ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರ ಮನೆಗೆ ನುಗ್ಗಿ ಹೊಡೆಯುತ್ತೇವೆ: ಪ್ರಧಾನಿ ಮೋದಿ

Published 30 ಏಪ್ರಿಲ್ 2024, 13:28 IST
Last Updated 30 ಏಪ್ರಿಲ್ 2024, 13:28 IST
ಅಕ್ಷರ ಗಾತ್ರ

ಲಾತೂರ್/ಮಾಲ್‌ಶಿರಸ್ (ಮಹಾರಾಷ್ಟ್ರ): ಕಾಂಗ್ರೆಸ್ ಸರ್ಕಾರದ ಅವಧಿಗೆ ಹೋಲಿಸಿದರೆ ಭಯೋತ್ಪಾದನೆಯ ನಿಗ್ರಹದ ವಿಚಾರದಲ್ಲಿ ಅಗಾಧ ಬದಲಾವಣೆ ಆಗಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ಪ್ರತಿಪಾದಿಸಿದರು.

ಮಹಾರಾಷ್ಟ್ರದ ಲಾತೂರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮತ್ತೊಂದು ಕಡತ ಪಾಕಿಸ್ತಾನಕ್ಕೆ ಸಲ್ಲಿಸಲಾಯಿತು ಎಂದು ಮಾಧ್ಯಮಗಳಲ್ಲಿ ತಲೆಬರಹಗಳು ಪ್ರಕಟವಾಗುತ್ತಿದ್ದವು. ಅಂತಹ ಕಡತ ರವಾನಿಸಿದ ಬಳಿಕ ಮಾಧ್ಯಮಗಳ ನಮ್ಮ ಕೆಲವು ಮಿತ್ರರು ಚಪ್ಪಾಳೆ ಹೊಡೆಯುತ್ತಿದ್ದರು. ಇಂದು, ಭಾರತ ಕಡತಗಳನ್ನು ರವಾನಿಸುವುದಿಲ್ಲ. ಭಯೋತ್ಪಾದಕರ ನೆಲೆಗಳಲ್ಲೇ ಅವರನ್ನು ಕೊಲ್ಲಲಾಗುತ್ತಿದೆ’ ಎಂದು ಹೇಳಿದರು.

ನಂತರ ಸೋಲಾಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು, ಎನ್‌ಸಿಪಿ ಮುಖಂಡ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಕೇಂದ್ರ ಕೃಷಿ ಸಚಿವರಾಗಿ ರೈತರಿಗಾಗಿ ಹೆಚ್ಚೇನೂ ಕೆಲಸ ಮಾಡಲಿಲ್ಲ. ಈಗ ಅವರನ್ನು ಶಿಕ್ಷಿಸುವ ಸಮಯ ಬಂದಿದೆ’ ಎಂದರು.

ಸೋಮವಾರ ಶರದ್ ಪವಾರ್ ಅವರನ್ನು ‘ಅಲೆದಾಟದ ಆತ್ಮ’ ಎಂದು ಕರೆದಿದ್ದ ಮೋದಿ, ಮಂಗಳವಾರ ಅವರ ಹೆಸರು ಹೇಳದೇ ವಾಗ್ದಾಳಿ ಮುಂದುವರಿಸಿದರು. ‘15 ವರ್ಷಗಳ ಹಿಂದೆ ಒಬ್ಬ ನಾಯಕ ಚುನಾವಣೆಗೆ ಸ್ಪರ್ಧಿಸಲು ಇಲ್ಲಿಗೆ ಬಂದರು. ಇಲ್ಲಿನ ಬರಪೀಡಿತ ನೆಲಕ್ಕೆ ನೀರು ಹರಿಸುವುದಾಗಿ ಅವರು ಸೂರ್ಯಾಸ್ತದ ಸಮಯದಲ್ಲಿ ಶಪಥ ಮಾಡಿದರು. ಅವರು ಇಲ್ಲಿಗೆ ನೀರು ಹರಿಸಿದರೇ? ನಿಮಗೆ ಅದರ ನೆನಪಿದೆಯೇ? ಇದು ಆ ನಾಯಕನನ್ನು ಶಿಕ್ಷಿಸುವ ಸಮಯ’ ಎಂದು ಹೇಳಿದರು.

‘ರಿಮೋಟ್ ಕಂಟ್ರೋಲ್ ಸರ್ಕಾರದಲ್ಲಿ ಅವರು ಕೃಷಿ ಮಂತ್ರಿಯಾಗಿದ್ದಾಗ ಕಬ್ಬಿನ ಎಫ್‌ಆರ್‌ಪಿ ₹200 ಆಗಿತ್ತು. ಈಗ ಮೋದಿಯ ‘ಸೇವಾಕಾಲ’ದಲ್ಲಿ ಅದು ₹340 ಆಗಿದೆ. ಅವರ ಕಾಲದಲ್ಲಿ ರೈತರು ಕಬ್ಬಿನ ಬಾಕಿ ಪಡೆಯಲು ಕಂಬದಿಂದ ಕಂಬ ಸುತ್ತಬೇಕಾಗಿತ್ತು. ಈಗ ಶೇ 100ರಷ್ಟು ಬಾಕಿ ಪಾವತಿ ಆಗುತ್ತಿದೆ. ಅವರ ಕಾಲದಲ್ಲಿ ಸರ್ಕಾರವು ₹7.5 ಲಕ್ಷ ಕೋಟಿ ಮೌಲ್ಯದ ಬೆಳೆಗಳನ್ನು ಖರೀದಿ ಮಾಡಿದ್ದರೆ, ಕಳೆದ 10 ವರ್ಷಗಳಲ್ಲಿ ₹20 ಲಕ್ಷ ಕೋಟಿ ಮೌಲ್ಯದ ಬೆಳೆಗಳನ್ನು ಖರೀದಿ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಗತ್ತಿನ ಇತರೆ ದೇಶಗಳು 60 ವರ್ಷಗಳಲ್ಲಿ ತಮ್ಮನ್ನು ಬದಲಿಸಿಕೊಂಡಿದ್ದರೆ, ಭಾರತವನ್ನು 60 ವರ್ಷ ಆಳಿದ ಕಾಂಗ್ರೆಸ್‌ ಪಕ್ಷವು ರೈತರ ಹೊಲಗಳಿಗೆ ನೀರು ಹರಿಸುವುದರಲ್ಲಿಯೂ ವಿಫಲವಾಯಿತು’ ಎಂದು ಆರೋಪಿಸಿದರು.

‘2014ರಲ್ಲಿ ದೇಶದಲ್ಲಿ ಸ್ಥಗಿತಗೊಂಡಿದ್ದ ಸುಮಾರು 100 ನೀರಾವರಿ ಯೋಜನೆಗಳಿದ್ದವು. ಅವುಗಳಲ್ಲಿ 35 ಮಹಾರಾಷ್ಟ್ರದವು. ಇಂದು ಅವುಗಳ ಪೈಕಿ 66 ಯೋಜನೆಗಳು ಪೂರ್ಣಗೊಂಡಿವೆ. ಪ್ರತಿಯೊಂದು ಮನೆ ಮತ್ತು ಜಮೀನಿಗೂ ನೀರು ಕೊಡುವುದು ನನ್ನ ಗುರಿ’ ಎಂದು ತಿಳಿಸಿದರು.

ರೈತ ಉತ್ಪಾದನಾ ಸಂಘಗಳನ್ನು ಶ್ಲಾಘಿಸಿದ ಅವರು, 2019ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಪ್ರತ್ಯೇಕ ಕೇಂದ್ರ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿದೆವು ಎಂದು ಹೇಳಿದರು.

‘ಕನಿಷ್ಠ 272 ಅಭ್ಯರ್ಥಿಗಳನ್ನು ನಿಲ್ಲಿಸದ ಕಾಂಗ್ರೆಸ್’  ಬಹುಮತಕ್ಕೆ ಬೇಕಾದಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ಅನ್ನು ಅಣಕ ಮಾಡಿದರು. ‘ಒಂದು ಕಾಲದಲ್ಲಿ ಕಾಂಗ್ರೆಸ್ 400 ಸಂಸದರನ್ನು ಹೊಂದಿತ್ತು. ಆದರೆ ಈಗ ಪಕ್ಷಕ್ಕೆ 250–275 ಅಭ್ಯರ್ಥಿಗಳನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸರ್ಕಾರ ರಚಿಸಬೇಕು ಎಂದರೆ 272 ಸಂಸದರ ಬಲ ಬೇಕು. ಅಷ್ಟು ಸ್ಥಾನಗಳಲ್ಲಿ ಅವರು ಸ್ಪರ್ಧಿಸಿಯೇ ಇಲ್ಲ. ಅವರು ಬಹುಮತ ಗಳಿಸಲು ಹೇಗೆ ಸಾಧ್ಯ. ಅಂತಹ ಪಕ್ಷಕ್ಕೆ ಮತ ಚಲಾವಣೆ ಮಾಡುವ ಮೂಲಕ ನಿಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಮೋದಿ ಹೇಳಿದರು.

‘ಟೀಕಿಸುವುದು ಬಿಟ್ಟು ಮೋದಿ ಏನು ಮಾಡಿದ್ದಾರೆ’: ತಮ್ಮನ್ನು ‘ಅಲೆದಾಟದ ಆತ್ಮ’ ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತನ್ನ ಆತ್ಮವು ಜನರಿಗಾಗಿ ರೈತರಿಗಾಗಿ ‘ಅವಿಶ್ರಾಂತ’ವಾಗಿ ಶ್ರಮಿಸುತ್ತಿದ್ದು ಅವರಿಗಾಗಿ ಇನ್ನೂ ‘ನೂರು ಪಟ್ಟು’ ಅವಿಶ್ರಾಂತವಾಗಿ ಶ್ರಮಿಸಲು ಸಿದ್ಧ ಎಂದು ಹೇಳಿದ್ದಾರೆ. ಜುನ್ನಾರ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.  ‘ಇಷ್ಟು ವರ್ಷ ಏನು ಮಾಡಿದ್ದಾರೆ ಎಂದು ಮೋದಿ ನನ್ನ ಬಗ್ಗೆ ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಅವರಿಗೇ ಅನ್ವಯಿಸುತ್ತದೆ. ಹತ್ತು ವರ್ಷದಿಂದ ಅಧಿಕಾರದಲ್ಲಿರುವ ಮೋದಿ ಬೇರೆಯವರನ್ನು ಟೀಕಿಸುವ ಒಂದು ಅಂಶದ ಕಾರ್ಯಸೂಚಿ ಬಿಟ್ಟು ಬೇರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ : ಎಸ್‌ಸಿ ಎಸ್‌ಟಿ ಒಬಿಸಿಗಳಿಂದ ಮೀಸಲಾತಿ ಕಸಿದು ತನ್ನ ಮತಬ್ಯಾಂಕ್‌ಗೆ ನೀಡುವ ಕಾಂಗ್ರೆಸ್‌ನ ಉದ್ದೇಶದ ಬಗ್ಗೆ ಮತದಾರರಲ್ಲಿ ಪ್ರಚಾರ ಮಾಡುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭಾ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಈ ಬಗ್ಗೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ‍ಪತ್ರ ಬರೆದಿರುವ ಮೋದಿ ಇದು ಸಾಮಾನ್ಯ ಚುನಾವಣೆ ಅಲ್ಲ ಎಂದು ಒತ್ತಿ ಹೇಳಿದ್ದು ಧರ್ಮ ಆಧಾರಿತ ಮೀಸಲಾತಿ ಅಸಾಂವಿಧಾನಿಕ ಆಗಿದ್ದರೂ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವಿಭಜಕ ಮತ್ತು ತಾರತಮ್ಯದ ಉದ್ದೇಶ ಹೊಂದಿವೆ ಎಂದು ಉಲ್ಲೇಖಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ಮೋದಿ ಪಕ್ಷಕ್ಕೆ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT