ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಬೆಲೆ ಏರಿಕೆ ಭೀತಿ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೈಲ ಉತ್ಪಾದಕರ ನಿರೀಕ್ಷೆ ಹುಸಿ ಹೋಗಿದೆ. ಜಾಗತಿಕ ಪೇಟೆಯಲ್ಲಿ ತೈಲ ಬೆಲೆ ದಿನೇ ದಿನೇ ಏರುತ್ತಿರುವುದರಿಂದ  ಸಚಿವ ಪ್ರಣವ್ ಅವರು ಅವುಗಳ ಮೇಲಿನ ಕಸ್ಟಮ್ಸ್ ತೆರಿಗೆ (ಆಮದು ಸುಂಕ) ಹಾಗೂ ಎಕ್ಸೈಸ್ ತೆರಿಗೆ (ಉತ್ಪಾದನಾ ಸುಂಕ) ಕಡಿತಗೊಳಿಸಬಹುದೆಂದು ಉದ್ಯಮ ಕಾದು ಕುಳಿತಿತ್ತು. ಕಚ್ಚಾ ತೈಲದ ಮೇಲೆ ಈ ಮುಂಚೆ ಇದ್ದ ಶೇ 5ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮೇಲೆ ಇದ್ದ ಶೇ 7.5ರಷ್ಟು ಕಸ್ಟಮ್ಸ್ ತೆರಿಗೆಯನ್ನು ಸಚಿವರು ಬದಲಾಯಿಸಿಲ್ಲ.

ಅದೇ ರೀತಿ ಪ್ರತಿ ಲೀಟರ್ ಪೆಟ್ರೋಲ್‌ಗೆ ವಿಧಿಸುತ್ತಿದ್ದ ರೂ 14.35 ಮತ್ತು ಡೀಸೆಲ್‌ಗೆ ವಸೂಲು ಮಾಡುತ್ತಿದ್ದ ರೂ 4.60 ಎಕ್ಸೈಸ್ ಸುಂಕ ಕೂಡ ಮುಂದುವರಿಯಲಿದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ಗಳು  ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ 2.25 ನಷ್ಟ ಅನುಭವಿಸುತ್ತಿವೆ. ಬಜೆಟ್‌ನಲ್ಲಿ ಕಸ್ಟಮ್ಸ್ ಹಾಗೂ ಎಕ್ಸೈಸ್ ಡ್ಯೂಟಿ ಕಡಿತವಾಗಬಹುದೆಂಬ ನಿರೀಕ್ಷೆ ಇದ್ದುದರಿಂದ ಈ ಕಂಪೆನಿಗಳು ಬೆಲೆ ಏರಿಕೆಯನ್ನು ತಡೆ ಹಿಡಿದಿದ್ದವು.

ಅದೇ ರೀತಿ ಕಂಪೆನಿಗಳು ಡೀಸೆಲನ್ನು ಆಮದು ದರಕ್ಕಿಂತ ಪ್ರತಿ ಲೀಟರ್‌ಗೆ ರೂ 10.74 ಕಡಿಮೆ ದರಕ್ಕೆ ಮಾರಾಟ ಮಾಡುತ್ತಿವೆ. ಸಾರ್ವಜನಿಕ ವಿತರಣೆ ಮೂಲಕ ನೀಡಲಾಗುವ ಸೀಮೆಎಣ್ಣೆಯಲ್ಲಿ ಪ್ರತಿ ಲೀಟರ್ ಒಂದಕ್ಕೆ ರೂ 21.60 ಹಾಗೂ  ಪ್ರತಿಯೊಂದು ಎಲ್‌ಪಿಜಿ ಅಡುಗೆ ಸಿಲಿಂಡರ್‌ನಿಂದ 356.07 ರೂಪಾಯಿ ನಷ್ಟ ಅನುಭವಿಸುತ್ತಿವೆ. ಬಜೆಟ್‌ನಲ್ಲಿ ತೆರಿಗೆ ಕಡಿತ ಮಾಡಿಲ್ಲವಾದ್ದರಿಂದ ಇವುಗಳ ಬೆಲೆ ಏರಿಕೆಯೊಂದೇ ಉಳಿದಿರುವ ದಾರಿ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಈ ಹೆಚ್ಚಳವನ್ನು ಯಾವಾಗ ಪ್ರಕಟಿಸಲಾಗುತ್ತದೆಂಬುದಷ್ಟೇ ಈಗ ಉಳಿದಿರುವ ಪ್ರಶ್ನೆ. ಸಾಮಾನ್ಯವಾಗಿ, ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಾರದು. ಆದರೆ ಮಾರ್ಚ್ 18ರ ನಂತರ ಬಜೆಟ್ ಅಧಿವೇಶನಕ್ಕೆ ಮೂರ್ನಾಲ್ಕು ವಾರಗಳ ವಿರಾಮ ಇರಲಿದ್ದು, ಆ ಸಂದರ್ಭದಲ್ಲಿ ದರ ಹೆಚ್ಚಳದ ಪ್ರಕಟಣೆ ಹೊರಬೀಳಬಹುದು’ ಎಂಬುದು ತಜ್ಞರ ಲೆಕ್ಕಾಚಾರ.ಹಾಗೆಂದ ಮಾತ್ರಕ್ಕೆ ತೈಲ ಬೆಲೆ ಹೆಚ್ಚಳದ ನಕಾರಾತ್ಮಕ ಪರಿಣಾಮ ಎದುರಿಸಲು ಬೇರೆ ಮಾರ್ಗೋಪಾಯವೇ ಇಲ್ಲವೆಂದಲ್ಲ. ಸರ್ಕಾರ ಇವಕ್ಕೆ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿ ನಷ್ಟ ಸರಿದೂಗಿಸಬಹುದು. ಆದರೆ ಪ್ರಣವ್ ಈ ಸಾಹಸಕ್ಕೆ ಕೈಹಾಕಿಲ್ಲ. ಬದಲಾಗಿ 2011-12ಕ್ಕೆ  ಕೇವಲ 23,640 ಕೋಟಿ ರೂಪಾಯಿ ಸಬ್ಸಿಡಿ ನಿಗದಿ ಮಾಡಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT