ಡೆಹ್ರಾಡೂನ್ (ಪಿಟಿಐ): ಭ್ರಷ್ಟಾಚಾರ ತಡೆಯಲು ವಿಫಲರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀರ್ಥಯಾತ್ರೆಗೆ ಹೋಗುವುದು ಒಳಿತು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಭಾನುವಾರ ಇಲ್ಲಿ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತಡೆಯಲಾಗುತ್ತಿಲ್ಲ ಎಂದು ಪ್ರಧಾನಿ ಅಸಹಾಯಕತೆ ವ್ಯಕ್ತಪಡಿಸಿರುವುದರಿಂದ ಅವರು ಹುದ್ದೆಯನ್ನು ತ್ಯಜಿಸುವುದೇ ಸರಿಯಾದ ಕ್ರಮ ಎಂದು ಹೇಳಿದರು.
`ಮನಮೋಹನ್ ಸಿಂಗ್ ಅವರೇ ನೀವು ಅಸಹಾಯಕರಾಗಿದ್ದರೆ ವಿಶ್ರಾಂತಿ ಪಡೆದು ಬದರಿನಾಥ, ಕೇದಾರನಾಥ ಅಥವಾ ಸ್ವರ್ಣ ಮಂದಿರಕ್ಕೆ ಯಾತ್ರೆ ಹೋಗಿ~ ಎಂದು ಗಡ್ಕರಿ ಹೇಳಿದರು.
2ಜಿ ತರಂಗಾಂತರ ಹಗರಣಕ್ಕೆ ತಾವೊಬ್ಬರೇ ಹೊಣೆಗಾರರಲ್ಲ, ಕಾಂಗ್ರೆಸ್ನ ಅನೇಕ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಅವರು ಅನೇಕ ಬಾರಿ ಹೇಳಿದ್ದಾರೆ. ಇನ್ನೂ ಕೆಲವು ದಾಖಲೆಗಳನ್ನು ತಾವು ಸೋಮವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಲಿದ್ದು, ಇದರಿಂದ ಸಾಕಷ್ಟು ಗುಟ್ಟುಗಳು ಹೊರಬೀಳಲಿವೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ತಮಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.