ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದನೇ ತರಗತಿ ಪಾಠ ಓದಲೂ ಬಾರದ ವಿದ್ಯಾರ್ಥಿಗಳು

Last Updated 26 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಸರ್ಕಾರಿ ಶಾಲಾ ವ್ಯವಸ್ಥೆಯ ದಯನೀಯ ಪರಿಸ್ಥಿತಿಯನ್ನು ಸರ್ಕಾರೇತರ ಸಂಸ್ಥೆ ಪ್ರಥಮ್‌ ಬಿಡುಗಡೆ ಮಾಡಿರುವ ಶಿಕ್ಷಣದ ಬಗೆಗಿನ ವರದಿ ತೆರೆದಿರಿಸಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶದ ಎಂಟನೇ ತರಗತಿಯ ಶೇ 82.7ರಷ್ಟು  ವಿದ್ಯಾರ್ಥಿಗಳಿಗೆ ಒಂದನೇ ತರಗತಿಯ ಕನ್ನಡ ಪಾಠಗಳನ್ನೇ ಓದುವ ಕೌಶಲ ಇಲ್ಲ. ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸರಳವಾದ ಕೂಡಿಸುವ, ಕಳೆಯುವ ಲೆಕ್ಕಗಳನ್ನೂ ಮಾಡಲು ಬರುವುದಿಲ್ಲ ಎಂದು ವರದಿ ಹೇಳಿದೆ.

ಒಂಬತ್ತನೇ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಏಸರ್‌) ಇತ್ತೀಚೆಗೆ ಎನ್‌ಜಿಒ ಪ್ರಥಮ್‌ ಬಿಡುಗಡೆ ಮಾಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿ­ಗಳ ಕಲಿಕಾ ಮಟ್ಟ 2009ರಿಂದ ಕುಸಿಯು­ತ್ತಲೇ ಸಾಗಿದೆ ಎಂದು ಹೇಳಿದೆ. 2010­ರಿಂದ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದರೂ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮ­ಪಡಿಸುವಲ್ಲಿ ನೆರವಾಗಿಲ್ಲ ಎಂಬು­ದು ಬಹಿರಂಗಪಡಿಸಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆ ಮಕ್ಕಳ ಸಾಮರ್ಥ್ಯ ಮತ್ತೂ ಕಳಪೆ ಎಂದು ವರದಿ ಹೇಳಿದೆ.

2009ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಮೂರನೇ ತರಗತಿಯ ಶೇ 44.5 ವಿದ್ಯಾರ್ಥಿಗಳು ಒಂದನೇ ತರಗತಿಯ ಪಠ್ಯವನ್ನು ಓದಬಲ್ಲವ­ರಾಗಿದ್ದರು. ಆದರೆ 2011ನೇ ವರ್ಷ­ವನ್ನು ಹೊರತುಪಡಿಸಿ ಬೇರೆಲ್ಲ ವರ್ಷ­ಗಳಲ್ಲಿ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. 2010­ರಲ್ಲಿ ಈ ಪ್ರಮಾಣ ಶೇ 40.5ಕ್ಕೆ, 2012ರಲ್ಲಿ ಶೇ 39.7ಕ್ಕೆ ಮತ್ತು 2013ರಲ್ಲಿ ಶೇ 35.2ಕ್ಕೆ ಇಳಿದಿದೆ.

2009ರಲ್ಲಿ ಖಾಸಗಿ ಶಾಲೆಗಳ ಮೂರನೇ ತರಗತಿಯ ಶೇ 58ರಷ್ಟು ವಿದ್ಯಾರ್ಥಿಗಳು ಒಂದನೇ ತರಗತಿಯ ಪಾಠಗಳನ್ನು ಓದಬಲ್ಲವರಾಗಿದ್ದರು. ಆದರೆ 2010ರಲ್ಲಿ ಇದು ಶೇ 43.4, 2011ರಲ್ಲಿ ಶೇ 43.5, 2012ರಲ್ಲಿ ಶೇ 42.3 ಮತ್ತು 2012ರಲ್ಲಿ ಶೇ 38.1ಕ್ಕೆ ಇಳಿದಿದೆ ಎಂದು ವರದಿ ವಿವರಿಸಿದೆ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಒಂದನೇ ತರಗತಿಯ ಶೇ 24.4ರಷ್ಟು ವಿದ್ಯಾರ್ಥಿಗಳಿಗೆ ಕನ್ನಡದ ಅಕ್ಷರಗಳನ್ನು ಗುರುತಿಸುವುದೂ ಸಾಧ್ಯವಾಗುವುದಿಲ್ಲ. ಅಧ್ಯಯನಕ್ಕೆ ಒಳಗಾದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ ಗುರುತಿ­ಸುವುದು ಸಾಧ್ಯವಾಗಿದ್ದರೂ ಪದಗಳನ್ನು ಓದುವ ಸಾಮರ್ಥ್ಯ ಇಲ್ಲ.

ಎಂಟನೇ ತರಗತಿಯ ಶೇ 32.6ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಕಳೆಯುವ ಲೆಕ್ಕ ಮಾಡುವ ಸಾಮರ್ಥ್ಯ ಇದೆ. ಶೇ 44.5ರಷ್ಟು ವಿದ್ಯಾರ್ಥಿಗಳು ಸರಳವಾದ ಭಾಗಿಸುವ ಲೆಕ್ಕಗಳನ್ನು ಮಾಡಬಲ್ಲರು.

ನಾಲ್ಕು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಲೆಕ್ಕದ ಸಾಮರ್ಥ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT