ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನಿಗೆ ಹೆಚ್ಚಿನ ದಾಖಲೆ ಸಲ್ಲಿಸಲು ಮಾಣಿಕ್‌ಗೆ ಸುಪ್ರೀಂ ಕೋರ್ಟ್ ಕಾಲಾವಕಾಶ

ಶಿಕ್ಷಕ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಬಂಗಾಳ ಶಾಸಕ
Published 18 ಏಪ್ರಿಲ್ 2024, 12:42 IST
Last Updated 18 ಏಪ್ರಿಲ್ 2024, 12:42 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಆರೋಪದಲ್ಲಿ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರಿಗೆ ತಮ್ಮ ಜಾಮೀನು ಅರ್ಜಿಗೆ ಪೂರಕವಾದ ಹೆಚ್ಚಿನ ದಾಖಲೆಗಳನ್ನು ಒದಗಿಸಲು ಸುಪ್ರೀಂ ಕೋರ್ಟ್‌ ಕಾಲಾವಕಾಶ ನೀಡಿದೆ. 

ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಪಂಕಜ್‌ ಮಿಥಲ್‌ ಅವರ ಪೀಠವು ಮಾಣಿಕ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಮಾಣಿಕ್‌ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಸಿದ್ಧಾರ್ಥ್‌ ಲೂಥ್ರಾ ಅವರು ತಾವು ಕೆಲ ದಾಖಲೆಗಳನ್ನು ಸಲ್ಲಿಸಲು ಬಯಸುವುದಾಗಿ ತಿಳಿಸಿದರು.

ಅಲ್ಲದೇ ಪ್ರಕರಣದಲ್ಲಿ ಮಾಣಿಕ್‌ ಪ್ರಮುಖ ಆರೋಪಿಯಲ್ಲ ಎಂದು ತಿಳಿಸಿದರು. ಆಗ ‍ಪೀಠವು 2 ವಾರಗಳ ಬಳಿಕ ದಾಖಲೆಗಳನ್ನು ಸಲ್ಲಿಸಿ ಎಂದು ತಿಳಿಸಿ, 2 ವಾರ ಕಾಲಾವಕಾಶ ನೀಡಿತು. 

ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷರಾದ ಮಾಣಿಕ್‌ ಅವರನ್ನು ಕಳೆದ ವರ್ಷ ಅಕ್ಟೋಬರ್‌ 11ರಂದು ರಾತ್ರಿ ಸುದೀರ್ಘ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ಬಳಿಕ ತನಿಖೆಗೆ ಸಹಕರಿಸದ ಆರೋಪದ ಮೇಲೆ ಅವರನ್ನು ಬಂಧಿಸಿತ್ತು.  ನ.16ರಂದು ಮಾಣಿಕ್‌ ಅವರ ಜಾಮೀನು ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. 

ತಮ್ಮ ಬಂಧನ ಪ್ರಶ್ನಿಸಿ ಈ ಹಿಂದೆ ಮಾಣಿಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೇ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದಡಿ ಬಂಧಿತರಾಗಿದ್ದ ಮಾಣಿಕ್‌ ಅವರ ಪುತ್ರ ಸೌವಿಕ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT