ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೇ’ ಸೈನಿಕರನ್ನು ಸೇನೆ ಸಹಿಸಿಕೊಳ್ಳುವುದೇ?

Last Updated 21 ಸೆಪ್ಟೆಂಬರ್ 2018, 7:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಸರ್ಗದ ನಿಯಮಕ್ಕೆ ವಿರುದ್ಧವಾದಲೈಂಗಿಕ ಸಂಪರ್ಕ ಅಪರಾಧ’ ಎನ್ನುವಭಾರತೀಯ ದಂಡ ಸಂಹಿತೆಯ (ಐಪಿಸಿ) 377ನೇ ವಿಧಿಯನ್ನು ಸುಪ್ರಿಂಕೋರ್ಟ್ ರದ್ದುಪಡಿಸಿದೆ.

ಸೆ.6ರಂದು ನೀಡಿದ ತೀರ್ಪಿನಲ್ಲಿ ‘ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆ (ಐಪಿಸಿ) ಸೆಕ್ಷನ್ 377 ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸಲಿಂಗಿಗಳು, ದ್ವಿಲಿಂಗಿಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡ (ಎಲ್‌ಜಿಬಿಟಿಕ್ಯು) ಸಮುದಾಯದವರು ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ' ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ಸಲಿಂಗಕಾಮವನ್ನು (ಗೇ ಮತ್ತು ಲೆಸ್ಬಿಯನ್) ಸಮಾಜವೂ ಒಪ್ಪಿಕೊಳ್ಳಬಹುದು.ಆದರೆ ಎಲ್ಲ ವಿಭಾಗಗಳಲ್ಲಿ ಪುರುಷರೇ ಎದ್ದು ಕಾಣುವ ಸೇನಾಪಡೆಗಳ ಒಳಗೆ ಇದನ್ನು ಒಪ್ಪಿಕೊಳ್ಳುವಂಥ ಸ್ಥಿತಿ ಇದೆಯೇ? ಈ ಪ್ರಶ್ನೆಯನ್ನು ಭೂಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೆಲ ಹಿರಿಯರ ಎದುರು ಇಡಲಾಯಿತು.

ಸೇನೆಯಲ್ಲಿ ಕೆಲಸ ಮಾಡಿದ ಕೆಲವರ ಮಟ್ಟಿಗೆ ಇದು ‘ಸದ್ಯಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದ ಸಂಕೀರ್ಣ ವಿಷಯ’. ಇನ್ನೂ ಕೆಲವರ ಮಟ್ಟಿಗೆ ‘ಲೈಂಗಿಕ ಶೋಷಣೆಗೆ ದಾರಿಯಾಗಬಹುದಾದ ವಿಚಾರ’. ಮತ್ತೆ ಕೆಲವರಿಗೆ ‘ಗೇ ಗಳು ಬಹಿರಂಗವಾಗಿ ತಮ್ಮ ಆಯ್ಕೆಯನ್ನು ಹೇಳಿಕೊಳ್ಳಬಹುದಾದ ಅವಕಾಶ ಸೃಷ್ಟಿಸುವ ಸಂಗತಿ’ ಎನಿಸಿಕೊಂಡಿದೆ.

ಪುರುಷರೇ ಬಹುಸಂಖ್ಯಾತರಾಗಿರುವ ಸೇನೆಯ ಮೇಲೆ ಈ ತೀರ್ಪು ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ಹಲವು ಆಯಾಮಗಳ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ‘ಸುಪ್ರೀಂಕೋರ್ಟ್ ತೀರ್ಪು ಸೇನೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಸೇನೆ ಎನ್ನುವುದು ಒಂದು ಸಂಸ್ಥೆ ಮಾತ್ರವೇ ಅಲ್ಲ; ಅದು ಒಂದು ಜೀವನಪದ್ಧತಿ. ದೇಶಕ್ಕಾಗಿ ಪ್ರಾಣಕೊಡುವ ಮನಃಸ್ಥಿತಿ ಬರಲು ಸುದೀರ್ಘ ತರಬೇತಿ, ಶಿಸ್ತು ಬೇಕು. ಸಲಿಂಗಕಾಮವನ್ನು ಸೇನೆಯ ಶಿಸ್ತು ಎಂದಿಗೂ ಒಪ್ಪಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ ಪ್ರಸ್ತುತ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿರುವ, ಮರಾಠ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಒಬ್ಬರು.

‘ಸೇನೆಯು ಸಲಿಂಗಕಾಮವನ್ನು ಒಪ್ಪಿಕೊಂಡರೆ ಹೋರಾಟದ ಕೆಚ್ಚು ಕುಗ್ಗಬಹುದು’ ಎಂದು ಅಭಿಪ್ರಾಯಪಟ್ಟವರು ಲ್ಯಾನ್ಸ್‌ ನಾಯಕ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗುರುಸ್ವಾಮಿ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು, ‘ಸಾಮಾನ್ಯ ಜನರ ವಿಚಾರ ಬೇರೆ; ಕುಟುಂಬಗಳಿಂದ ತಿಂಗಳಾನುಗಟ್ಟಲೆ ದೂರ ಇರುವ ಸೇನೆಯ ಕಾರ್ಯನಿರ್ವಹಣೆಯ ವಿಚಾರ ಬೇರೆ. ಸಲಿಂಗಕಾಮಕ್ಕೆ ಅವಕಾಶ ಸಿಕ್ಕರೆ ಅಧಿಕಾರಿಗಳು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಇವರಿಬ್ಬರ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಮತ್ತೊಂದು ಅಭಿಪ್ರಾಯವೂ ಸೇನಾ ವಲಯದಲ್ಲಿ ಚಾಲ್ತಿಯಲ್ಲಿದೆ. ‘ಸೇನೆ ಎನ್ನುವುದು ನಮ್ಮ ಸಮಾಜದ ಪ್ರತಿಬಿಂಬವೂ ಹೌದು. ಸಮಾಜದಲ್ಲಿ ವಿವಿಧ ಮನೋಭಾವದ ಜನರು ಇರುವಂತೆ ಸೇನೆಯಲ್ಲಿಯೂ ಎಲ್ಲ ಥರದವರೂ ಇದ್ದಾರೆ. ಸೇನೆಯಲ್ಲಿ ಪ್ರಸ್ತುತ ಸಲಿಂಗಕಾಮ ಕುರಿತು ‘ಏನನ್ನೂ ಕೇಳಬೇಡ– ಹೇಳಬೇಡ’ (Don't Ask- Don't Tell)ಎನ್ನುವ ಗಪ್‌ಚುಪ್ ಅಲಿಖಿತ ನಿಯಮ ಚಾಲ್ತಿಯಲ್ಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವಾಗಿ ಮುಂದೊಂದು ದಿನ ‘ಗೇ’ ಸೈನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬಹುದು. ಸಲಿಂಗಕಾಮಕ್ಕೂ ಹೋರಾಟದ ಕೆಚ್ಚಿಗೂ ಸಂಬಂಧವಿದೆ ಎನ್ನಲು ವೈಜ್ಞಾನಿಕ ಆಧಾರಗಳು ಇಲ್ಲ’ ಎಂದು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತೋರ್ವ ಅಧಿಕಾರಿ ಹೇಳುತ್ತಾರೆ.

‘ನಾವು ನಿವೃತ್ತರಾದ ನಂತರವೂ ಸೇನೆಯ ನಿಯಮಗಳಿಗೆ ಒಳಪಟ್ಟೇ ಬದುಕುತ್ತಿರುತ್ತೇವೆ. ಹೀಗಾಗಿ ನಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನನ್ನ ಹೆಸರು ಮತ್ತು ಹುದ್ದೆ ಬರೆಯಬೇಡಿ’ ಎಂದು ಅವರು ವಿನಂತಿಸಿದರು.

ಭಾರತೀಯ ದಂಡ ಸಂಹಿತೆಯ 377ಕ್ಕೆ ಹೊರತಾದ ಕೆಲ ಕಾಯ್ದೆಗಳುಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಸಲಿಂಗಕಾಮವನ್ನು ನಿಷೇಧಿಸುತ್ತವೆ. ಇದೇ ಕಾರಣದಿಂದ ಸೇನಾಕಾನೂನು ಪರಿಣಿತರು ನೀಡುತ್ತಿರುವ ಹೇಳಿಕೆಗಳೂ ವಿಭಿನ್ನವಾಗಿವೆ.

‘ಸೇನಾಕಾಯ್ದೆಗಳಿಗಿಂತಲೂ ಸುಪ್ರೀಂಕೋರ್ಟ್ ಹೆಚ್ಚಿನ ಅಧಿಕಾರವ್ಯಾಪ್ತಿ ಹೊಂದಿವೆ. ಹೀಗಾಗಿ ಭವಿಷ್ಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸೇನಾಕಾಯ್ದೆಗಳ ಮೇಲೆ ನಿಚ್ಚಳವಾಗಿ ಪ್ರಭಾವ ಬೀರಲಿದೆ. ಅತ್ಯಾಚಾರ, ಲೈಂಗಿಕ ಬಲಾತ್ಕಾರ, ಸಮ್ಮತಿಯಿಲ್ಲದ ಕಾಮಕ್ಕೆ ಒತ್ತಾಯಿಸುವುದು ಸೇರಿದಂತೆ ಸೇನಾ ಕಾಯ್ದೆಯಲ್ಲಿ ಅಪರಾಧ ಎಂದು ವಿವರಿಸಿರುವ ಉಳಿದೆಲ್ಲ ಅಂಶಗಳು ಸಲಿಂಗಕಾಮಕ್ಕೂ ತನ್ನಿಂತಾನೆ ಅನ್ವಯವಾಗುತ್ತವೆ’ ಎನ್ನುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಹರಚರಣ್ ಸಿಂಗ್ ಪನಾಗ್ ಅವರ ಹೇಳಿಕೆಯನ್ನು ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.

‘ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಸೇನಾ ಕಾನೂನುಗಳನ್ನು ಬದಲಿಸಲು ಮುಂದಾಗುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎನ್ನುವುದು ನಿವೃತ್ತ ಬ್ರಿಗೇಡಿಯರ್ ಸಂದೀಪ್ ಥಾಪರ್ ಅವರ ಅಭಿಪ್ರಾಯ.‘ಇದೀಗ ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಘೋಷಿಸಿದೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಸೇನಾಕಾಯ್ದೆಯಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಿದೆ. ಯಾವುದೇ ಕಾಯ್ದೆಯನ್ನು ಬದಲಿಸುವ ಮೊದಲು, ಅವು ಸೇನೆಯ ಇತರ ವಿಚಾರಗಳೊಂದಿಗೆ ಹೊಂದಿರುವ ಸಂಬಂಧಗಳನ್ನು ಗಮನದಲ್ಲಿರಿಸಿಕೊಳ್ಳಬೇಕು’ ಎಂದು ಅವರು ಮಾದ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

‘ಸೇನೆಯಲ್ಲಿ ಈಗಲೂ ಕೆಲ ಗೇ ಯೋಧರಿದ್ದಾರೆ. ಆದರೆ ಅವರು ಮುಕ್ತವಾಗಿ ಮಾತನಾಡಲಾರರು. ಇಂಥ ಪ್ರಕರಣಗಳು ಬೆಳಕಿಗೆ ಬಂದಾಗ ಅವರಿಗೆ ಶಿಕ್ಷೆಯೂ ಆಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವಾಗಿ ಈ ಪರಿಸ್ಥಿತಿ ಬದಲಾಗಬಹುದು. ಇದನ್ನು ನಾನು ವೈಯಕ್ತಿಕ ನೆಲೆಗಟ್ಟಿನಲ್ಲಿ ಹೇಳುತ್ತಿದ್ದೇನೆ. ಇದು ಸೇನೆಯ ಪರವಾಗಿ ನೀಡಿರುವ ಅಧಿಕೃತ ಹೇಳಿಕೆ ಅಲ್ಲ’ ಎನ್ನುವುದು ಅವರ ವಿವರಣೆ.

ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೆಲ ಹಿರಿಯರು ಮಾತನಾಡುವಾಗ ‘ಸೇನೆಯ ಸಂಸ್ಕೃತಿ’ (ಆರ್ಮಿ ಕಲ್ಚರ್) ಎನ್ನುವ ಪದವನ್ನು ಪದೇಪದೆ ಬಳಸುತ್ತಾರೆ.

‘ಸೇನೆಯಲ್ಲಿ ಸಲಿಂಗಕಾಮ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಕಾನೂನುಗಳ ಬಗ್ಗೆ ಮಾತನಾಡುತ್ತಿಲ್ಲ. ಸೇನೆಯ ಸಂಸ್ಕೃತಿಯಲ್ಲಿ ಸಲಿಂಗಕಾಮವನ್ನು ಇಂದಿಗೂ ಹುಬ್ಬೇರಿಸಿ ನೋಡಲಾಗುತ್ತದೆ. ಈ ಹಿಂದೆಯೂಸೇನೆಯಲ್ಲಿ ಸಲಿಂಗಕಾಮದ ಕೆಲ ಪ್ರಕರಣಗಳು ವರದಿಯಾಗಿರಬಹುದು. ಆದರೆ ಒಮ್ಮೆ ಬಹಿರಂಗಗೊಂಡರೆ, ತಕ್ಷಣ ಶಿಸ್ತುಕ್ರಮ ಜರುಗಿಸುವುದು ನಿಶ್ಚಿತ. ಪರಸ್ಪರ ಸಮ್ಮತಿ ಇರಲಿ–ಬಿಡಲಿ ಸೇನೆಯಲ್ಲಿ ಸಲಿಂಗಕಾಮವನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ’ ಎಂದು ಅವರು ಹಲವರು ಅಭಿಪ್ರಾಯಪಟ್ಟರು.

ಸಂವಿಧಾನದ 33ನೇ ಪರಿಚ್ಛೇದದ ಅನ್ವಯ ಸಂಸತ್ತಿಗೆ ಸೇನಾಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವ ಅಧಿಕಾರವಿದೆ. ರಕ್ಷಣಾ ಇಲಾಖೆಯು ಈ ಕುರಿತು ಪ್ರಸ್ತಾವ ಮುಂದಿಡಬಹುದು. ಆದರೆ ಸೇನೆಯ ಉನ್ನತ ನಾಯಕತ್ವವುಸ್ವಯಂ ಪ್ರೇರಣೆಯಿಂದ ಈ ವಿಚಾರದಲ್ಲಿ ನಿಯಮಗಳ ಬದಲಾವಣೆಗೆ ಮುಂದಾಗುವ ಸಾಧ್ಯತೆ ಕಡಿಮೆ.

‘ಸುಪ್ರೀಂಕೋರ್ಟ್ ತೀರ್ಪು ಮುಂದಿನ ದಿನಗಳಲ್ಲಿ ಸೇನೆಯ ಮೇಲೆ ಬೀರಬಹುದಾದ ಪರಿಣಾಮಗಳೇನು’ ಎಂಬ ಪ್ರಶ್ನೆಗೂ ನಿವೃತ್ತ ಅಧಿಕಾರಿಗಳು ನಕಾರಾತ್ಮಕ ಉತ್ತರವನ್ನೇ ಕೊಡುತ್ತಾರೆ.‘ಮುಂದಿನ ದಿನಗಳಲ್ಲಿ ಸೇನಾಕಾಯ್ದೆ ಹೇಗೆ ಬದಲಾಗಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಕರ್ತವ್ಯದ ಮೇಲಿದ್ದಾಗ ಅಥವಾ ಬ್ಯಾರಕ್‌ನಲ್ಲಿದ್ದಾಗ ಅಥವಾ ಸೇನಾಠಾಣೆಗಳಲ್ಲಿದ್ದಾಗ ಸಹೋದ್ಯೋಗಿಗಳೊಂದಿಗೆ ಲೈಂಗಿಕ ಸಂಪರ್ಕಕ್ಕೆ ನಿಷೇಧವಿದೆ. ಸೇನೆಯಲ್ಲಿ ಶಿಸ್ತು ಕಾಪಾಡಲು ಇಂಥ ಬಿಗಿನಿಯಮಗಳು ಅನಿವಾರ್ಯವೂ ಹೌದು’ ಎನ್ನುತ್ತಾರೆ ಒಬ್ಬ ಅಧಿಕಾರಿ.

ಸೈನಿಕರು ತಮ್ಮ ಕುಟುಂಬಗಳಿಂದ ತಿಂಗಳಾನುಟ್ಟಲೆ ದೂರ ಇರುತ್ತಾರೆ. ಸುಪ್ರೀಂಕೋರ್ಟ್ ಆದೇಶವನ್ನು ಈ ಹಿನ್ನೆಲೆಯಿಂದಲೂ ಅರ್ಥೈಸುವುದು ಮುಖ್ಯವಾಗುತ್ತದೆ. ಜೊತೆಗಿರುವ ಯೋಧ ಮಾತ್ರ ಮತ್ತೋರ್ವ ಯೋಧನ ಭಾವುಕ ಆಸರೆಯಾಗಿರುತ್ತಾನೆ. ಹೀಗಾಗಿಯೇ ಮಿಲಿಟರಿ ಸೇವೆಗಳಲ್ಲಿ ಸಲಿಂಗಕಾಮಕ್ಕೆ ಕಾನೂನಿನ ಸಮ್ಮತಿ ಮುದ್ರೆ ಒತ್ತುವುದನ್ನು ಗಂಡಾಂತರಕಾರಿ ಎಂದೇ ಅನೇಕ ದೇಶಗಳು ಪರಿಗಣಿಸುತ್ತವೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ಅಮೆರಿಕ (2011), ಬ್ರಿಟನ್ (2000) ಮತ್ತು ಫಿಲಿಪೈನ್ಸ್ (2010) ಸೇರಿದಂತೆ ಕೆಲ ದೇಶಗಳು ಗೇ ಸೈನಿಕರನ್ನು ಒಪ್ಪಿಕೊಳ್ಳುತ್ತಿವೆ.

ತಮ್ಮ ಅಧೀನಸಿಬ್ಬಂದಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಗೂರ್ಖ ರೆಜಿಮೆಂಟ್‌ನ ಬ್ರಿಗೇಡಿಯರ್ ಒಬ್ಬರು 2014ರಲ್ಲಿ ವಿಚಾರಣೆ ಎದುರಿಸಿ ರಾಜೀನಾಮೆ ನೀಡಿದ್ದರು. ‘ಹೇಗ್ ಸೆಂಟರ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್’ ಸಂಸ್ಥೆಯು ವಿಶ್ವದ 100ಕ್ಕೂ ಸಶಸ್ತ್ರ ಪಡೆಗಳಲ್ಲಿ ಅಧ್ಯಯನ ನಡೆಸಿತ್ತು. ಈ ಸಂದರ್ಭ ಗೇಗಳನ್ನು ಸಹಿಸಿಕೊಳ್ಳದಸೇನೆಗಳ ಪಟ್ಟಿಯಲ್ಲಿ ಭಾರತೀಯ ಸೇನೆಯೂ ಇತ್ತು.

ಸೇನಾ ಕಾಯ್ದೆಗಳು ಏನು ಹೇಳುತ್ತವೆ?

ಭಾರತೀಯ ರಕ್ಷಣಾ ಪಡೆಗಳ ಮೂರೂ ವಿಭಾಗಗಳಲ್ಲಿ ಸಲಿಂಗಕಾಮಕ್ಕೆ ನಿಷೇಧವಿದೆ. ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಇದೊಂದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗುತ್ತಿದೆ. ಈಚೆಗಷ್ಟೇಸೇನೆಯ ಎಲ್ಲ ಕರ್ನಲ್‌ಗಳು ಹಾಗೂ ಅವರ ಪತ್ನಿಯರ ಸಭೆ ದೆಹಲಿಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ‘ನೀತಿ ತಪ್ಪಿದವರನ್ನು ಕ್ಷಮಿಸುವ ಮಾತೇ ಇಲ್ಲ’ ಎಂದು ಎಚ್ಚರಿಸಿದ್ದರು. ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಈ ಹೇಳಿಕೆಯೂ ಇದೀಗ ಮಹತ್ವ ಪಡೆದುಕೊಂಡಿದೆ.

ಸೇನಾ ಕಾಯ್ದೆ 1950ರ ಸೆಕ್ಷನ್‌ 45 (ಅಧಿಕಾರಿಗಳ ಅನುಚಿತ ವರ್ತನೆ) ಮತ್ತು ಸೆಕ್ಷನ್‌ 46 (ಎ) ಪ್ರಕಾರ, ಯಾವುದೇ ವ್ಯಕ್ತಿಯಲ್ಲಿ ಅವಮಾನಕಾರಿ, ಅಸಭ್ಯ, ಕ್ರೂರ ಅಥವಾ ಅನೈಸರ್ಗಿಕ ನಡವಳಿಕೆ ಕಂಡು ಬಂದಲ್ಲಿಸೇನಾ ನ್ಯಾಯಾಲಯದ (ಕೋರ್ಟ್‌ ಮಾರ್ಷಲ್‌) ವಿಚಾರಣೆ ಎದುರಿಸಬೇಕಾಗುತ್ತದೆ. ತಪ್ಪು ಸಾಬೀತಾದರೆ ಏಳು ವರ್ಷಗಳವರೆಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ವಾಯುಪಡೆಯ ಕಾಯ್ದೆ 1950, ಸೆಕ್ಷನ್‌ 45 ಮತ್ತು 46 (ಎ) ಸಹ ಸೇನಾ ಕಾಯ್ದೆಯ ಕ್ರಮಗಳನ್ನೇ ಒಳಗೊಂಡಿದೆ. ನೌಕಾಪಡೆ ಕಾಯ್ದೆ, 1957ರ ಪ್ರಕಾರ ಅಸಭ್ಯ ವರ್ತನೆಗೆ 2 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವಅವಕಾಶವಿದೆ.

‘ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಮಿಲಿಟರಿ ಕಾನೂನುಗಳನ್ನು ಮಾನವೀಯಗೊಳಿಸಲಿದೆ’ ಎಂದು ಸೇನಾ ಕಾನೂನು ವಿಷಯಗಳಲ್ಲಿ ತಜ್ಞತೆ ಹೊಂದಿರುವ ಚಂಡೀಗಢ ಮೂಲದ ವಕೀಲ ಮನೋಜ್‌ ನವದೀಪ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ‘ಸೇನಾ ಕಾಯ್ದೆ ಸೆಕ್ಷನ್‌ 46ರಲ್ಲಿ ’ಅನೈಸರ್ಗಿಕ’ ಪದ ಬಳಕೆಯಾಗಿದೆ. ಐಪಿಸಿ ಸೆಕ್ಷನ್‌ 377ರಲ್ಲಿ ಪ್ರಸ್ತಾಪಿಸಲಾಗಿರುವ ‘ಅನೈಸರ್ಗಿಕ’ ಎಂಬ ಅಂಶ ಸುಪ್ರೀಂಕೋರ್ಟ್‌ ಈಗ ನೀಡಿರುವ ತೀರ್ಪಿನಿಂದಾಗಿ ಅಪ್ರಸ್ತುತವಾಗಿದೆ. ಆದರೆ, ಕ್ರೂರ ನಡವಳಿಕೆ ಅಥವಾ ಅಸಭ್ಯ ವರ್ತನೆಗಳಿಗೆ ಸೆಕ್ಷನ್‌ 46ರ ಅಡಿಯಲ್ಲಿ ಕ್ರಮಕೈಗೊಳ್ಳಬಹುದಾಗಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT