ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಐತೀರ್ಪು ಪ್ರಕಟಣೆಗೆ ಸಿದ್ಧತೆ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: `ಕಾವೇರಿ ನ್ಯಾಯಮಂಡಳಿ'ಯ `ಐತೀರ್ಪು' ಅಧಿಸೂಚನೆ ಪ್ರಕಟಣೆಗೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಅಗತ್ಯ ಸಿದ್ಧತೆ ನಡೆಸಿದ್ದು, ಕಾನೂನು ಇಲಾಖೆ ಅಭಿಪ್ರಾಯ ಕೇಳಿದೆ.

ನ್ಯಾ. ಬ್ರಿಜೇಶ್ ಕುಮಾರ್ ನೇತೃತ್ವದ ಕಾವೇರಿ ನ್ಯಾಯಮಂಡಳಿ ಐದು ವರ್ಷದ ಹಿಂದೆ ನೀಡಿರುವ ಐತೀರ್ಪು ಅಧಿಸೂಚನೆ ಪ್ರಕಟಿಸಲು ಜಲ ಸಂಪನ್ಮೂಲ ಸಚಿವಾಲಯ ಸಿದ್ಧವಿದ್ದರೂ, ಮುಂದೆ ಎದುರಾಗಬಹುದಾದ ಕಾನೂನು ತೊಡಕುಗಳನ್ನು ತಪ್ಪಿಸುವ ಉದ್ದೇಶದಿಂದ ಕಾನೂನು ಇಲಾಖೆ ಅಭಿಪ್ರಾಯ ಕೇಳಿರುವುದಾಗಿ ಅಧಿಕೃತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಕಾವೇರಿ ನ್ಯಾಯಮಂಡಳಿ 2007ರಲ್ಲಿ ನೀಡಿರುವ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿವೆ. ಈ ಅರ್ಜಿಗಳು ಇತ್ಯರ್ಥವಾಗದಿದ್ದರೂ ಐತೀರ್ಪಿನ ಅಧಿಸೂಚನೆ ಪ್ರಕಟಣೆ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ಆದರೆ, ಕಾನೂನು ಇಲಾಖೆ ಸಲಹೆ ಕೇಳಿಯೇ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. `ಅಂತರರಾಜ್ಯ ನದಿ ವಿವಾದ ಕಾಯ್ದೆ' ಅನ್ವಯ ನ್ಯಾಯಮಂಡಳಿ ಐತೀರ್ಪು ಕೊಟ್ಟ ಬಳಿಕ ಕೇಂದ್ರ ಸರ್ಕಾರ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಅಧಿಸೂಚನೆ ಹೊರಡಿಸಬಹುದು.  

ಈ ಹಿನ್ನೆಲೆಯಲ್ಲಿ ಕಾವೇರಿ ನ್ಯಾಯಮಂಡಳಿ ಐತೀರ್ಪು ನೀಡಿದ ಬಳಿಕ ಕೇಂದ್ರ ಕಾನೂನು ಇಲಾಖೆ ಅಭಿಪ್ರಾಯ ಕೇಳಿತ್ತು. ಆದರೆ, ಐತೀರ್ಪು ಪ್ರಶ್ನಿಸಿ ಸಂಬಂಧಪಟ್ಟ ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ `ವಿಶೇಷ ಮೇಲ್ಮನವಿ ಅರ್ಜಿ' (ಎಸ್‌ಎಲ್‌ಪಿ) ಸಲ್ಲಿಸಿದ್ದರಿಂದ ಅಧಿಸೂಚನೆ ಪ್ರಕಟಣೆ ಬೇಡ ಎಂಬ ಅಭಿಪ್ರಾಯವನ್ನು ಕಾನೂನು ಇಲಾಖೆ ನೀಡಿದೆ.

ಇತ್ತೀಚೆಗೆ ಕಾವೇರಿ ಜಲ ವಿವಾದದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟಣೆ ಇನ್ನೂ ಏಕೆ ಆಗಿಲ್ಲ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಿವಾದದ ಮುಂದಿನ ವಿಚಾರಣೆ ವೇಳೆ ವಿವರ ನೀಡುವಂತೆ ಸೂಚಿಸಿತ್ತು. ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ' (ಸಿಎಂಸಿ) ಡಿಸೆಂಬರ್ 7ರಂದು ನಡೆದ ಸಭೆಯಲ್ಲಿ ಒಂದು ತಿಂಗಳಲ್ಲಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟಣೆಗೆ ಕ್ರಮ ಕೈಗೊಳ್ಳಲು ಸಿದ್ಧ ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್ ನ್ಯಾಯಮಂಡಳಿ  ಐತೀರ್ಪು ಅಧಿಸೂಚನೆ ಪ್ರಕಟಣೆ ಕುರಿತು ವಿವರಣೆ ಕೇಳಿರುವುದರಿಂದ ಕೇಂದ್ರ ಸರ್ಕಾರ ಪುನಃ ಕಾನೂನು ಇಲಾಖೆ ಸಲಹೆ ಕೇಳಿದೆ. ಕಾನೂನು ಇಲಾಖೆ ಅಭಿಪ್ರಾಯ ಅನುಸರಿಸಿ ಜಲ ಸಂಪನ್ಮೂಲ ಸಚಿವಾಲಯ ಮುಂದಿನ ಹೆಜ್ಜೆ ಇಡಲಿದೆ. ಕಾವೇರಿ ವಿವಾದದ ಮುಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ ನಿಲುವೇನೆಂದು ನ್ಯಾಯಾಲಯಕ್ಕೆ ಹೇಳಬೇಕಿದೆ.

ಐತೀರ್ಪಿನ ಪರಿಣಾಮಗಳು: ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟವಾದರೆ ಈಗಿರುವ ಪ್ರಧಾನಿ ಅಧ್ಯಕ್ಷತೆಯ `ಕಾವೇರಿ ನದಿ ಪ್ರಾಧಿಕಾರ' (ಸಿಆರ್‌ಎ) ಮತ್ತು ಕೇಂದ್ರ ಜಲ ಸಂಪನ್ಮೂಲ ಇಲಾಖೆ  ಕಾರ್ಯದರ್ಶಿ ನೇತೃತ್ವದ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಅಸ್ತಿತ್ವ ಕಳೆದುಕೊಳ್ಳಲಿವೆ. `ಕಾವೇರಿ ನಿರ್ವಹಣಾ ಮಂಡಳಿ' ಹಾಗೂ `ಕಾವೇರಿ ಜಲ ನಿಯಂತ್ರಣ ಸಮಿತಿ' ರಚನೆ ಆಗಲಿವೆ. ಕಾವೇರಿ ನಿರ್ವಹಣಾ ಮಂಡಳಿಗೆ ನೀರಾವರಿ ಕ್ಷೇತ್ರದಲ್ಲಿ 20 ವರ್ಷದ ಅನುಭವ ಹೊಂದಿರುವ ಕೇಂದ್ರ ಸರ್ಕಾರದ ಮುಖ್ಯ ಎಂಜಿನಿಯರ್ ಅಧ್ಯಕ್ಷರಾಗಿರುತ್ತಾರೆ. ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ನದಿ ಪಾತ್ರದ ರಾಜ್ಯಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

ಕಾವೇರಿ ನಿರ್ವಹಣಾ ಮಂಡಳಿ ಅಧೀನದಲ್ಲಿ `ಕಾವೇರಿ ಜಲ ನಿಯಂತ್ರಣ ಸಮಿತಿ' ಕೆಲಸ ಮಾಡಲಿದೆ. ಇದು ನೀರಿನ ಸಂಗ್ರಹ, ಬೆಳೆ ಮತ್ತಿತರ ವಿಷಯಗಳಲ್ಲಿ ಮಂಡಳಿಗೆ ನೆರವು ನೀಡಲಿದೆ. ಮಂಡಳಿ ಸದಸ್ಯರೊಬ್ಬರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ವಿವಿಧ ಇಲಾಖೆಗಳ ಪರಿಣತರಿರುತ್ತಾರೆ. ಇವೆರಡೂ ಸಂಸ್ಥೆಗಳು ನ್ಯಾಯಮಂಡಳಿ ತೀರ್ಪಿನ ಅನ್ವಯ ನದಿ ಪಾತ್ರದ ರಾಜ್ಯಗಳ ನಡುವೆ ನೀರು ಹಂಚಿಕೆ ಜವಾಬ್ದಾರಿ ನಿರ್ವಹಿಸಲಿವೆ.

ಸುಪ್ರೀಂಕೋರ್ಟ್ ಮುಂದೆ ವಿಶೇಷ ಮೇಲ್ಮನವಿ ಸಲ್ಲಿಸಿರುವುದರ ನಡುವೆಯೇ ಐತೀರ್ಪಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ಕೇಳಿ ಕರ್ನಾಟಕ, ತಮಿಳುನಾಡು ಮತ್ತು ಕೇಂದ್ರ ಸರ್ಕಾರ ನ್ಯಾಯಮಂಡಳಿ ಮುಂದೆಯೂ ಅರ್ಜಿ ಸಲ್ಲಿಸಿವೆ. ಆದರೆ, ನ್ಯಾಯಾಲಯದ ಮುಂದಿರುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ. ಇದೇ ಕಾರಣಕ್ಕೆ ನ್ಯಾಯಮಂಡಳಿ ಮತ್ತೆ ಕಲಾಪ ಆರಂಭಿಸಿಲ್ಲ.

ಪ್ರಧಾನಿಗೆ ಜಯಾ ಪತ್ರ
ಚೆನ್ನೈ (ಪಿಟಿಐ):
ಕಾವೇರಿ ನೀರಿನ ವಿಷಯವಾಗಿ ತಮಿಳು ನಾಡು ಮುಖ್ಯಮಂತ್ರಿ ಜಯಾಲಲಿತಾ ಅವರ ಕ್ಯಾತೆ ಇನ್ನೂ ಮುಗಿದಿಲ್ಲ. ಕೇಂದ್ರದ ಮೇಲೆ ಮತ್ತೆ ಮತ್ತೆ ಒತ್ತಡ ಹಾಕುತ್ತಿರುವ ಜಯಾಲಲಿತಾ, ಕಾವೇರಿ ನ್ಯಾಯಮಂಡಳಿ ನೀಡಿರುವ ಅಂತಿಮ ತೀರ್ಪುನ್ನು ಅಧಿಸೂಚನೆಯಲ್ಲಿ ಪ್ರಕಟಿಸುವಂತೆ ಒತ್ತಾಯಿಸಿ ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದಿಂದ ಕಾವೇರಿ ನೀರು ಬಿಡಿಸುವ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ರೈತರನ್ನು ಕಾಪಾಡುವಂತೆ ಪ್ರಧಾನಿ ಅವರನ್ನು ಜಯಾ ಆಗ್ರಹಿಸಿದ್ದಾರೆ.ಕಾವೇರಿ ನೀರು ಪಡೆಯಲು ಎಲ್ಲಾ ಪ್ರಯತ್ನವನ್ನೂ ಮಾಡಲಾಗಿದೆ. ಆದರೆ ನಮ್ಮ ಪಾಲಿನ ನೀರನ್ನು ಪಡೆಯಲು ಸಾಧ್ಯವಾಗಿಲ್ಲ. ನಮ್ಮ ಎಲ್ಲ ಪ್ರಯತ್ನಗಳು ವ್ಯರ್ಥವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷ ಕಾವೇರಿಯ ಎಲ್ಲ ನೀರನ್ನು ಕರ್ನಾಟಕವೇ ಬಳಸಿಕೊಳ್ಳುತ್ತಿದೆ ಎಂದಿರುವ ಜಯಾ, ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಇಳಿದು ಹೋಗಿದ್ದು, ಕೇವಲ 8.8 ಟಿಎಂಸಿ ಅಡಿ ಮಾತ್ರ ಇದೆ. ಇದನ್ನು ನಂಬಿರುವ ಲಕ್ಷಾಂತರ ರೈತರು ಹಾಗೂ ಕೃಷಿಗೆ  ಮತ್ತು ಪ್ರಾಣಿಗಳಿಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಒಂದೇ ವಾರದಲ್ಲಿ ಪ್ರಧಾನಿ ಅವರಿಗೆ ಕಾವೇರಿ ನೀರು ವಿಷಯವಾಗಿ ಬರೆಯುತ್ತಿರುವ ಎರಡನೇ ಪತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT