ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಕೊರತೆ ನಡುವೆ ಮತದಾನ

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ಲೂದಿಯಾನ:  ಪಂಜಾಬ್ ಒಂದು ಕಾಲದಲ್ಲಿ `ಪಂಚ ನದಿಗಳ ನಾಡು~ ಎಂಬ ಹೆಗ್ಗಳಿಕೆಯಿಂದ ಬೀಗುತಿತ್ತು. ದೇಶ ವಿಭಜನೆಯಾದ ಬಳಿಕ ಎರಡು ನದಿಗಳು ಪಾಕಿಸ್ತಾನದ ಪಾಲಾಗಿವೆ. ಭಾರತದ ನಾಗರೀಕತೆಯ ಮೂಲವಾದ `ಸಿಂಧು~ (ಇಂಡಸ್ ವ್ಯಾಲಿ) `ಚೇನಾಬ್~ ನದಿಗಳು ನೆರೆಯ ದೇಶದ ಸಮೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿವೆ. ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳು ಮಾತ್ರ ಪಂಜಾಬಿನಲ್ಲಿ ಮೈದುಂಬಿ ಹರಿಯುತ್ತಿವೆ.

ಎರಡು ನದಿಗಳು ನೆರೆಯವರ ಪಾಲಾದರೂ ಪಂಜಾಬಿನ ಫಲವತ್ತತೆ ಕಡಿಮೆಯಾಗಿಲ್ಲ. ಎತ್ತ ನೋಡಿದರೂ ಹಸಿರು ನಳನಳಿಸುತ್ತದೆ. ಭತ್ತ, ಗೋಧಿ ಕಣಜದಲ್ಲಿ ಬಾರ್ಲಿ, ಕಬ್ಬು, ಹತ್ತಿ, ಎಣ್ಣೆ ಬೀಜಕ್ಕೆ ಕೊರತೆಯಿಲ್ಲ. ದೇಶದ ಕೆಲವೆಡೆ ಬೇಸಾಯಕ್ಕೆ ಎತ್ತು, ಕೋಣಗಳಿಗೆ ಪರದಾಡುವ ಕಾಲದಲ್ಲೇ ಇಲ್ಲಿ ಟ್ರ್ಯಾಕ್ಟರ್, ಟ್ರೇಲರ್ ಬಂದುಬಿಟ್ಟಿದ್ದವು. ಹೊಲಗದ್ದೆಗಳಿಗೆ ನೀರೆತ್ತಲು ಮೋಟಾರ್ ಬಳಕೆಯಾಗುತಿತ್ತು.ಇದರಿಂದ ಪಂಜಾಬ್ ಎಂದರೆ ಬೇರೆ ಭಾಗಗಳ ರೈತರು ಬೆರಗುಗಣ್ಣಿಂದ ನೋಡುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಪಂಜಾಬ್ ರೈತರು ಸಂಕಷ್ಟದಲ್ಲಿದ್ದಾರೆ. ಉಳಿದೆಡೆಯಂತೆ ಬೇಸಾಯಕ್ಕೆ, ಮಕ್ಕಳ ಮದುವೆಗೆ ಮಾಡಿದ ಸಾಲ- ಸೋಲ ಕಟ್ಟಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಒದ್ದಾಡುತ್ತಿದ್ದಾರೆ. ಬಹಳಷ್ಟು ಮಂದಿ ಸಿಕ್ಕಷ್ಟು ಬೆಲೆಗೆ ಭೂಮಿ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರದ ಅಧಿಕೃತ ಅಂಕಿಸಂಖ್ಯೆ ಪ್ರಕಾರವೇ ಕಳೆದ ಹತ್ತು ವರ್ಷಗಳಲ್ಲಿ 2500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸತ್ತವರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದರೂ ಇದುವರೆಗೂ ವಿತರಣೆ ಆಗಿಲ್ಲ. ಪರಿಹಾರ ಕೊಡುವ ವಿಷಯದಲ್ಲಿ ಕಾಂಗ್ರೆಸ್, ಅಕಾಲಿದಳ ಸರ್ಕಾರ ಒಂದೇ ನೀತಿ ಅನುಸರಿಸುತ್ತಿವೆ ಎಂದು ಪಂಜಾಬಿನ ಗ್ರಾಮೀಣ ಜನರು ಕೊರಗುತ್ತಿದ್ದಾರೆ.

ಇಡೀ ರಾಜ್ಯದ ರೈತರ ಬದುಕು ಇದೇ ರೀತಿ ಎಂದು ಹೇಳಲಾಗದು. ಪಟ್ಟಣ ಪ್ರದೇಶಗಳ ಅಕ್ಕಪಕ್ಕದ ರೈತರು ಬಹಳ ಹಿಂದೆಯೇ ಕೃಷಿಗೆ ವಿದಾಯ ಹೇಳಿದ್ದಾರೆ. `ರಿಯಲ್ ಎಸ್ಟೇಟ್~ ಏಜೆಂಟರಿಗೆ ಕೋಟ್ಯಂತರ ರೂಪಾಯಿಗೆ ಜಮೀನು ಮಾರಿ ಬೇರೆ ಊರುಗಳಿಗೆ ಇಲ್ಲವೆ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಮೊಹಾಲಿ, ಜಲಂಧರ್, ಲೂದಿಯಾನ, ಬಟಿಂಡ, ಅಮೃತಸರ ಮತ್ತಿತರ ಪಟ್ಟಣಗಳಲ್ಲಿ ಮನೆ, ನಿವೇಶನ ಸಾಮಾನ್ಯರ ಕೈಗೆಟಕುವುದಿಲ್ಲ. ಮೋಹಾಲಿಯಲ್ಲಿ `ಸಿಂಗಲ್ ಬೆಡ್ ರೂಂ~ ಮನೆ ಬೆಲೆ 50ರಿಂದ 60ಲಕ್ಷ!

ಸೋಮವಾರ ನಡೆಯುವ ಚುನಾವಣೆಯಲ್ಲಿ ಅಕಾಲಿದಳ, ಕಾಂಗ್ರೆಸ್, ಪಂಜಾಬ್ ಪೀಪಲ್ ಪಕ್ಷ, ಬಿಜೆಪಿ, ಬಿಎಸ್‌ಪಿ ಮತ್ತು ಸಿಪಿಐ ಸ್ಪರ್ಧಿಸಿವೆ. 117ಸ್ಥಾನಗಳ ವಿಧಾನಸಭೆಗೆ ನೇರ ಪೈಪೋಟಿ ಇರುವುದು ಅಕಾಲಿದಳ ಮತ್ತು ಕಾಂಗ್ರೆಸ್ ಮಧ್ಯೆ. ಈ ಚುನಾವಣೆಯನ್ನು ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಮತ್ತು ಅಮರೀಂದರ್ ಸಿಂಗ್ ಮಧ್ಯೆ `ಯುದ್ಧ~ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅಕಾಲಿದಳದಿಂದ ಬಂಡಾಯವೆದ್ದಿರುವ ಮುಖ್ಯಮಂತ್ರಿ ಬಾದಲ್ ಅವರ ಕಿರಿಯ ಸೋದರ ಗುರುದಾಸ್ ಪುತ್ರ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್‌ಸಿಂಗ್ ಹೊಸದಾಗಿ ಕಟ್ಟಿರುವ `ಪಂಜಾಬ್ ಪೀಪಲ್ ಪಾರ್ಟಿ~ ಮೊದಲ ಸಲ `ಅಖಾಡ~ಕ್ಕೆ ಇಳಿದಿದೆ. 93ಕಡೆ ಸ್ಪರ್ಧೆ ಮಾಡಿದೆ. ಉಳಿದ ಸ್ಥಾನಗಳನ್ನು ಸಿಪಿಐ ಮತ್ತಿತರ ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಮಾಯಾವತಿ ಅವರ ಬಿಎಸ್‌ಪಿ ಅಭ್ಯರ್ಥಿಗಳು ಎಲ್ಲೆಡೆ ನಿಂತಿದ್ದಾರೆ.

ಇದುವರೆಗೆ ಪಂಜಾಬಿನ ಮತದಾರರು ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಬಂದಿದ್ದಾರೆ. ಒಂದು ಅವಧಿಗೆ ಆಯ್ಕೆಯಾದ ಪಕ್ಷವನ್ನು ಮತ್ತೊಂದು ಅವಧಿಗೆ ಚುನಾಯಿಸಿಲ್ಲ. ಒಂದೊಂದು ಸಲ ಒಂದೊಂದು ರಾಜಕೀಯ ಪಕ್ಷಕ್ಕೆ ಸಮಾನ ಅವಕಾಶ ನೀಡುತ್ತಿದ್ದಾರೆ. ಈಗ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಮೂರನೇ ಪರ್ಯಾಯ ಪಕ್ಷ ಹುಟ್ಟಿಕೊಂಡಿದೆ.

ಕಾಂಗ್ರೆಸ್. ಅಕಾಲಿದಳದ ಟಿಕೆಟ್‌ಗೆ ಪ್ರಯತ್ನಿಸಿ ವಂಚಿತರಾದ  ಅತೃಪ್ತರು ಮನ್‌ಪ್ರೀತ್ ಅವರನ್ನು ಹಿಂಬಾಲಿಸಿದ್ದಾರೆ. ಇದಲ್ಲದೆ, ಸ್ವತಂತ್ರ ಬಂಡಾಯ ಅಭ್ಯರ್ಥಿಗಳಿದ್ದಾರೆ. ಯಾರ ಬುಟ್ಟಿಗೆ ಪಿಪಿಪಿ ಕೈ ಹಾಕಬಹುದೆಂಬ ಆತಂಕ ಎರಡು ಪ್ರಮುಖ ಪಕ್ಷಗಳಿಗೂ ಇದೆ. ಮತ್ತೊಂದೆಡೆ ಬಂಡಾಯದವರ ಭಯವಿದೆ.

ಪಂಜಾಬಿನಲ್ಲಿ ಇರುವ ಶೇ. 25ಕ್ಕೂ ಅಧಿಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ಬಿಎಸ್‌ಪಿ ನಂಬಿಕೊಂಡಿದೆ. ಈ ಮತಗಳು ಪೂರ್ಣ ಬಹುಜನ ಸಮಾಜ ಪಕ್ಷಕ್ಕೆ ಹೋಗಲಾರವು. ಕಾಂಗ್ರೆಸ್ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಿಪಿಪಿ ಕಾಂಗ್ರೆಸ್‌ಗೆ ಹಾನಿ  ಮಾಡಲಿದೆ. ನಮಗಿಂತ ಹೆಚ್ಚಿಗೆ ಅಕಾಲಿದಳದ ಹಾದಿಗೆ ತೊಡಕಾಗಲಿದೆ ಎಂದು ಈ ರಾಜ್ಯದ ಚುನಾವಣಾ ವೀಕ್ಷಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ವಿಶ್ಲೇಷಣೆ.

ಮತದಾರರಿಗೆ ಮತಗಟ್ಟೆಗಳ ಕಡೆಗೆ ಹೆಜ್ಜೆ ಹಾಕಲು ಕೆಲವೇ ಗಂಟೆಗಳು ಉಳಿದಿದೆ. ಯಾವ ಪಕ್ಷವನ್ನು ಬೆಂಬಲಿಸಬೇಕು. ಯಾರು ಆಡಳಿತ ನಡೆಸಲು ಸಮರ್ಥರು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಯಾವ ಸರ್ಕಾರದಲ್ಲಿ ಏನೇನು ಅಭಿವೃದ್ಧಿ ಆಗಿದೆ. ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿವೆ ಎಂಬ ವಿಮರ್ಶೆಗಳು ಆಗುತ್ತಿವೆ.

ರಾಜಕೀಯ ಪಕ್ಷಗಳು ಮತದಾರನಿಗೆ ಅಂಗೈನಲ್ಲಿ ಚಂದ್ರನನ್ನು ತೋರಿಸುತ್ತಿವೆ. ಪ್ರಕಾಶ್‌ಸಿಂಗ್ ಬಾದಲ್ ಸರ್ಕಾರ ಐದು ವರ್ಷಗಳ ಹಿಂದೆಯೂ ಬೇಕಾದಷ್ಟು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಎಲ್ಲವನ್ನು ಈಡೇರಿಸಿಲ್ಲ.  ಸಂಕಷ್ಟದಲ್ಲಿರುವ ರೈತರಿಗೆ ಉಚಿತ ವಿದ್ಯುತ್ ಕೊಡುವ ವಚನ ಕೊಟ್ಟಿತ್ತು. ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ರಾಜ್ಯದ ವಿದ್ಯುತ್ ಸಮಸ್ಯೆ ಪರಿಹರಿಸುವಲ್ಲಿ ಸೋತಿದೆ.

ವಿದ್ಯುತ್ ಕೊರತೆ, ದುಬಾರಿ ಭೂಮಿ ಬೆಲೆಯಿಂದ ಉದ್ಯಮಗಳು ಬರುತ್ತಿಲ್ಲ. ಹಿಂದಿನಿಂದಲೂ ಇರುವ ಸೈಕಲ್, ಜವಳಿ, ರಸಗೊಬ್ಬರ, ರಾಸಾಯನಿಕ, ಔಷಧ ಮತ್ತು ರೇಷ್ಮೆ ಉದ್ಯಮಗಳನ್ನು ಬಿಟ್ಟರೆ ಹೊಸದು ಯಾವುದೂ ಬರುತ್ತಿಲ್ಲ. ಉದ್ಯಮಗಳಿಗೆ `ಭೂ ಬ್ಯಾಂಕ್~ ಸ್ಥಾಪಿಸುವ ಮಾತನ್ನು ಸರ್ಕಾರ ಆಡಿತ್ತು. ಐದು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಕಿಂಚಿತ್ತೂ ಕೆಲಸ ಮಾಡಿಲ್ಲ. ಅಗತ್ಯ ಮೂಲ ಸೌಲಭ್ಯ ಸೃಷ್ಟಿಸಿಲ್ಲ. ವಿಶಾಲವಾದ ರಸ್ತೆಗಳು, ಮೇಲು ಸೇತುವೆಗಳು ಆಗಿಲ್ಲ ಎಂಬುದು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಆರೋಪ.

ಐದು ವರ್ಷಗಳಲ್ಲಿ ಒಂದೇ ಒಂದು ಉದ್ಯೋಗ ಸೃಷ್ಟಿಯಾಗಿಲ್ಲ. ಕೆಲಸವಿಲ್ಲದೆ ಹುಡುಗರು ಹತಾಶರಾಗುತ್ತಿದ್ದಾರೆ. ಕುಡಿತ, ಮಾದಕ ವಸ್ತು ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪಂಜಾಬಿನಲ್ಲಿ ಇರುವಷ್ಟು ಮಾದಕ ವ್ಯಸನಿಗಳು ದೇಶದ ಯಾವ ರಾಜ್ಯದಲ್ಲೂ ಇಲ್ಲ.

ಐದು ವರ್ಷಗಳಲ್ಲಿ 15 ಲಕ್ಷ ಹುದ್ದೆಗಳನ್ನು ತುಂಬಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಅಂದಾಜಿನ ಪ್ರಕಾರ ರಾಜ್ಯದಲ್ಲಿ 25ಲಕ್ಷ ಅರ್ಹ ನಿರುದ್ಯೋಗಿ ಪದವೀಧರರಿದ್ದಾರೆ. ಇವರ‌್ಯಾರಿಗೂ ಕೆಲಸ ಸಿಕ್ಕಿಲ್ಲ. ರಾಷ್ಟ್ರಮಟ್ಟದಲ್ಲಿ ಉಳಿದವರಿಗೆ ಪೈಪೋಟಿ ಕೊಡುವಂಥ ಉತ್ತಮ ಶಿಕ್ಷಣ ರಾಜ್ಯ ಸರ್ಕಾರ ನೀಡುತ್ತಿಲ್ಲ. ಪಂಜಾಬ್ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕಾಂಗ್ರೆಸ್- ಅಕಾಲಿದಳ ಪರಸ್ಪರ ಕೆಸರೆರಚುತ್ತಾ ಮತದಾರರ ಮನವೊಲಿಕೆಗೆ ಕಸರತ್ತು ನಡೆಸುತ್ತಿವೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮರೀಂದರ್ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಉಳಿದ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನಿಯಾ, ಮನಮೋಹನ್ ಒಳಗೊಂಡಂತೆ ಪಂಜಾಬಿಗೆ ಎಲ್ಲರೂ ಬಂದು ಹೋಗಿದ್ದಾರೆ. ಅಕಾಲಿ ವೈಫಲ್ಯಗಳತ್ತ ಬೆರಳು ಮಾಡಿದ್ದಾರೆ. ಎರಡೂವರೆ ದಶಕಗಳ ಹಿಂದೆ ಸಿಖ್ಖರ ಹೃದಯಗಳನ್ನು ಘಾಸಿಗೊಳಿಸಿದ ಹಿಂಸಾಕೃತ್ಯವನ್ನು ಅಕಾಲಿದಳ ಮತ್ತೆ ಕೆದಕುತ್ತಿದೆ.

ಪ್ರಕಾಶ್‌ಸಿಂಗ್ ಬಾದಲ್, ಉಪ ಮುಖ್ಯಮಂತ್ರಿ ಸುಖ್‌ಬೀರ್‌ಸಿಂಗ್, ಅಮರೀಂದರ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿರೋಧ ಪಕ್ಷದ ನಾಯಕಿ ರಾಜೀಂದರ್ ಭಟ್ಟಲ್, ನಿವೃತ್ತ ಹಾಕಿ ಆಟಗಾರ ಪರಗತ್‌ಸಿಂಗ್, ಕ್ರಿಕೆಟ್ ಆಟಗಾರ ನವಜೋತ್‌ಸಿಂಗ್ ಸಿಧು ವೈದ್ಯ ಪತ್ನಿ ಡಾ, ನವಜೋತ್ ಕೌರ್ ಒಳಗೊಂಡಂತೆ ಹಲವರ ಹಣೆ ಬರಹ ಸೋಮವಾರ ನಿರ್ಧಾರವಾಗಲಿದೆ. ಕಾಂಗ್ರೆಸ್ ಮತ್ತು ಅಕಾಲಿದಳಕ್ಕೆ ಇದು `ಮಾಡು ಇಲ್ಲವೆ ಮಡಿ ಚುನಾವಣೆ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT