ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಜಯಾ ನಂತರ ಯಾರು?

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಚೆನ್ನೈನ ರಾಜಾಜಿಹಾಲ್ ಮೈದಾನದಲ್ಲಿ ಮಂಗಳವಾರ,ರಾಷ್ಟ್ರಧ್ವಜ ಹೊದ್ದು ಮೌನದಲ್ಲಿ ಲೀನವಾಗಿದ್ದ ಜೆ.ಜಯಲಲಿತಾ ಅವರನ್ನು ನೋಡಿದವರಲ್ಲಿ ಕೆಲವರಿಗಾದರೂ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಾರದೆ ಇರದು.

ಇದೇ ರಾಜಾಜಿಹಾಲ್ ಮೈದಾನದಲ್ಲಿ ಎಂಜಿಆರ್ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಜಯಲಲಿತಾ ಆಗಿನ್ನೂ ಎಐಎಡಿಎಂಕೆ ಪಕ್ಷದ ರಾಜಕೀಯ ಕಾರ್ಯದರ್ಶಿ. ಡಿಎಂಕೆ ಧುರೀಣರ, ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಜಯಲಲಿತಾ, ಎಂಜಿಆರ್ ಮೃತದೇಹದ ಪಕ್ಕ ಬಂದು ನಿಂತಿದ್ದರು.

ಕಾರ್ಯಕರ್ತರು ಜಯಲಲಿತಾ ಅವರನ್ನು ಅಲ್ಲಿಂದ ಕದಲಿಸಲು ನಾನಾ ತರಹದ ಕಿರುಕಳ ನೀಡಲಾರಂಭಿಸಿದ್ದರು. ತಳ್ಳುವುದು, ಪಿನ್‍ನಿನಿಂದ ಚುಚ್ಚುವುದು, ಡಿಕ್ಕಿ ಹೊಡೆಯುವುದು ಮಾಡುತ್ತಿದ್ದರು. ಈ ಅಸಹನೆ ಪರಾಕಾಷ್ಠೆ ತಲುಪಿದ್ದು  ಎಂಜಿಆರ್ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಸಾಗಿಸುವ ವಾಹನದ ಮೇಲೆ ಜಯಲಲಿತಾ ಏರಿದಾಗ. ವಾಹನದ ಮೇಲೇರಿದ ಜಯಲಲಿತಾ ಅವರನ್ನು ಡಿಎಂಕೆ ಕಾರ್ಯಕರ್ತರು ಎಳೆದಾಡಿದರು. ತಲೆಗೂದಲಿಗೆ ಕೈಹಾಕಿ ದರದರ ಎಳೆದು ಕೆಳಗೆ ತಳ್ಳಿದರು. ಹಲ್ಲೆ ನಡೆಯಿತು. ಭಾರವಾದ ಹೃದಯದಿಂದ ಜಯಲಲಿತಾ ಅವರು ಅಲ್ಲಿಂದ ನಿರ್ಗಮಿಸಿದರು.

ಶ್ರೀಮಂತಿಕೆಯಲ್ಲೇ ಹುಟ್ಟಿಬೆಳೆದ ಜಯಲಲಿತಾ ಅವರಿಗೆ, ಈ ಅವಮಾನ ಸಹಿಸುವ ಶಕ್ತಿ ಇರಲಿಲ್ಲ. ಮನೆಗೆ ಬಂದರು. ಅವರ ಹಿಂದೆಯೇ ಸಾವಿರಾರು ಅಭಿಮಾನಿಗಳೂ ಬಂದರು. ಎಂಜಿಆರ್ ಹುಟ್ಟುಹಾಕಿದ ಅಣ್ಣಾಡಿಎಂಕೆ ಪಕ್ಷವನ್ನು ಮುನ್ನಡೆಸಬೇಕೆಂದು ಪರಿಪರಿಯಾಗಿ ಬೇಡಿಕೊಂಡರು. ತನ್ನ ನಂತರ ಪಕ್ಷವನ್ನು ಮುನ್ನಡೆಸಬೇಕೆಂದು ಎಂಜಿಆರ್ ಕೂಡ ಜಯಾ ಅವರಿಂದ ಭಾಷೆ ತೆಗೆದುಕೊಂಡಿದ್ದರಂತೆ. ಎದುರು ನಿಂತ ಜನ.

ವಾದ್ಯಾರ್ ಅವರಿಗೆ ನೀಡಿದ್ದ ಭಾಷೆ. ಎರಡೂ ಜಯಲಲಿತಾ ಅವರಿಗೆ ಸಾಕಾಯಿತು. ಕರುಣಾನಿಧಿ ಅವರು ಮಾಡಿದ ಅವಮಾನ ನೆನಪಾಯಿತು. ಡಿಎಂಕೆ ಯನ್ನು ನೆಲಸಮ ಮಾಡಲು ಪಣತೊಟ್ಟು, ಎಂಜಿಆರ್ ಅವರ ಹೆಸರನ್ನು ಬಂಡವಾಳ ಮಾಡಿಕೊಂಡು ಮುನ್ನಡೆದರು, ಕರುಣಾನಿಧಿ ಅವರಿಗೆ ಅಧಿಕಾರ ಎನ್ನುವುದು ಕನಸಾಯಿತು. ಸೇಡು ಯಾವ ರೀತಿ ತೀರಿಸಿಕೊಂಡರು ಎನ್ನುವುದು ಈಗ ಇತಿಹಾಸ.

ಜಯಲಲಿತಾ ಅವರಿಗೆ ಪಕ್ಷದ ಚುಕ್ಕಾಣಿ ಹಿಡಿಯುವಾಗ, ದ್ರಾವಿಡ ಕಳಗಂ ನ ಇತಿಹಾಸ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಬ್ರಾಹ್ಮಣ ಧರ್ಮವನ್ನು, ಪಾರಮ್ಯವನ್ನು ಅಡಿಗೊತ್ತಲು ಅಸ್ತಿತ್ವಕ್ಕೆ ಬಂದ ದ್ರಾವಿಡ ಚಳವಳಿಯ ಮೂಲತತ್ವವನ್ನೇ ಮರೆತು, ಮೈಸೂರು ಮೂಲದ ಮೇಲುಕೋಟೆ ಪರಂಪರೆಯ ಬ್ರಾಹಣ ಮಹಿಳೆಯ ಕೈಗೆ ದ್ರಾವಿಡವಾದವೇ ಆಧಾರವಾದ ಪಕ್ಷದ ಚುಕ್ಕಾಣಿಯನ್ನು ಪಕ್ಷದ ಕಾರ್ಯಕರ್ತರೇ ನೀಡಿಬಿಟ್ಟರು. ಇದು ಇತಿಹಾಸದ ಚೋದ್ಯ.

ಹಾಡುಹಗಲೇ, ಲಕ್ಷಾಂತರ ಜನರು ಸೇರಿರುವ ಮೈದಾನದಲ್ಲಿ ಅವಮಾನ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಹುಟ್ಟಿಕೊಂಡ ಪಕ್ಷಕ್ಕೆ, ತತ್ವ, ಸಿದ್ಧಾಂತಕ್ಕಿಂತ ಅಧಿಕಾರದ ಅಮಲೇ ಜಾಸ್ತಿಯಾಗಿರುತ್ತದೆ. ಹಾಗೆ ನೋಡಿದರೆ ದ್ರಾವಿಡ ಕಳಗಂನ ಇತಿಹಾಸವೇ ಭಿನ್ನಾಭಿಪ್ರಾಯಗಳಿಂದ ಸಿಡಿದು ಬಂದದ್ದಾಗಿದೆ. ಸವಾಲುಗಳ ಮೂಲಕ ಹುಟ್ಟಿಕೊಂಡದ್ದಾಗಿದೆ.

1916 ರಲ್ಲಿ ಹುಟ್ಟಿಕೊಂಡ ಜಸ್ಟೀಸ್‍ಸ್‌ ಪಾರ್ಟಿಯು ಆರಂಭಿಸಿದ ಐತಿಹಾಸಿಕ ವಿಕಾಸದ ಫಲ 'ದ್ರಾವಿಡ ಕಳಗಂ'. ಅದರ ನೀತಿ ನಿಲುವುಗಳನ್ನು ಇ.ವಿ.ರಾಮಸ್ವಾಮಿ ನಾಯ್ಕರ್ ವಿರೋಧಿಸಿ ಸಿಡಿದೆದ್ದರು. ಆರ್ಯ ಪರಂಪರೆ, ನಂಬಿಕೆ,ಧರ್ಮ ಹಾಗೂ ಸಂಸ್ಕೃತಿಯ ವಿರುದ್ಧ ರಾಮಸ್ವಾಮಿ ನಾಯ್ಕರ್ ಚಳವಳಿಯನ್ನೇ ಆರಂಭಿಸಿದರು.

ದ್ರಾವಿಡ ಸಂಸ್ಕೃತಿಯನ್ನು , ನಾಗರಿಕತೆಯನ್ನು ಎತ್ತಿಹಿಡಿದು ದ್ರಾವಿಡನಾಡು ಸ್ಥಾಪಿಸಬೇಕೆಂಬುದು ನಾಯ್ಕರ್ ಆಶಯ. ಹೀಗಾಗಿ ಜಸ್ಟೀಸ್ ಪಾರ್ಟಿಯಿಂದ ಹೊರಬಿದ್ದು ದ್ರಾವಿಡ ಕಳಗಂ (1944) ಸ್ಥಾಪಿಸಿದರು. ಸಾಮಾಜಿಕ ಸುಧಾರಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿದ ದ್ರಾವಿಡ ಕಳಗಂನ ಹೋರಾಟದಿಂದಾಗಿ, ಬ್ರಾಹ್ಮಣೇತರರಿಗೂ ದೇವಾಲಯ ಪ್ರವೇಶ ಮಸೂದೆ ಜಾರಿಗೊಳ್ಳಲು ಕಾರಣವಾಯಿತು.

ತಾನೇ ಹುಟ್ಟುಹಾಕಿದ ದ್ರಾವಿಡವಾದ ಸಿದ್ಧಾಂತದ ಮಾರ್ಗ ಬಿಟ್ಟು ರಾಮಸ್ವಾಮಿ ನಾಯ್ಕರ್ ಅಡ್ಡದಾರಿ ಹಿಡಿದಾಗ, ಅವರ ವಿರುದ್ಧ ಸಿಡಿದೆದ್ದವರು ಸಿ.ಎನ್.ಅಣ್ಣಾದೊರೈ, ಎಂ.ಕರುಣಾನಿಧಿ. ಪೆರಿಯಾರ್ ಅವರಿಂದ ದೂರವಾದ ಅಣ್ಣಾದೊರೈ ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷ ಸ್ಥಾಪಿಸಿ, ಅದಕ್ಕೊಂದು ಸ್ಪಷ್ಟ ರೂಪರೇಷೆಗಳನ್ನು ನೀಡಿದರು.

ಈ ಇಬ್ಬರು ಶ್ರಮಜೀವಿ ಸಂಘಟಕರ ಜೊತೆ ಇದ್ದ ಎಂ.ಜಿ.ರಾಮಚಂದ್ರನ್, ಅಣ್ಣಾದೊರೈ ಅವರ ನಿಧನಾನಂತರ ಕರುಣಾನಿಧಿ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆಯಿಂದ ಹೊರಬಿದ್ದಾಗ ಹುಟ್ಟಿಕೊಂಡದ್ದು ಅಣ್ಣಾದ್ರಾವಿಡ ಮುನ್ನೇಟ್ರ ಕಳಗಂ. ಜನಪ್ರಿಯತೆಯ ಉತ್ತುಂಗದಲ್ಲಿದ್ದ ಎಂಜಿಆರ್, ತಮ್ಮ ಜನಪ್ರಿಯತೆಯನ್ನೇ ಪಕ್ಷದ ಬಂಡವಾಳವನ್ನಾಗಿಸಿದ್ದರು. ಎಂಜಿಆರ್ ಆ ವೇಳೆಗೆ ಬಡ ಮತದಾರರ ಪಾಲಿಗೆ 'ದೇವತಾಸ್ವರೂಪಿ'ಯಾಗಿ ಬಿಟ್ಟಿದ್ದರು. ಅವರು ಹೇಳಿದ್ದೇ ಆದೇಶ. ನಡೆದದ್ದೇ ಹಾದಿ. ಅವರನ್ನು ಯಾರೂ ಪ್ರಶ್ನಿಸುವಂತೆಯೇ ಇರಲಿಲ್ಲ.

ಹೀಗೆ ಪಕ್ಷವನ್ನು ಸಿದ್ಧಾಂತದ ಮೂಲಕ ಬಲಪಡಿಸದೆ, ವೈಯಕ್ತಿಕ ಜನಪ್ರಿಯತೆಯ ಆಧಾರದ ಮೇಲೆ ಕಟ್ಟಿ ಬೆಳೆಸಿದ ಕಾರಣದಿಂದಾಗಿ 72 ವರ್ಷಗಳ ಇತಿಹಾಸವಿರುವ ದ್ರಾವಿಡ ಪಕ್ಷದ ಬುಡ ಶಿಥಿಲವಾಗಿದೆ. ಈ ಕಾರಣದಿಂದಲೇ ಇಂದು ಜಯಲಲಿತಾ ನಂತರ ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಹೌದು, ತಮಿಳುನಾಡಿನಲ್ಲಿ ಇಂದು ರಾಜಕೀಯ ಶೂನ್ಯ ಆವರಿಸಿದೆ.

ರಾಜ್ಯವೀಗ ರಾಜಕೀಯವಾಗಿ ನಾಯಕತ್ವವಿಲ್ಲದ ಮನೆಯಂತಾಗಿದೆ. ಈಗ ಆರು ಕಳಗಂಗಳು ಅಸ್ತಿತ್ವದಲ್ಲಿದ್ದರೂ, ಅವರು ಯಾರಿಗೂ ಸಮಗ್ರ ತಮಿಳುನಾಡಿನ ಜನರನ್ನು ಸೆಳೆಯುವ ಚಾಕಚಕ್ಯತೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಅವರ ವಿರುದ್ಧವಿದ್ದ ಅಕ್ರಮ ಆಸ್ತಿ ಹಗರಣವನ್ನೇ ದಾಳವಾಗಿ ಬಳಸಿದ ಡಿಎಂಕೆ, ಹಿರಿಯ ನಾಯಕ ಕರುಣಾನಿಧಿ ಅವರಿಗೆ ಮುಖ್ಯಮಂತ್ರಿಯಾಗಲು 'ಕೊನೆಯ ಅವಕಾಶ' ನೀಡಬೇಕೆಂದು ಮತದಾರರ ಮೇಲೆ ಭಾವನಾತ್ಮಕ ಅಸ್ತ್ರವನ್ನು ಬಳಸಿತ್ತು.

ಡಿಎಂಕೆ ಪಕ್ಷದ ಈ ವಾದದ ಪ್ರಕಾರ ನೋಡುವುದಾದರೆ, ಕರುಣಾನಿಧಿ ಅವರಿಗೂ ಅದೇ ಕೊನೆಯ ಚುನಾವಣೆ. ಡಿಎಂಕೆಯಲ್ಲಿ ಕರುಣಾನಿಧಿ ಅವರ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಅವರನ್ನು ಬಿಂಬಿಸಲಾಗಿದೆ. ಆದರೂ ಕೌಟುಂಬಿಕ ಕಲಹ, ಹಗರಣಗಳ ಭಾರದಿಂದ ಕುಗ್ಗಿಹೋಗಿರುವ ಡಿಎಂಕೆ ಮರಳಿ ಜನ ಬೆಂಬಲ ಗಳಿಸಲು ಏನಾದರೂ ಪವಾಡ ಮಾಡಬೇಕಷ್ಟೇ.

ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರನ್ನೂ ದೂರವಿರಿಸಿ, ಕಳಗಂನದೇ ಆದ ಮೂರನೇ ರಂಗವೊಂದನ್ನು ರಚಿಸುವ ಯತ್ನ ನಟ ವಿಜಯಕಾಂತ್ ಅವರಿಂದ ನಡೆಯಿತು.ತಮಿಳುನಾಡಿನ ಜನತೆಗೆ ಎರಡೂ ದ್ರಾವಿಡ ಕಳಗಂಗಳಿಂದಲೂ ಭ್ರಮನಿರಸನವಾಗಿರುವುದು ಸ್ಪಷ್ಟವಾಗಿದ್ದರೂ ಅಲ್ಲಿನ ಜನರಿಗೆ ರಾಷ್ಟ್ರೀಯ ಪಕ್ಷಗಳನ್ನು ಅಪ್ಪಿಕೊಳ್ಳುವುದು ಬೇಕಿರಲಿಲ್ಲ.

ಎರಡು ಚುನಾವಣೆಗಳಲ್ಲಿ ಭರವಸೆ ಹುಟ್ಟಿಸಿದ್ದ ವಿಜಯಕಾಂತ್, ಎಐಎಡಿಎಂಕೆ ಜೊತೆ ಮೈತ್ರಿ ಸಾಧಿಸಿ, ಪ್ರತಿಪಕ್ಷ ನಾಯಕರೂ ಆದರು. ಕರುಣಾನಿಧಿ, ಜಯಲಲಿತಾ ನಂತರ ನಮ್ಮ ನಾಯಕ ವಿಜಯಕಾಂತ್ ಎಂದೇ ಜನ ನಿರ್ಧರಿಸಿದ್ದರು. ಆದರೆ ಭರವಸೆಯ ನಾಯಕ ವಿಜಯಕಾಂತ್, ಕಳೆದ ಚುನಾವಣೆಯಲ್ಲಿ ಸಾರ್ವಜನಿಕವಾಗಿ ನಡೆದುಕೊಂಡ ರೀತಿ, ಜನರಿಗೆ ಅವರ ಬಗ್ಗೆ ಇದ್ದ ಎಲ್ಲ ನಂಬಿಕೆಗಳಿಗೂ ಎಳ್ಳುನೀರು ಬಿಟ್ಟಿತು.

ಸದಾ 'ಮತ್ತು' ಏರಿದಂತೆ ವರ್ತಿಸುವುದು, ಸ್ವಯಂ ನಿಲ್ಲುವ ಸಾಮರ್ಥ್ಯವಿಲ್ಲದೆ ಸಹಚರರ ಹೆಗಲ ಬೆಂಬಲ ಪಡೆಯುವುದು, ಶಾಸಕರನ್ನು, ಕಾರ್ಯಕರ್ತರನ್ನು ವೇದಿಕೆಯ ಮೇಲೆಯೇ ಥಳಿಸುವುದು, ಇಂತಹ ವರ್ತನೆಗಳೆಲ್ಲಾ ಅವರನ್ನು ರಾಜಕೀಯ ರಂಗದಿಂದ ಮೂಲೆಗುಂಪಾಗುವಂತೆ ಮಾಡಿತು. ದ್ರಾವಿಡ ಕಳಗಂನ ಮೂಲತತ್ವಗಳ ಗಂಧಗಾಳಿಯೂ ಇಲ್ಲದೆ, ತನ್ನದೆ ಜನಪ್ರಿಯತೆಯ ಮೇಲೆಯೇ ಮುಖ್ಯಮಂತ್ರಿಯಾಗಿ ಬಿಡುತ್ತೇನೆ ಎಂಬ ಅವರ ಆತುರಕ್ಕೆ ಜನ ಮಣೆಹಾಕಿಲ್ಲ. ಹೀಗಾಗಿ ಜಯಲಲಿತಾ ನಂತರ ವಿಜಯಕಾಂತ್ ಎಂಬ ರಾಜಕೀಯ ಲೆಕ್ಕಾಚಾರಗಳೆಲ್ಲಾ ಬುಡಮೇಲಾಯಿತು.

ಜಯಲಲಿತಾ ಅವರ ನಿಧನದಿಂದಾಗಿ ಮುಂದೆ ಯಾವ ಪಕ್ಷಗಳಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಆದರೆ ಲಾಭ ಪಡೆಯುವ ಸ್ಥಿತಿಯಲ್ಲಿ ಯಾವ ಪಕ್ಷಗಳೂ ಇಲ್ಲ ಎನ್ನುವುದೇ ಕುತೂಹಲ. ಎಲ್ಲ ಪಕ್ಷಗಳ ದೋಣಿಯೂ ತೂತು. ಡಿಎಂಕೆ ಪಕ್ಷ ಸದ್ಯಕ್ಕೆ ಸದೃಢ ಎಂದೇ ಭಾವಿಸಿದರೂ, ಸ್ಟಾಲಿನ್ ಮತ್ತು ಅಳಗಿರಿಯ ನಡುವೆ ಉತ್ತರಾಧಿಕಾರಿ ಪ್ರಶ್ನೆ ದೊಡ್ಡದಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನೇ ಅವರು ವಿಭಜಿಸಿಕೊಳ್ಳುವ ಹಂತ ತಲುಪಬಹುದು. ಡಿಎಂಡಿಕೆಯ ವಿಜಯಕಾಂತ್ ಸ್ವಯಂಕೃತ ಅಪರಾಧಗಳಿಂದ ನರಳುತ್ತಿದ್ದಾರೆ. ವೈಕೊ, ರಾಮದಾಸ್, ವೀರಮಣಿ ಮೊದಲಾದವರ ಕಳಗಂಗಳಿಗೆ ಜನ ಬೆಂಬಲವಿಲ್ಲ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕಳಗಂಗಳ ಬೆಂಬಲವಿಲ್ಲದೆ, ಸ್ವತಂತ್ರವಾಗಿ ಗೆಲ್ಲುವ ಸಾಮರ್ಥ್ಯ ಪಡೆದಿಲ್ಲ. ತಮಿಳುನಾಡಿನಲ್ಲಿ ಇಂದು ಇದ್ದಕ್ಕಿದ್ದಂತೆ ಸೃಷ್ಟಿಯಾಗಿರುವ ರಾಜಕೀಯ ಶೂನ್ಯತೆ, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ರಾಜಕೀಯ ತಿರುವುಗಳಿಗೆ ಕಾರಣವಾಗುವ ಸಾಧ್ಯತೆಇದೆ.

ಜಯಲಲಿತಾ ಅವರು ಅವರ ಪಕ್ಷದಲ್ಲೇ ಇನ್ನೊಬ್ಬ ನಾಯಕನನ್ನು ಸೃಷ್ಟಿಸಲಿಲ್ಲ. ತಮ್ನನ್ನು ಮೀರಿ, ಇತರರು ಯಾರೂ ಒಂದು ಇಂಚು ಎತ್ತರದಲ್ಲಿಯೂ ನಿಲ್ಲುವುದನ್ನು ಅವರು ಸಹಿಸುತ್ತಿರಲಿಲ್ಲ. ತಲೆಬಗ್ಗಿಸಿ, ನಡುಬಗ್ಗಿಸಿ ನಿಂತವರಷ್ಟೇ  ಅವರ ಪಕ್ಷದಲ್ಲಿ ಉಳಿಯಬಹುದಿತ್ತು. ಇಂತಹ ಹಿನ್ನೆಲೆಯ ಪನ್ನೀರ್ ಸೆಲ್ವಂ ಎಐಎಡಿಎಂಕೆ ಪಕ್ಷವನ್ನು ಹೇಗೆ ಮುನ್ನಡೆಸುತ್ತಾರೆ? ಈಗಾಗಲೇ ಶಶಿಕಲಾ ಗುಂಪು,  ಪನ್ನೀರ್ ಸೆಲ್ವಂ ಗುಂಪು ರಾಜಕೀಯ ಅರಂಭಿಸಿವೆ. ಮುಂದಿನ ಚುನಾವಣೆಯ ವೇಳೆಗೆ ಇದು ನಾಯಕನಿಲ್ಲದ ಪಕ್ಷವಾಗುವ ಸಾಧ್ಯತೆ ಇದೆ. ಬಿರುಗಾಳಿಯ ರೀತಿ ನಾಯಕನೊಬ್ಬ ಅವತರಿಸದಿದ್ದರೆ, 'ಕಳಗಂ' ಇತಿಹಾಸವೂ ಮರೀನಾ ಬೀಚಿನಲ್ಲಿ ಸಮಾಧಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT