ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಗ್ರಹ: ಪಾಕ್ ಮೇಲೆ ಒತ್ತಡ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಾಕಿಸ್ತಾನವು ತನ್ನ ನೆಲದಿಂದ ಭಯೋತ್ಪಾದಕ ಚಟುವಟಿಕೆ ನಡೆಯದಂತೆ ತಡೆಯಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಒತ್ತಡ ಹಾಕಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, `2008ರ ಮುಂಬೈ ದಾಳಿಯ ಮುಖ್ಯ ಸೂತ್ರಧಾರರಲ್ಲಿ ಹಫೀದ್ ಸಯೀದ್ ಒಬ್ಬನಾಗಿದ್ದಾನೆ~ ಎಂದೂ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿಲರಿ, `ದೇಶದ ಒಳಗೆ ಹಾಗೂ ಹೊರಗೆ ದಾಳಿ ಮಾಡಲು ಉಗ್ರರಿಗೆ ಪಾಕಿಸ್ತಾನವು ವೇದಿಕೆಯಾಗಬಾರು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆ ದೇಶ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು ಎನ್ನುವುದು ನಿರ್ವಿವಾದ~ ಎಂದರು.

ಉಭಯ ನಾಯಕರ ನಡುವಿನ ಮಾತುಕತೆಯಲ್ಲಿ ಮುಂಬೈ ದಾಳಿ, ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾನ್ ಪರಮಾಣು ಬಿಕ್ಕಟ್ಟು ಮತ್ತಿತರ ವಿಷಯಗಳು ಪ್ರಮುಖವಾಗಿ ಚರ್ಚೆಯಾದವು.`ಲಷ್ಕರ್- ಎ- ತೊಯ್ಬಾ ಸ್ಥಾಪಕ ಸಯೀದ್ ಮುಂಬೈ ದಾಳಿಯ ಪ್ರಮುಖ ಸೂತ್ರಧಾರರಲ್ಲಿ ಒಬ್ಬ ಎಂದು ಅಮೆರಿಕ ನಂಬುವುದಕ್ಕೆ ಕಾರಣವಿದೆ. ಆತನ ತಲೆದಂಡಕ್ಕೆ ನಾವು ಬಹುಮಾನ ಘೋಷಿಸಿದ್ದೇವೆ. ಇದೇನು ವಿಶೇಷ ಪ್ರಕರಣವಲ್ಲ~ ಎಂದು ಹಿಲರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ತಿಂಗಳಷ್ಟೇ ಅಮೆರಿಕವು ಸಯೀದ್ ತಲೆಗೆ ಒಂದು ಕೋಟಿ ಡಾಲರ್ ಬಹುಮಾನ ಘೋಷಿಸಿದೆ.
`ಕಾಬೂಲ್‌ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯು, ನೆರೆ ರಾಷ್ಟ್ರಗಳಲ್ಲಿ ಉಗ್ರರ ನೆಲೆಯನ್ನು ನಾಶಪಡಿಸುವ ಅಗತ್ಯವನ್ನು ಮನಗಾಣಿಸಿದೆ. 26/11ರ ಸೂತ್ರಧಾರರನ್ನು ಶಿಕ್ಷೆಗೊಳಪಡಿಸುವುದೂ ಸೇರಿದಂತೆ ಪಾಕ್ ಭಯೋತ್ಪಾದನೆ ನಿಗ್ರಹಕ್ಕೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು~ ಎಂದು ಕೃಷ್ಣ ಹೇಳಿದರು.

ಇರಾನ್ ವಿಷಯದ ಬಗ್ಗೆ ಮಾತನಾಡಿದ ಹಿಲರಿ, `ಆ ದೇಶದ ಪರಮಾಣು ಕಾರ್ಯಕ್ರಮಗಳನ್ನು ತಡೆಯುವ ಅಂತರ ರಾಷ್ಟ್ರೀಯ ಪ್ರಯತ್ನಕ್ಕೆ ಭಾರತ ಕೂಡ ಕೈಜೋಡಿಸುತ್ತದೆ ಹಾಗೂ ಇರಾನ್‌ನಿಂದ ತೈಲ ಆಮದು ಪ್ರಮಾಣ ಕಡಿತಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಅಮೆರಿಕ ಎದುರು ನೋಡುತ್ತಿದೆ~ ಎಂದರು. `ಪರ್ಯಾಯ ಇಂಧನ ಮೂಲ ಹುಡುಕುವ ದಿಸೆಯಲ್ಲಿ ಚರ್ಚಿಸಲು ಅಮೆರಿಕವು ಮುಂದಿನ ವಾರ ಭಾರತಕ್ಕೆ ನಿಯೋಗವೊಂದನ್ನು ಕಳುಹಿಸಲಿದೆ~ ಎಂದರು.

`ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು ಆರು ಕೋಟಿ ಭಾರತೀಯರು ನೆಲೆಸಿದ್ದಾರೆ. ಭಾರತಕ್ಕೆ ಇರಾನ್ ಮಹತ್ವದ ತೈಲ ಮೂಲ. ಹಾಗಾಗಿ ಇರಾನ್ ವಿಷಯವನ್ನು ಇಂಧನ ವ್ಯಾಪಾರ ವಿಷಯಕ್ಕೆ ತಳಕು ಹಾಕಬಾರದು~ ಎಂದು ಕೃಷ್ಣ ಅಭಿಪ್ರಾಯಪಟ್ಟರು.

ಇಡ್ಲಿ, ವಡಾ, ಉಪ್ಪಿಟ್ಟು
ಹಿಲರಿ ಕ್ಲಿಂಟನ್ ಅವರು ಮಂಗಳವಾರ ಬೆಳಿಗ್ಗೆ ಎಸ್.ಎಂ.ಕೃಷ್ಣ ಅವರೊಂದಿಗೆ ದೆಹಲಿಯ ತಾಜ್ ಪ್ಯಾಲೆಸ್ ಹೋಟೆಲ್‌ನಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು ಮತ್ತಿತರ ದಕ್ಷಿಣ ಭಾರತೀಯ ತಿನಿಸುಗಳನ್ನು ಸವಿದರು.

ಇರಾನ್ ಸಂಬಂಧ ವೃದ್ಧಿ ಸೂಚನೆ
ಇರಾನ್ ಮೇಲಿನ ತೈಲದ ಅವಲಂಬನೆಯನ್ನು ಮತ್ತಷ್ಟು ಕಡಿತಗೊಳಿಸುವಂತೆ ಅಮೆರಿಕ ಹಾಕುತ್ತಿರುವ ಒತ್ತಡಕ್ಕೆ ಜಗ್ಗದ ಭಾರತವು, ಇರಾನ್ ಜತೆಗೆ ದ್ವಿಪಕ್ಷೀಯ ಆದ್ಯತಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ. ಆ ಮೂಲಕ, ಆ ದೇಶದೊಂದಿಗಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸೂಚನೆ ನೀಡಿದೆ.

`ಉಭಯ ದೇಶಗಳು ಬೇರೆಯವರ ಇಷ್ಟಾನಿಷ್ಟಗಳಿಗೆ ಸೊಪ್ಪು ಹಾಕದೆ ಒಟ್ಟಾಗಿ ಕೆಲಸ ಮಾಡಿಬೇಕಿದೆ~ ಎಂದು ಭಾರತಕ್ಕೆ ಭೇಟಿ  ನೀಡಿರುವ ಇರಾನ್‌ನ ಉನ್ನತ ಮಟ್ಟದ ನಿಯೋಗವು  ಮಂಗಳವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT