ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಗ್ನೆಟಿಕ್ ಬಾಂಬ್ ಬಳಕೆ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರ ಇಸ್ರೇಲ್ ರಾಯಭಾರ ಕಚೇರಿಯ ಕಾರನ್ನು ಸ್ಫೋಟಿಸಿದ ಘಟನೆಯಲ್ಲಿ ಬಳಸಲಾದ ಅಯಸ್ಕಾಂತೀಯ (ಮ್ಯಾಗ್ನೆಟಿಕ್) ಬಾಂಬನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು.

ಕೈಬಾಂಬ್ ಮಾದರಿಯ ಈ ಮ್ಯಾಗ್ನೆಟಿಕ್ ಬಾಂಬ್‌ಗಳಲ್ಲಿ ಯುದ್ಧ ಟ್ಯಾಂಕರ್‌ಗಳಿಗೆ ಅಂಟಿಸಲು ಅನುಕೂಲವಾಗುವಂತೆ ಶಕ್ತಿಶಾಲಿ ಅಯಸ್ಕಾಂತದ ಕವಚ ಇದಕ್ಕೆ ಇರುತ್ತಿತ್ತು. ಟ್ಯಾಂಕರ್ ನಿಗ್ರಹ ಅಸ್ತ್ರಗಳ ಕೊರತೆಯಿಂದ 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಈ ಬಾಂಬ್‌ಗಳನ್ನು ಹೆಚ್ಚಾಗಿ ಬಳಸಿದ್ದರು.
ಸುಲಭವಾಗಿ ಬಳಸಬಹುದಾಗಿದ್ದರಿಂದ ಮಧ್ಯಪ್ರಾಚ್ಯದ ಬಂಡುಕೋರ ಗುಂಪುಗಳು ಇತ್ತೀಚೆಗೆ ಮ್ಯಾಗ್ನೆಟಿಕ್ ಬಾಂಬ್‌ಗಳನ್ನು ಬಳಸುತ್ತಿವೆ.

ಕಳೆದ ತಿಂಗಳಷ್ಟೇ ಮೃತರಾದ ಇರಾನ್ ವಿಜ್ಞಾನಿ ಮೊಸ್ತಫಾ ಅಹ್ಮದಿ ರೋಷನ್ ಈ ಮಾದರಿಯ ಬಾಂಬ್‌ಗೆ ಬಲಿಯಾಗಿದ್ದರು. ಟೆಹರಾನ್‌ನಲ್ಲಿ ನಡೆದ ಈ ದುರ್ಘಟನೆಯಲ್ಲಿ ಇಬ್ಬರು ಯುವಕರು ವಿಶ್ವವಿದ್ಯಾಲಯದ ಕ್ಯಾಂಪಸ್ ಹೊರಗಿನ ರಸ್ತೆಯಲ್ಲಿ ಅವರ ಕಾರಿಗೆ ಮ್ಯಾಗ್ನೆಟಿಕ್ ಬಾಂಬ್ ಅಂಟಿಸಿ, ಅದು ಸ್ಫೋಟಗೊಳ್ಳುವ ಮುನ್ನ ಪರಾರಿಯಾಗಿದ್ದರು. ದೆಹಲಿಯಲ್ಲೂ ಇದೇ ಮಾದರಿಯ ಕಾರ್ಯಾಚರಣೆ ನಡೆಸಲಾಗಿದೆ.

ಇರಾಕ್‌ನಲ್ಲಿ ಅಮೆರಿಕ ಪಡೆಗಳ ವಿರುದ್ಧ ಹೋರಾಡುತ್ತಿರುವ ಬಂಡುಕೋರರು ಹಾಗೂ ಪ್ಯಾಲೆಸ್ಟೈನ್‌ನ ಹಮಾಸ್ ಸಂಘಟನೆ ಸಹ ಈ ಮಾದರಿ ಬಾಂಬ್ ಉಪಯೋಗಿಸಿವೆ. ಪತ್ತೆ ಹಚ್ಚಲು ಕಷ್ಟವಾದ ಆದರೆ ಅಂಟಿಸಲು ಸುಲಭವಾದ ಈ ಮ್ಯಾಗ್ನೆಟಿಕ್ ಬಾಂಬ್‌ಗಳು ಸಿ4 ಎಂಬ ಪ್ಲಾಸ್ಟಿಕ್ ಸ್ಫೋಟಕ, ವೇಗವರ್ಧಕ ಹಾಗೂ ಲೋಹದ ಚೂರುಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಈ ಬಾಂಬ್ ಉಡಾಯಿಸಲು ಡಿಟೊನೇಟರ್ ಬಳಸಲಾಗುತ್ತದೆ.

ಅರಬ್ಬರು ಈ ಬಾಂಬ್‌ಗೆ  `ಒಬ್ವಾಹ ಲಾಸಿಕಾ~ ಎಂದು ಕರೆಯುತ್ತಾರೆ. ಆದರೆ, ಜಗತ್ತಿನ ಉಳಿದೆಲ್ಲ ಕಡೆ `ಸ್ಟಿಕಿ ಬಾಂಬ್~ ಅಥವಾ `ಮ್ಯಾಗ್ನೆಟಿಕ್ ಬಾಂಬ್~ ಎಂದು ಕರೆಯಲಾಗುತ್ತದೆ.

ಇಸ್ರೇಲ್ ರಾಯಭಾರ ಕಚೇರಿ ಮೇಲಿನ ದಾಳಿಯಲ್ಲಿ ಬಳಸಲಾದ ಬಾಂಬ್, `ಸ್ಟಿಕಿ ಬಾಂಬ್~ ಎಂಬುದಾಗಿ ಧೃಡಪಡಿಸಿರುವ ದೆಹಲಿ ಪೊಲೀಸ್ ಆಯುಕ್ತರು, ಪಾಶ್ಚಿಮಾತ್ಯ ಹಾಗೂ ಮಧ್ಯಪ್ರಾಚ್ಯದ ದೇಶಗಳಲ್ಲಿ ಅದನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

`ಸ್ಟಿಕಿ ಬಾಂಬ್ ಅನ್ನು ಕಾರ್ ಅಥವಾ ಟ್ರಕ್‌ಗೆ ಅಂಟಿಸಿದಲ್ಲಿ 5 ಸೆಕೆಂಡ್ ಒಳಗಾಗಿ ಆ ವಾಹನ ಸ್ಫೋಟಗೊಳ್ಳುತ್ತದೆ. ಇದು ಹಸ್ತದ ಗಾತ್ರದಲ್ಲಿದ್ದು, ತೀವ್ರ ಹಾನಿ ಮಾಡಲಿದೆ. ಸ್ಫೋಟಕಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಅದಕ್ಕೆ ಪ್ರಬಲ ಅಯಸ್ಕಾಂತದ ಕವಚದೊಳಗಿರಿಸಲಾಗಿರುತ್ತದೆ. ಆಮೇಲೆ ಅದನ್ನು ವಾಹನಕ್ಕೆ ಅಂಟಿಸಲಾಗುತ್ತದೆ. ಇದನ್ನು ಸ್ಫೋಟಗೊಳಿಸಲು ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಯಾಂತ್ರಿಕವಾಗಿ ಅಥವಾ ರಿಮೋಟ್ ನಿಯಂತ್ರಣದ ನೆರವಿನಿಂದ ಇದನ್ನು ಸ್ಫೋಟಿಸಬಹುದಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಚುರುಕಾಗಿ ಕಾರ್ಯಾಚರಣೆ ನಡೆಸಿ ಜನರ ಗಮನ ಹರಿಯದಂತೆ ತಡೆಯುವುದು ದಾಳಿಕೋರರ ಪ್ರಮುಖ ಗುರಿಯಾಗಿರುತ್ತದೆ ಎಂದು ದೆಹಲಿ ಪೊಲೀಸ್ ಪಡೆಯ ವಿಶೇಷ ಘಟಕದ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT