ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೋಲ್ ಮೇಲೆ ಬಿಡುಗಡೆಯಾದ ಪ್ರಕರಣಗಳ ತನಿಖೆ– ಹೈಕೋರ್ಟ್‌

2006ರಿಂದ 2014ರವರೆಗಿನ ಪ್ರಕರಣಗಳ ತನಿಖೆ
Last Updated 22 ಆಗಸ್ಟ್ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2006ರಿಂದ 2014ರವರೆಗೆ ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡಿರುವ ಪ್ರಕರಣಗಳನ್ನು ತನಿಖೆ ನಡೆಸುವುದಾಗಿ ಹೈಕೋರ್ಟ್‌ ಹೇಳಿದೆ.

‘ಕಾರಾಗೃಹಗಳಲ್ಲಿನ ಅಪರಾಧಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವ ಅಧಿಕಾರವನ್ನು ಪ್ರಶ್ನೆ ಮಾಡಿರುವ ಹೈಕೋರ್ಟ್‌, ಪರೋಲ್‌ ಮೇಲೆ ತೆರಳಿ ತಲೆಮರಿಸಿಕೊಂಡಿರುವವರನ್ನು ಬಂಧಿಸುವಲ್ಲಿ ಜೈಲು ಪ್ರಾಧಿಕಾರಗಳು ಕರ್ತವ್ಯ ಲೋಪ ಎಸಗಿವೆ’ ಎಂದು ಕಿಡಿ ಕಾರಿದೆ.

ಪರೋಲ್ ಮೇಲೆ ಬಿಡುಗಡೆಯಾಗಿ ತಲೆಮರಿಸಿಕೊಂಡಿರುವ ಕೈದಿಗಳನ್ನು ಬಂಧಿಸಲು ವಿಫಲರಾಗಿರುವ ಕೇಂದ್ರ ಕಾರಾಗೃಹಗಳ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿಗಳಾದ ರವಿ ಮಳೀಮಠ ಮತ್ತು ಮೈಕಲ್ ಡಿ.ಕುನ್ಹ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು.

‘2006 ರಿಂದ ಈ ಅರ್ಜಿ ದಾಖಲಾಗುವರೆಗೆ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದ ಪ್ರಕರಣಗಳ ತನಿಖೆ ನಡೆಸಲಾಗುವುದು. ಇದೊಂದು ಸತ್ಯಶೋಧನೆ. ತನಿಖೆಗಾಗಿ ಏಕ ಸದಸ್ಯ ಸಮಿತಿ ನೇಮಕ ಮಾಡಲಾಗುವುದು. ಆದರೆ, ಅದು ಯಾವ ವ್ಯಕ್ತಿ ಮತ್ತು ಹೇಗೆ ತನಿಖೆ ನಡೆಯುತ್ತದೆ ಎಂಬುದನ್ನು ನ್ಯಾಯಾಲಯ ಮುಂದಿನ ದಿನಗಳಲ್ಲಿ ಚರ್ಚಿಸುತ್ತದೆ’ ಎಂದು ಪೀಠ ಹೇಳಿತು.

ಸಮರ್ಪಕವಾದ ತನಿಖೆ ನಡೆಸುವ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ಅಗತ್ಯ ಸಹಕಾರ ನೀಡ
ಬೇಕು ಎಂದೂ ಪೀಠವು ಸೂಚಿಸಿತು.

ಇಡೀ ವ್ಯವಸ್ಥೆ ಭ್ರಷ್ಟವಾಗಿದೆ: ‘ಪರೋಲ್‌ ಮೇಲೆ ಹೊರಹೋದ ಕೈದಿಗಳು ವಾಪಸ್ಸಾಗದಿದ್ದಾಗ ಅವರನ್ನು ಬಂಧಿಸುವುದು ಜೈಲು ಅಧಿಕಾರಿಗಳ ಜವಾಬ್ದಾರಿ. ಆದರೆ, ಈವರೆಗೆ 42 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳನ್ನು ಬಂಧಿಸಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ’ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

‘ಯಾವುದಾದರೂ ಪ್ರಕರಣ ಬಂದಾಗ ನ್ಯಾಯಾಲಯ ಆದೇಶಿಸಿದ ನಂತರವಷ್ಟೇ ಸರ್ಕಾರ ಹಾಗೂ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ಮುಂದಾಗುತ್ತಾರೆ. ಅಲ್ಲಿಯವರೆಗೂ ಕೈಕಟ್ಟಿ ಕುಳಿತಿರುತ್ತಾರೆ. ನ್ಯಾಯಾಲಯ ಚಾಟಿ ಬೀಸಿದಾಗಷ್ಟೇ ಸರ್ಕಾರ ಎಚ್ಚರಗೊಳ್ಳುತ್ತದೆ. ಈ ವಿಚಾರದಲ್ಲಿ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಎಲ್ಲವನ್ನೂ ನೋಡಿಕೊಂಡು ನ್ಯಾಯಾಲಯ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯ
ವಿಲ್ಲ’ ಎಂದು ಪೀಠ ಹೇಳಿದೆ.

‘ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಅದರಲ್ಲಿ ಮಧ್ಯಪ್ರವೇಶ ಮಾಡಲು ರಾಷ್ಟ್ರಪತಿಗೆ ಮಾತ್ರ ಅಧಿಕಾರ ಇರುತ್ತದೆ. ಹೀಗಿರುವಾಗ ಪರೋಲ್ ನೀಡಲು ಹೇಗೆ ಸಾಧ್ಯ, ಈ ಅಧಿಕಾರದ ಮೂಲ ಯಾವುದು. ಅದಕ್ಕೆ ಕಾನೂನಿನ ಮಾನ್ಯತೆ ಇದೆಯೇ’ ಎಂದು ಪೀಠವು ಖಾರವಾಗಿ ಪ್ರಶ್ನಿಸಿತು.

42 ಅಪರಾಧಿಗಳ ಬಂಧನವಾಗಿಲ್ಲ

ಸರ್ಕಾರದ ಪರ ವಾದಿಸಿದ ಸರ್ಕಾರಿ ಅಭಿಯೋಜಕ ಪಿ.ಎಂ. ನವಾಜ್, ‘ಪರೋಲ್ ಮೇಲೆ ಬಿಡುಗಡೆಯಾದವರ ಪೈಕಿ ಇನ್ನು 42 ಮಂದಿಯನ್ನು ಬಂಧಿಸಬೇಕಿದೆ. ಪರೋಲ್ ಮೇಲೆ ಬಿಡುಗಡೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಕರಡು ನೀತಿ ರೂಪಿಸಿದೆ’ ಎಂದು ತಿಳಿಸಿದರು.

‘ಪರೋಲ್ ನೀಡುವ ಮುನ್ನ ಕೆಲ ಷರತ್ತು ವಿಧಿಸಬೇಕು. ಅದನ್ನು ಪಾಲಿಸದವರನ್ನು ಹೊರಗೆ ಕಳುಹಿಸಬಾರದು. 42 ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಪೀಠವು ಸರ್ಕಾರಕ್ಕೆ ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT