ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ಖರ ರುಮಾಲು ನಂಬಿಕೆಯ ಸಂಕೇತ: ನ್ಯೂಯಾರ್ಕ್‌ ಮೇಯರ್ ಎರಿಕ್‌ ಆ್ಯಡಂ ಪ್ರತಿಪಾದನೆ

Published 30 ಅಕ್ಟೋಬರ್ 2023, 14:30 IST
Last Updated 30 ಅಕ್ಟೋಬರ್ 2023, 14:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ಸಿಖ್‌ ಸಮುದಾಯದವರು ಧರಿಸುವ ರುಮಾಲು (ಟರ್ಬನ್) ಭಯೋತ್ಪಾದನೆಯ ಸಂಕೇತವಲ್ಲ. ಅದು ನಂಬಿಕೆಯ ಪ್ರತೀಕವಾಗಿದೆ’ ಎಂದು ಅಮೆರಿಕದ ನ್ಯೂಯಾರ್ಕ್‌ ಮೇಯರ್ ಎರಿಕ್‌ ಆ್ಯಡಂ ಪ್ರತಿಪಾದಿಸಿದ್ದಾರೆ.

ಇಲ್ಲಿನ ಸೌತ್‌ ರಿಚ್‌ಮಂಡ್‌ ಹಿಲ್‌ನ ಬಾಬಾ ಮಖಾನ್ ಶಾ ಲುಬಾನಾ ಸಿಖ್ ಕೇಂದ್ರದಲ್ಲಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಸಿಖ್‌ ಸಮುದಾಯದ ಮೇಲೆ ನಡೆದ ದಾಳಿ ಹಾಗೂ ದ್ವೇಷ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದರು.

‘ಇಂತಹ ಘಟನೆಗಳು ದೇಶಕ್ಕೆ ಕಳಂಕ ತರುತ್ತವೆ. ಈ ಸಮುದಾಯದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಿಖ್‌ ಧರ್ಮದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ’ ಎಂದು ಹೇಳಿದರು. 

‘ನೀವು (ಸಿಖ್‌) ಭಯೋತ್ಪಾದನೆಯ ಪರವಿಲ್ಲ. ನ್ಯೂಯಾರ್ಕ್‌ ನಗರದ ರಕ್ಷಕರಾಗಿದ್ದೀರಿ. ಅಮೆರಿಕದ ಯುವಜನರು ಈ ಸತ್ಯವನ್ನು ಅರ್ಥೈಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ನೀವು ಧರಿಸುವ ರುಮಾಲು ಸಮುದಾಯ, ಕುಟುಂಬ ಹಾಗೂ ನಂಬಿಕೆಯ ಹೆಗ್ಗುರುತಾಗಿದೆ. ನಮ್ಮೆಲ್ಲರನ್ನೂ ಒಂದುಗೂಡಿಸುವ ದ್ಯೋತಕವೂ ಆಗಿದೆ. ರುಮಾಲು ಬಗ್ಗೆ ಇಲ್ಲಿನವರು ತಳೆದಿರುವ ಧೋರಣೆಯನ್ನು ಬದಲಾಯಿಸಬೇಕಿದೆ. ನಾವೆಲ್ಲರೂ ಒಟ್ಟಾಗಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ’ ಎಂದು ಆಶಿಸಿದರು.

ಈ ವೇಳೆ ನ್ಯೂಯಾರ್ಕ್ ಸಂಸದೆ ಜೆನಿಫರ್‌ ರಾಜ್‌ಕುಮಾರ್ ಕೂಡ ಹಾಜರಿದ್ದರು.

ಇತ್ತೀಚೆಗೆ ಬಸ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸಿಖ್‌ ಸಮುದಾಯದ 19 ವರ್ಷದ ಯುವಕನ ಮೇಲೆ ಹಿಸ್ಟೋಫರ್ ಫಿಲಿಪ್ಪಿಕ್ಸ್ ಎಂಬಾತ ದಾಳಿ ನಡೆಸಿದ್ದ. ‘ಅಮೆರಿಕದಲ್ಲಿ ರುಮಾಲು ಧರಿಸುವಂತಿಲ್ಲ’ ಎಂದು ಹೇಳಿದ್ದ ಆತ, ಯುವಕ ಧರಿಸಿದ್ದ ರುಮಾಲನ್ನು ಕಿತ್ತೆಸೆಯಲು ಯತ್ನಿಸಿದ್ದ. ಈ ಪ್ರಕರಣ ನಡೆದ ಬಳಿಕ 66 ವರ್ಷದ ಜಾಸ್ಮರ್‌ ಸಿಂಗ್‌ ಎಂಬುವರ ಮೇಲೂ ಹಲ್ಲೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT