ಜಯೇಶ್. 

'ಮೊದಲ ಕುಸಿತ ಆದ ಕೂಡಲೇ ಮನೆಯ ಬಳಿ ಕೆಸರು ಮಿಶ್ರಿತ ನೀರು ಬಂದಿತ್ತು. ಅಪಾಯದ ಸೂಚನೆ ಅರಿತು ಎಲ್ಲರೂ ಓಡಿದೆವು. ಸ್ಟ್ರೋಕ್ ಆಗಿ ಚಿಕಿತ್ಸೆ ಪಡೆದು ಬಂದಿದ್ದ ಅಪ್ಪನನ್ನು ಎತ್ತಿಕೊಂಡು ಪತಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದರು. ಜೀವ ಉಳಿಸುವ ಪ್ರಯತ್ನದಲ್ಲಿ ಎಲ್ಲರನ್ನೂ ಬಿಟ್ಟು ಹೊರಟಿದ್ದೆವು. ದಾಖಲೆಗಳು ಮತ್ತು ಮಕ್ಕಳ ಪ್ರಮಾಣಪತ್ರಗಳೆಲ್ಲವೂ ನಾಶವಾಗುತ್ತವೆ. ಇನ್ನೊಮ್ಮೆ ಬದುಕು ಕಟ್ಟಿಕೊಳ್ಳುವುದು ಬಹಳ ಕಠಿಣ' ಎಂದು ಯಶೋದಾ ಹೇಳಿದರು.

ತಂಗಿ ಕುಟುಂಬದ ಕುದುರೆ ಹುಡುಕಾಟ:
ಕಲ್ಪೆಟ್ಟದಿಂದ ಬಂದಿದ್ದ ಅನಸ್, ತಂಗಿಯ ಮನೆಯಲ್ಲಿದ್ದ ಜಾಗವನ್ನು ಹುಡುಕುತ್ತ ಮರಣಭೂಮಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಪತಿ ಮತ್ತು ಇಬ್ಬರು ಮಕ್ಕಳ ಜೊತೆ ಪ್ರಾಣ ಕಳೆದುಕೊಂಡ ಮೂರು ತಿಂಗಳ ಗರ್ಭಿಣಿ ತಂಗಿಯನ್ನು ನೆನೆದು ಅತ್ತು ಅವರ ಕಣ್ಣಿನಲ್ಲಿ ನೀರು ಬತ್ತಿಹೋಗಿದೆ.

ಜಿವಿಎಚ್ ಎಸ್ ಶಾಲೆಯ ಹಿಂದೆ ಎತ್ತರ ಪ್ರದೇಶದಲ್ಲಿ ವಾಸವಾಗಿದ್ದ ಮಹಮ್ಮದ್ ಕುಟ್ಟಿ ಮೊಮ್ಮಗ ಹೃಸ್ವಾನ್ ಜೊತೆ ಬಂದಿದ್ದರು. ದುರಂತ ನಡೆದಂದು ಅವರು ಮನೆಯ ಎದುರಿನ ಕಾಂಪೌಂಡ್ ಒಡೆದು ನೀರುನುಗ್ಗಿದ್ದನ್ನು ಕಂಡು ಕುಟುಂಬದವರನ್ನು ಕರೆದುಕೊಂಡು ಹಿಂಬಾಗಿಲಿನಿಂದ ಓಡಿದ್ದರು. ಮಂಗಳವಾರ ಬಂದು ನೋಡಿದಾಗ ಮನೆಯ ಎದುರು ಭಾರಿ ಗಾತ್ರದ ಮರಗಳು ಬಂದು ಬಿದ್ದಿದ್ದವು.

'ಮನೆಯ ಮುಂದೆ ನಿಂತು ನೋಡಿದರೆ ಎಲ್ಲರ ನಲಿವು ಕಾಣುತ್ತಿದೆ. ದೂರದಲ್ಲಿ ಹರಿಯುತ್ತಿದ್ದ ನದಿ ಖುಷಿ ನೀಡುತ್ತಿತ್ತು. ಸುತ್ತ ಚಹಾತೋಟ ನೋಡುತ್ತ ಚಹಾ ಸೇವಿಸಿದರೆ ಸುಖವಿತ್ತು. ಎತ್ತರದ ಮುಂಡಕ್ಕೈಯತ್ತ ಕಣ್ಣು ಹಾಯಿಸಿದರೆ ಮಂಜು ಮುಸುಕಿದ ಪುಂಜಿರಿಮಟ್ಟಂ ವಾತಾವರಣ ಸೃಷ್ಟಿಸುತ್ತದೆ. ಅದೇ ಗುಡ್ಡ ಕುಸಿದು ಬಂದು ಎಲ್ಲೇ ಎಳೆದುಕೊಂಡು ಹೋಗಿದೆ. ಇದಕ್ಕೆ ಏನೆನ್ನಲಿ’ ಎಂದು ಹೇಳಿ ಮಹಮ್ಮದ್ ಕುಟ್ಟಿ ತಲೆಯ ಮೇಲೆ ಕೈಹೊತ್ತುಕೊಂಡರು.

ಭೂಕುಸಿತಕ್ಕೆ ಒಳಗಾದ ಚೂರಲ್‌ಮಲ ಪ್ರದೇಶದಲ್ಲಿ ಉಳಿದಿರುವ ಮನೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಭೂಕುಸಿತಕ್ಕೆ ಒಳಗಾದ ಚೂರಲ್‌ಮಲ ಪ್ರದೇಶದಲ್ಲಿ ಉಳಿದಿರುವ ಮನೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಗೆಳೆಯರ ನೆನೆದು ಕರಗಿದ ಟ್ಯಾಕ್ಸಿ ಚಾಲಕ:
ಮುಂಡಕ್ಕೈ ಗುಡ್ಡದ ರೆಸಾರ್ಟ್‌ಗೆ ಮೇಲಿದ್ದ ಗೆಳೆಯರ ಜೊತೆ ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸೈನುದ್ದೀನ್ ದುರಂತ ಆದ ನಂತರ ಇದೇ ಮೊದಲು ಚೂರಲ್‌ಮಲಕ್ಕೆ ಬಂದಿದ್ದರು. ಅಲ್ಲಿ ನಿತ್ಯವೂ ಗೆಳೆಯರ ಜೊತೆ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಬಿದ್ದಿರುವ ಬಂಡೆಗಳ ಬಳಿ ನಿಂತು ಗಳಗಳನೆ
ಅತ್ತರು.
ತುಂಬ ಸೌಹಾರ್ದದ ವಾತಾವರಣ ಇದ್ದ ಊರು ಇದು. ಧರ್ಮಗಳ ಗೋಡೆ ಇಲ್ಲಿರಲಿಲ್ಲ. ಎಲ್ಲರೂ ಜೊತೆಯಾಗಿ ದಿನ ಕಳೆಯುತ್ತಿ ದ್ದೆವು. ಈಗ ಅವರು ಯಾರೂ ಇಲ್ಲ
ಮಹಮ್ಮದ್ ಕುಟ್ಟಿ, ಚೂರಲ್‌ಮಲ ಶಾಲೆ ಬಳಿಯ ನಿವಾಸಿ
ಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ನಾಶವಾದ ಮನೆಯ ಒಳಗಿನಿಂದ ಲಭಿಸಿದ ಬಹುಮಾನಗಳೊಂದಿಗೆ ಅಕ್ಷಯಾ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ನಾಶವಾದ ಮನೆಯ ಒಳಗಿನಿಂದ ಲಭಿಸಿದ ಬಹುಮಾನಗಳೊಂದಿಗೆ ಅಕ್ಷಯಾ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮನೆ ಸೇರಿದ ಮಣಿಕಂಠನ್ ಕುಟುಂಬ
ಚೂರಲ್‌ಮಲದಿಂದ ಒಂದೂವರೆ ಕಿಲೋಮೀಟರ್ ದೂರದ ನೀಲಿಕಾಪ್ ಗ್ರಾಮದ ಗುಡ್ಡದ ಆಚೆ ವಾಸವಾಗಿದ್ದ ಮಣಿಕಂಠನ್ ಮತ್ತು ಕುಟುಂಬದವರು ಮನೆಯ ಎದುರಿನ ನದಿಯಲ್ಲಿ ನೀರು ಹೆಚ್ಚಾದುದನ್ನು ಕಂಡು ಕಾಡಿನೊಳಗೆ ಓಡಿಹೋಗಿದ್ದರು. ಕಾಳಜಿ ಕೇಂದ್ರದಲ್ಲಿದ್ದ ಅವರಿಗೆ ಮಂಗಳವಾರದಿಂದ ಸ್ವಂತ ಮನೆಯಲ್ಲಿ ವಾಸ. ಮಲಯಾಳಂ ಮತ್ತು ತಮಿಳು ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಅವರು ಪುತ್ತುಮಲ ಬಳಿ ಬಸ್ ಇಳಿದು ಸಾಮಗ್ರಿಗಳನ್ನು ಖರೀದಿಸಿ ಕುಟುಂಬ ಸಮೇತರಾಗಿ ಮನೆಯತ್ತ ಸರಸರನೆ ಹೆಜ್ಜೆ ಹಾಕಿದರು. 'ಒಂದು ವಾರದಿಂದ ಮನೆಯತ್ತ ಸುಳಿಯಲಿಲ್ಲ. ಎಲ್ಲವನ್ನೂ ಸರಿಪಡಿಸಿ ಮತ್ತೊಮ್ಮೆ ಹೊಸ ಜೀವನ ಆರಂಭಿಸಬೇಕಾಗಿದೆ' ಎಂದು ಮಣಿಕಂಠನ್ ಅವರ ತಾಯಿ ಕೃಷ್ಣಮ್ಮ ಹೇಳಿದರು.
ಭೂಕುಸಿತಕ್ಕೆ ಒಳಾಗದ ಚೂರಲ್‌ಮಲ ಪ್ರದೇಶಕ್ಕೆ ಸಮೀಪದ ನೀಲಿಕಾಪ್‌ನಲ್ಲಿರುವ ಮನೆಯತ್ತ ಧಾವಿಸಿದ ಮಣಿಕಂಠನ್ ಮ‌ತ್ತು ಕುಟುಂಬ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಭೂಕುಸಿತಕ್ಕೆ ಒಳಾಗದ ಚೂರಲ್‌ಮಲ ಪ್ರದೇಶಕ್ಕೆ ಸಮೀಪದ ನೀಲಿಕಾಪ್‌ನಲ್ಲಿರುವ ಮನೆಯತ್ತ ಧಾವಿಸಿದ ಮಣಿಕಂಠನ್ ಮ‌ತ್ತು ಕುಟುಂಬ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸನ್ರೈಸ್ ವ್ಯಾಲಿಯಲ್ಲಿ ಸಾಹಸ
ಸೂಜಿಪ್ಪಾರ ಜಲಪಾತ ಮತ್ತು ಚಾಲಿಯಾರ್ ನದಿ ನಡುವಿನ ಅತ್ಯಂತ ದುರ್ಗಮ ಪ್ರದೇಶವಾದ ಸನ್‌ರೈಸ್ ವ್ಯಾಲಿಗೆ ಹೆಲಿಕ್ಯಾಪ್ಟರ್ ಮೂಲಕ ಸಾಗಿ ಮಂಗಳವಾರ ಸಾಹಸಮಯ ಹುಡುಕಾಟ ನಡೆಸಲಾಯಿತು. ಕಲ್ಪೆಟ್ಟದ ಎಸ್‌ಕೆಎಂ ಶಾಲಾ ಮೈದಾನದಿಂದ ಸೇನಾಪಡೆಯ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವವರ ಬೆಳಿಗ್ಗೆ ಏರ್‌ಲಿಫ್ಟ್. ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಜಾಗದಲ್ಲಿ ಜನರನ್ನು ಇಳಿಸುವ ಮತ್ತು ಏರ್‌ಲಿಫ್ಟ್ ಮಾಡುವ ಸಾಮರ್ಥ್ಯ ಇರುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಅನ್ನು ಬಳಸಲಾಗಿದೆ. ಆರು ಮಂದಿ ಸೈನಿಕರು ಮತ್ತು ಪೊಲೀಸ್ ಸ್ಪೆಷಲ್ ಆಯಕ್ಷನ್ ಗ್ರೂಪ್ನ ನಾಲ್ವರು, ಅರಣ್ಯ ಇಲಾಖೆ ಕೆಳಗೆ ಇಬ್ಬರು ವಾಚರ್ ಇದ್ದ ತಂಡವನ್ನು ಹಗ್ಗ ಮತ್ತು ಬ್ಯಾಸ್ಕೆಟ್ ಬಳಸಿ ಇಳಿಸಲಾಯಿತು. ಒಂದು ಪ್ರದೇಶದಲ್ಲಿ ಹುಡುಕಾಟ ಮುಗಿದ ನಂತರ ಏರ್ಲಿಫ್ಟ್ ಮಾಡಿ ಮತ್ತೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಲಾಯಿತು. ಅರುಣ ಹೊಳೆ ಚಾಲಿಯಾರ್ ನದಿಯನ್ನು ಸೇರುವ ಪ್ರದೇಶದಲ್ಲಿ ಹುಡುಕಲಾಗಿದೆ.
ಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ಒಡನಾಡಿಗಳ ಮನೆ ಇದ್ದ ಜಾಗದ ಬಳಿ ಸೈನುದ್ದೀನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ಒಡನಾಡಿಗಳ ಮನೆ ಇದ್ದ ಜಾಗದ ಬಳಿ ಸೈನುದ್ದೀನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT