ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 24ರಂದು ಆರಂಭಗೊಂಡು ಡಿಸೆಂಬರ್ 23ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.
ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಧಿವೇಶನದ ದಿನಾಂಕಗಳನ್ನು ರಾಷ್ಟ್ರಪತಿಗೆ ಶಿಫಾರಸು ಮಾಡಿದೆ. ಒಂದು ತಿಂಗಳ ಕಾಲ ನಡೆಯುವ ಅಧಿವೇಶನದಲ್ಲಿ 22 ದಿನ ಕಲಾಪಗಳು ನಡೆಯಲಿವೆ. ಅವುಗಳಲ್ಲಿ ನಾಲ್ಕು ದಿನಗಳನ್ನು ಖಾಸಗಿ ಸದಸ್ಯರಿಗೆ ಸಂಬಂಧಿಸಿ ಕಲಾಪಗಳಿಗೆ ಮೀಸಲು ಇರಿಸಲಾಗಿದೆ.
ಎರಡೂ ಸದನಗಳಲ್ಲಿ ಒಟ್ಟು 67 ಮಸೂದೆಗಳು ಅಂಗೀಕಾರಕ್ಕೆ ಬಾಕಿ ಇವೆ. ರಾಜ್ಯಸಭೆಯಲ್ಲಿ 59 ಮಸೂದೆಗಳು ಬಾಕಿ ಇದ್ದರೆ ಲೋಕಸಭೆಯಲ್ಲಿ ಎಂಟು ಮಸೂದೆಗಳು ಬಾಕಿ ಇವೆ.
ಮುಖ್ಯಾಂಶಗಳು |
ಕನಿಷ್ಠ 30–35 ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯಲಿರುವ ಎರಡನೇ ಪ್ರಮುಖ ಅಧಿವೇಶನವಾಗಿದೆ. ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಸದಸ್ಯರ ಆಸನ ವ್ಯವಸ್ಥೆ ಇನ್ನೂ ಅಂತಿಮಗೊಂಡಿಲ್ಲ. ಅಧಿವೇಶನ ಆರಂಭವಾಗುವ ಮೊದಲು ಆಸನ ವ್ಯವಸ್ಥೆಯೂ ಅಂತಿಮವಾಗುವ ನಿರೀಕ್ಷೆ ಇದೆ.
ಹಿಂದಿನ ಐದು ಚಳಿಗಾಲದ ಅಧಿವೇಶನಗಳಲ್ಲಿ ಸರಾಸರಿ 22 ದಿನಗಳ ಕಲಾಪ ನಡೆದಿದೆ. ಅದರ ಆಧಾರದಲ್ಲಿ ಈ ಬಾರಿಯ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಸಂತೋಷ್ ಗಂಗ್ವಾರ್ ವಿಶೇಷ ಆಹ್ವಾನಿತರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.