ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭಟನಕಾರರ ವಿರುದ್ಧದ ಪ್ರಕರಣ ಹಿಂಪಡೆಯಿರಿ: ಉದ್ಧವ್ ಠಾಕ್ರೆ

ಬದ್ಲಾಪುರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ ಮಹಾರಾಷ್ಟ್ರ ಬಂದ್ ಇಂದು
Published 23 ಆಗಸ್ಟ್ 2024, 13:03 IST
Last Updated 23 ಆಗಸ್ಟ್ 2024, 13:03 IST
ಅಕ್ಷರ ಗಾತ್ರ

ಮುಂಬೈ: ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ ಬದ್ಲಾಪುರದಲ್ಲಿ ಪ್ರತಿಭಟಿಸಿದವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಶಿವಸೇನಾ ಮುಖ್ಯಸ್ಥ (ಯುಬಿಟಿ ಬಣ) ಉದ್ಧವ್ ಠಾಕ್ರೆ ಶುಕ್ರವಾರ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಪ್ರಕರಣಗಳನ್ನು ಹಿಂಪಡೆಯದಿದ್ದರೆ, ಪ್ರತಿಪಕ್ಷಗಳು ಬೀದಿಗಳಿದು ಹೋರಾಟ ನಡೆಸಲಿವೆ ಎಂದೂ ಎಚ್ಚರಿಸಿದ್ದಾರೆ.

‘ಪ್ರತಿಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ ಆಘಾಡಿಯಿಂದ (ಎಂವಿಎ) ಆ. 24ರ ಶನಿವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಾಗಿದೆ. ಇದು ರಾಜಕೀಯವಲ್ಲ. ರಾಜ್ಯದ ಜನರ ಪರವಾಗಿ ವಿಕೃತಿಯ ವಿರುದ್ಧ. ಎಲ್ಲರೂ ಜಾತಿ, ಧರ್ಮಾತೀತರಾಗಿ ಭಾಗಿಯಾಗಬೇಕು. ತುರ್ತು ಸೇವೆಗಳನ್ನು ಹೊರತುಪಡಿಸಿ, ಮಧ್ಯಾಹ್ನ 2 ಗಂಟೆಯವರೆಗೂ ಕಟ್ಟುನಿಟ್ಟಾಗಿ ಬಂದ್‌ ಆಚರಿಸಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಪ್ರತಿಭಟನಕಾರರ ವಿರುದ್ಧ ಏಕನಾಥ ಶಿಂದೆ ಸರ್ಕಾರ ಕೈಗೊಂಡ ಕ್ರಮವನ್ನು ಖಂಡಿಸಿದ ಠಾಕ್ರೆ, ‘ಬದ್ಲಾಪುರದಲ್ಲಿ ಇನ್ನೂ ಬಂಧನಗಳಾಗುತ್ತಿವೆ. ಪ್ರತಿಭಟನಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯದಿದ್ದರೆ ನಾವು ಬೀದಿಗಿಳಿಯಬೇಕಾಗುತ್ತದೆ’ ಎಂದು ಗುಡುಗಿದರು.

ನಾಲ್ಕು ವರ್ಷದ ಮಕ್ಕಳಿಬ್ಬರ ಮೇಲೆ ಶಾಲೆಯ ಸಹಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ ಅಸಂಖ್ಯಾತ ಜನರು ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಮಂಗಳವಾರ ರೈಲ್ವೆ ಹಳಿಗಳ ಮೇಲೆ ನಿಂತು ಪ್ರತಿಭಟಿಸಿದ್ದರು. ಈ ಸಂದರ್ಭ ನಡೆದ ಕಲ್ಲು ತೂರಾಟದಲ್ಲಿ ಕನಿಷ್ಠ 25 ಪೊಲೀಸರು ಗಾಯಗೊಂಡಿದ್ದರು. 

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 72 ಜನರನ್ನು ಬಂಧಿಸಿದ್ದಾರೆ. ಆರೋಪಿಯನ್ನು ಆ. 17ರಂದು ಬಂಧಿಸಲಾಗಿದ್ದು, 26ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT