ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಗೀತೆಯಿಂದ ‘ಹಿಂದೂ, ಜೈಭವಾನಿ’ ತೆಗೆಯಲಾಗದು: ಉದ್ಧವ್‌ ಠಾಕ್ರೆ

Published 21 ಏಪ್ರಿಲ್ 2024, 14:12 IST
Last Updated 21 ಏಪ್ರಿಲ್ 2024, 14:12 IST
ಅಕ್ಷರ ಗಾತ್ರ

ಮುಂಬೈ: ‘ನಮ್ಮ ಪಕ್ಷದ ಹೊಸ ಪ್ರಚಾರ ಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಪದಗಳನ್ನು ಕೈಬಿಡಬೇಕು ಎಂದು ಭಾರತದ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಆಯೋಗದ ಈ ಸೂಚನೆ ಪಾಲಿಸುವುದಿಲ್ಲ’ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಗೀತೆಯಿಂದ ‘ಜೈ ಭವಾನಿ’ ತೆಗೆದು ಹಾಕುವುದು ಮಹಾರಾಷ್ಟ್ರಕ್ಕೆ ಮಾಡುವ ಅವಮಾನವಾಗಿದೆ’ ಎಂದು ಹೇಳಿದರು. 

‘ತುಳಜಾ ಭವಾನಿ ದೇವಿಯ ಆಶೀರ್ವಾದದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ ಹಿಂದವಿ ಸ್ವರಾಜ್ ಅನ್ನು ಸ್ಥಾಪಿಸಿದ್ದರು. ನಾವು ಹಿಂದೂ ಧರ್ಮ ಅಥವಾ ದೇವತೆ ಹೆಸರಿನಲ್ಲಿ ಮತ ಕೇಳುತ್ತಿಲ್ಲ. ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಲ್ಲಿ ‘ಜೈ ಭವಾನಿ’ ಮತ್ತು ‘ಜೈ ಶಿವಾಜಿ’ ಎಂದು ಹಾಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.  

ಅಲ್ಲದೆ, ಈ ಕುರಿತು ಆಯೋಗಕ್ಕೆ ಪತ್ರ ಬರೆದಿರುವ ಶಿವಸೇನಾ (ಉದ್ಧವ್ ಠಾಕ್ರೆ ಬಣ), ಕಾನೂನು ಬದಲಿಸಲಾಗಿದೆಯೇ ಎಂದು ಪ್ರಶ್ನಿಸಿದೆ. ‘ನಮ್ಮ ಈ ಜ್ಞಾಪನಾಪತ್ರಕ್ಕೆ ಆಯೋಗ ಉತ್ತರಿಸಿಲ್ಲ. ಒಂದು ವೇಳೆ ಕಾನೂನುಗಳು ಬದಲಾಗಿದ್ದರೆ, ಚುನಾವಣಾ ರ‍್ಯಾಲಿಗಳಲ್ಲಿ ಹರಹರ ಮಹದೇವ್ ಎಂಬ ಘೋಷಣೆಗಳನ್ನು ಮೊಳಗಿಸುವೆವು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೇವೆ’ ಎಂದಿದ್ದಾರೆ.  

‘ಒಂದು ವೇಳೆ ನಮ್ಮ ವಿರುದ್ಧ ಆಯೋಗ ಕ್ರಮ ಕೈಗೊಂಡರೆ, ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ವೇಳೆ ಜೈ ಬಜರಂಗಬಲಿ ಎಂದು ಹೇಳುವಂತೆ ಮತದಾರರಿಗೆ ಹೇಳಿದ್ದರು. ಅಲ್ಲದೆ, ಅಯೋಧ್ಯೆಯಲ್ಲಿನ ಬಾಲರಾಮನ ಉಚಿತ ದರ್ಶನಕ್ಕಾಗಿ ಜನರು ಬಿಜೆಪಿಗೆ ಮತ ನೀಡಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆಗ ಆಯೋಗ ಏನು ಮಾಡುತ್ತಿತ್ತು ಎಂಬುದನ್ನು ಹೇಳಬೇಕು’ ಎಂದರು.

ಉದ್ಧವ್ ಬಣದ ಶಿವಸೇನಾ ಪಕ್ಷಕ್ಕೆ ಪಂಜು ಚಿಹ್ನೆ ನೀಡಲಾಗಿದ್ದು, ಅದನ್ನು ಜನಪ್ರಿಯಗೊಳಿಸಲು ಪಕ್ಷವು ಗೀತೆ ರಚಿಸಿದೆ. ಆ ಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಪದಗಳನ್ನು ತೆಗೆಯುವತೆ ಚುನಾವಣಾ ಆಯೋಗ ಸೂಚಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT