ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಜ್ಜಾಗಿರುವ ಗುಜರಾತಿನಲ್ಲಿ ಬಿಜೆಪಿ ವಿರುದ್ಧ ಸೆಟೆದು ನಿಂತಿದ್ದಾರೆ ಈ ಯುವ ನಾಯಕರು

Last Updated 18 ಅಕ್ಟೋಬರ್ 2017, 4:38 IST
ಅಕ್ಷರ ಗಾತ್ರ

ಅಹಮದಾಬಾದ್:  ಕಳೆದ ಕೆಲವು ವರ್ಷಗಳಿಂದ ಗುಜರಾತಿನಲ್ಲಿ ಪಾಟಿದಾರ್, ಒಬಿಸಿ ಮತ್ತು ದಲಿತ ಸಮುದಾಯದ ಮೂವರು ಯುವ ನಾಯಕರು ಸದಾ ಸುದ್ದಿಯಲ್ಲಿದ್ದಾರೆ. ಈ ಯುವ ನಾಯಕರ ಹೋರಾಟದ ಕಿಚ್ಚು ಗುಜರಾತಿನ ಮೇಲೆ ಪರಿಣಾಮ ಬೀರುತ್ತಿದ್ದು, ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ಗುಜರಾತ್‌ನ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ(ಪಿಎಎಸ್‌) ಸಂಚಾಲಕ ಹಾರ್ದಿಕ್‌ ಪಟೇಲ್‌ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ವೇದಿಕೆಯ ಸಂಚಾಲಕ ಜಿಗ್ನೇಶ್ ಮೇವಾನಿ ತಾವು ಬಿಜೆಪಿ ವಿರುದ್ಧ ನಿಲುವು ತಳೆದಿದ್ದೇವೆ ಎಂದು ಮುಕ್ತವಾಗಿ ಹೇಳಿದ್ದಾರೆ. ಅದೇ ವೇಳೆ ಕ್ಷತ್ರಿಯ ಠಾಕೂರ್ ಸೇನಾ ಸಂಚಾಲಕರಾದ ಅಲ್ಪೇಶ್ ಠಾಕೂರ್ ಇಲ್ಲಿಯವರೆಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿಲ್ಲ.

ಗುಜರಾತಿನಲ್ಲಿ ಶೇ. 51ರಷ್ಟು ಒಬಿಸಿ ಇರುವ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವರು ಮುಖ್ಯಪಾತ್ರ ವಹಿಸಲಿದ್ದಾರೆ. ಆದಾಗ್ಯೂ, ತಮಗೆ ಮೀಸಲಾತಿ ನೀಡುವವರೆಗೆ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸುವುದಿಲ್ಲ ಎಂದು ಪಾಟೀದಾರ್ ಸಮುದಾಯ ಹೇಳಿದ್ದರೂ, ಇತ್ತೀಚೆಗೆ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ ಕಾಂಗ್ರೆಸ್‍ನೆಡೆಗೆ ವಾಲಿತ್ತು. ಮುಂದಿನ ಚುನಾವಣೆಯಲ್ಲಿ ತಾವು ಬಿಜೆಪಿ ವಿರುದ್ಧ ಮತ ಚಲಾಯಿಸುವುದಾಗಿ ಹಾರ್ದಿಕ್ ಪಟೇಲ್ ಮತ್ತು ಆತನ ಬೆಂಬಲಿಗರು ಹೇಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಏತನ್ಮಧ್ಯೆ, ಪಾಟಿದಾರ್  ಸಮುದಾಯವನ್ನು ಓಲೈಸುವುದಕ್ಕಾಗಿ ಬಿಜೆಪಿ ಪಾಟಿದಾರ್ ನೇತಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆದಿತ್ತು.

ಇತ್ತ  ಮೇವಾನಿ ಅವರು ಹೇಳುವ ವಿಷಯವೇ ಬೇರೆ ಇದೆ. ಬಿಜೆಪಿ ಹೊರತು ಪಡಿಸಿ ಬೇರೆ ಯಾವುದೇ  ರಾಜಕೀಯ ಪಕ್ಷಗಳು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಆರ್‍ಎಸ್‍ಎಸ್‍ನ ರಾಜಕೀಯ ಸಂಘಟನೆಯಾಗಿದೆ. ಭಾರತದ ಸಂವಿಧಾನದ ಪ್ರಕಾರ ನಮ್ಮ ದೇಶ ಪ್ರಜಾಪ್ರಭುತ್ವ, ಸಮಾಜವಾದಿ ಮತ್ತು ಜಾತ್ಯಾತೀತವಾಗಿದೆ. ಸಂವಿಧಾನವನ್ನು ಬದಲಿಸುವ ಯಾವುದೇ ರೀತಿಯ ಹುನ್ನಾರವನ್ನು ನಾನು ವಿರೋಧಿಸುತ್ತೇನೆ ಎಂದು ನ್ಯೂಸ್ 18 ಜತೆ ಮಾತನಾಡಿದ ಮೇವಾನಿ ಹೇಳಿದ್ದಾರೆ.

ರಾಜಕೀಯದಲ್ಲಿ ದಲಿತರು ಮತ್ತು ಮುಸ್ಲಿಮರು ದಶಕಗಳಿಂದಲೂ ಪ್ರಧಾನ ಪಾತ್ರವಹಿಸಿದ್ದಾರೆ. ಅದೇ ರೀತಿ ಮುಂದುವರಿದರೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 25 ಸೀಟುಗಳ ಮೇಲೆ ದಲಿತ ಮತ್ತು ಮುಸ್ಲಿಂ ಮತಗಳು ಪರಿಣಾಮ ಬೀರಲಿದೆ. ಗುಜರಾತಿನಲ್ಲಿ ದಲಿತರು ಶೇ.7 ರಷ್ಟು ಇದ್ದರೂ, ರಾಷ್ಟ್ರಮಟ್ಟದಲ್ಲಿ ಶೇ. 17ರಷ್ಟಿದ್ದಾರೆ ಎಂದಿದ್ದಾರೆ ಮೇವಾನಿ.

ಒಂದು ವೇಳೆ ನೀವು ಮೂರು ಜನ ಯುವ ನಾಯಕರು ಜತೆಯಾಗಿ ಒಂದೇ ಗುರಿಯತ್ತ ಮುನ್ನಡೆಯುವುದಾದರೆ? ಎಂದು ಕೇಳಿದಾಗ, ಹಿಂದಿನಿಂದಲೂ ದಲಿತರಿಗೆ ಇತರ ಒಬಿಸಿ ಮತ್ತು ಪಟೇಲ್ ಜತೆ ಸಮಸ್ಯೆ ಇದೆ ಎಂಬುದು ನಿಜ. ಆದರೆ ನಾವು ಇನ್ನುಮುಂದೆ ಜತೆಯಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ವೇವಾನಿ ಹೇಳಿದ್ದಾರೆ.

ಒಬಿಸಿಯಲ್ಲಿ ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿ ಬೇಕು ಎಂದು ಪಾಟಿದಾರ್ ಸಮುದಾಯ ಗುಜರಾತಿನಲ್ಲಿ ಹೋರಾಟದ ಕಿಡಿ ಹಚ್ಚಿದಾಗ ಒಬಿಸಿ ಈ ಹೋರಾಟದ ಬಗ್ಗೆ ಮುನಿಸಿಕೊಂಡಿತ್ತು. ಅದೇ ವೇಳೆ ತಾರತಮ್ಯ ಮತ್ತು ದೌರ್ಜನ್ಯ ನಡೆಸುತ್ತಿರುವ ಇತರ ಎಲ್ಲ ಜಾತಿಗಳ ಮೇಲೆ ದಲಿತರಿಗೆ ಕೋಪವಿದೆ.
ಇದೆಲ್ಲದರ ನಡುವೆಯೇ ಒಬಿಸಿ, ಎಸ್‌ಸಿ ಮತ್ತು ಎಸ್‍ಟಿ ಏಕ್ತಾ ಮಂಚ್ ಮತ್ತು ಕ್ಷತ್ರಿಯ ಠಾಕೋಪ್ ಸೇನಾದ ಸಂಚಾಲಕ ಅಲ್ಪೇಶ್ ಠಾಕೂರ್ ಇದುವರಿಗೆ ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಸ್ಪಷ್ಟಪಡಿಸಿಲ್ಲ.

ಸ್ಥಳೀಯ ಕಾಂಗ್ರೆಸ್ ನೇತಾರರ ಪುತ್ರ ಅಲ್ಪೇಶ್ 2016ರಲ್ಲಿ ಮದ್ಯಪಾನ ಚಟಮುಕ್ತಗೊಳಿಸುವ ಅಭಿಯಾನವೊಂದನ್ನು ಆರಂಭಿಸಿದ್ದರು. ಈ ಅಭಿಯಾನದಿಂದಾಗಿ ರಾಜ್ಯದಲ್ಲಿ ಜೂಜು ಮತ್ತು ಮದ್ಯ ಕೇಂದ್ರಗಳ ಮೇಲೆ ದಾಳಿಗಳು ನಡೆದಿದ್ದವು.

ಗಾಂಧೀನಗರದಲ್ಲಿ ಅಕ್ಟೋಬರ್ 23ರಂದು ನಡೆಯಲಿರುವ ಜನಾದೇಶ ಸಮ್ಮೇಳನದಲ್ಲಿ ನಾನು ನನ್ನ ರಾಜಕೀಯ ಯೋಜನೆ ಸೇರಿದಂತೆ ಮುಂದಿನ ಯೋಜನೆಗಳ ಬಗ್ಗೆ ಹೇಳುತ್ತೇನೆ .ನಮಗೆ ಹೋರಾಟ ಯಾವುದೇ ಸಿದ್ದಾಂತ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ ಎನ್ನುತ್ತಾರೆ ಠಾಕೂರ್.

ಆದಾಗ್ಯೂ, ಮೂವರು ಯುವನಾಯಕರು ಜತೆಯಾಗುತ್ತೀರಾ ಎಂದು ಕೇಳಿದಾಗ, ಗುಜರಾತಿಗಳಾಗಿ ನಾವೆಲ್ಲರೂ ಒಂದೇ. ನಮ್ಮೆಲ್ಲರ ಸಮಸ್ಯೆಗಳು ಒಂದೇ ಆಗಿದ್ದರೆ ಖಂಡಿತವಾಗಿಯೂ ಜತೆಯಾಗಿ ಕೆಲಸ ಮಾಡುತ್ತೇವೆ ಎಂದು ಠಾಕೂರ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT