ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಬಂದಿಳಿದ ವಿಲಿಯಂ ದಂಪತಿ

ಮುಂಬೈ ದಾಳಿ ಸಂತ್ರಸ್ತರಿಗೆ ನಮನ; ತಾಜ್‌ ಹೋಟೆಲ್‌ ಸಿಬ್ಬಂದಿ ಜತೆ ಚರ್ಚೆ
Last Updated 10 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಮುಂಬೈ: ಬ್ರಿಟನ್‌ ರಾಜಕುಮಾರ  ವಿಲಿಯಂ ಮತ್ತು ಅವರ ಪತ್ನಿ ಕೇಟ್‌ ಮಿಡ್ಲ್‌ಟನ್‌ ಅವರು ಭಾನುವಾರ ಭಾರತಕ್ಕೆ ಬಂದಿಳಿದರು.

ಮಧ್ಯಾಹ್ನಕ್ಕೂ ಮುನ್ನ ಮುಂಬೈಗೆ ಬಂದಿಳಿದ ರಾಜ ದಂಪತಿ, ತಾಜ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿರುವ 26/11ರ ಮುಂಬೈ ದಾಳಿ ಸ್ಮಾರಕಕ್ಕೆ ತೆರಳಿ, ಪುಷ್ಪಗುಚ್ಛ ಇಟ್ಟು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, 2008ರಲ್ಲಿ ದಾಳಿ ನಡೆದಾಗ ಕರ್ತವ್ಯದಲ್ಲಿದ್ದ ಹೋಟೆಲ್‌ ಸಿಬ್ಬಂದಿ ಜತೆ ಅವರು ಚರ್ಚೆ ನಡೆಸಿದರು. ವಿಲಿಯಂ ಮತ್ತು ಕೇಟ್‌ ಅವರು ಒಟ್ಟು ಏಳು ದಿನ ಪ್ರವಾಸ ಕೈಗೊಳ್ಳಲಿದ್ದು, ಭಾರತ ಮಾತ್ರ ಅಲ್ಲದೇ ಭೂತಾನ್‌ಗೂ ಭೇಟಿ ನೀಡಲಿದ್ದಾರೆ. ಎರಡೂ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಅವರು ಈ ಪ್ರವಾಸ ಕೈಗೊಂಡಿದ್ದಾರೆ.

ರಾಜ ದಂಪತಿ ತಮ್ಮ ಇಬ್ಬರು ಮಕ್ಕಳಾದ ಎರಡೂವರೆ ವರ್ಷದ ಜಾರ್ಜ್‌ ಮತ್ತು 11 ತಿಂಗಳು ವಯಸ್ಸಿನ ಷಾರ್ಲೆಟ್‌ ಅವರನ್ನು ತವರಿನಲ್ಲೇ ಬಿಟ್ಟು ಬಂದಿದ್ದಾರೆ.

ಕ್ರಿಕೆಟ್‌:  26/11 ದಾಳಿಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ರಾಜ ದಂಪತಿ ಓವಲ್‌ ಮೈದಾನಕ್ಕೆ ತೆರಳಿ, ಮೂರು ಸ್ವಯಂ ಸೇವಾ ಸಂಸ್ಥೆಗಳು (ಮ್ಯಾಜಿಕ್‌ ಬಸ್‌, ಡೋರ್‌ಸ್ಟೆಪ್‌ ಮತ್ತು ಚೈಲ್ಡ್‌ಲೈನ್‌) ಬಡಮಕ್ಕಳಿಗಾಗಿ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯ ವೀಕ್ಷಿಸಿದರಲ್ಲದೇ ಇಬ್ಬರೂ ಕ್ರೀಸಿಗಿಳಿದು ಸ್ವಲ್ಪ ಹೊತ್ತು ಬ್ಯಾಟಿಂಗ್‌ ಮಾಡಿದರು. ಕ್ರಿಕೆಟ್‌ ದಂತ ಕತೆ ಸಚಿನ್‌ ತೆಂಡೂಲ್ಕರ್‌ ಮತ್ತು ಹಿರಿಯ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕರ್‌ ರಾಜ ದಂಪತಿಗೆ ಜೊತೆಯಾದರು.

ರಾತ್ರಿ ಆಯೋಜಿಸಲಾಗಿದ್ದ ಸಹಾಯಾರ್ಥ ಔತಣಕೂಟದಲ್ಲಿ ಭಾಗವಹಿಸಿದರು. ಈ  ಕೂಟದಲ್ಲಿ ಪ್ರಸಿದ್ಧ ಚಿತ್ರತಾರೆಯರು, ಕ್ರೀಡಾ ಕ್ಷೇತ್ರದ ಗಣ್ಯರು ಮತ್ತು ಉದ್ಯಮಿಗಳು ಪಾಲ್ಗೊಂಡಿದ್ದರು.

ಶಾರುಕ್‌ ಖಾನ್‌, ಅಮೀರ್‌ ಖಾನ್‌, ಐಶ್ವರ್ಯಾ ರೈ, ರಿಷಿ ಕಪೂರ್‌ ಹೃತಿಕ್‌ ರೋಷನ್‌, ಫರಾನ್‌ ಅಖ್ತರ್‌, ಬ್ಯಾಟಿಂಗ್‌  ಚಾಂಪಿಯನ್‌ ಸಚಿನ್‌ ತೆಂಡೂಲ್ಕರ್‌  ಮತ್ತಿತರರು ಭಾಗವಹಿಸಿದ್ದರು.

ದೆಹಲಿಗೆ: ವಿಲಿಯಂ ಮತ್ತು ಕೇಟ್‌ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಮಹಾತ್ಮ ಗಾಂಧಿ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಲಿದ್ದಾರೆ. ನಂತರ ಆಗ್ರಾದಲ್ಲಿರುವ ತಾಜ್‌ ಮಹಲ್‌ಗೂ ಭೇಟಿ ನೀಡಲಿದ್ದಾರೆ. 24 ವರ್ಷಗಳ ಹಿಂದೆ ವಿಲಿಯಂ ತಾಯಿ ದಿವಂಗತ ರಾಜಕುಮಾರಿ ಡಯಾನ ಇಲ್ಲಿಗೆ ಭೇಟಿ ನೀಡಿದ್ದರು.

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೂ ಭೇಟಿ ನೀಡಲಿರುವ ದಂಪತಿ, ವನ್ಯಜೀವಿ ಮತ್ತು ಮನುಷ್ಯನ ನಡುವಣ ಸಂಘರ್ಷವನ್ನು ಉದ್ಯಾನದ ಆಸುಪಾಸಿನಲ್ಲಿ ನೆಲೆಸಿರುವ ಸಮುದಾಯಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು  ಅಧ್ಯಯನ ನಡೆಸಲಿದ್ದಾರೆ.

ರಾಷ್ಟ್ರೀಯ ಉದ್ಯಾನದ ರೇಂಜರ್‌ಗಳ ಜೊತೆಯೂ ಅವರು ಮಾತುಕತೆ ನಡೆಸಲಿದ್ದಾರೆ. ಕಳ್ಳಬೇಟೆಗಾರರಿಂದ ಪ್ರಾಣಿಗಳನ್ನು ರಕ್ಷಿಸುವ ವಿಧಾನಗಳ ಬಗ್ಗೆ ಉದ್ಯಾನದ ಸಿಬ್ಬಂದಿಯಿಂದ ಮಾಹಿತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT