ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದಕ್ಕೆ ಮೊದಲ ಹೆಜ್ಜೆ

ಸಂಧಾನಕಾರರಾಗಿ ದಿನೇಶ್ವರ್‌ ಶರ್ಮಾ ನೇಮಕ
Last Updated 23 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದಕ್ಕೆ ‘ಸುಸ್ಥಿರ ಮಾತುಕತೆ’ ನಡೆಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಘೋಷಣೆ ಮಾಡಿದ್ದಾರೆ. 

ಕಾಶ್ಮೀರ ವಿವಾದಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ಗುಪ್ತಚರ ದಳದ (ಐಬಿ) ಮಾಜಿ ನಿರ್ದೇಶಕ ದಿನೇಶ್ವರ್‌ ಶರ್ಮಾ ಅವರನ್ನು ಸಂಧಾನಕಾರರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಅವರು ಬಯಸುವ ಎಲ್ಲರೊಂದಿಗೆ ಮಾತುಕತೆ ನಡೆಸುವ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಶರ್ಮಾ ಅವರಿಗೆ ನೀಡಿದೆ.

ಕೇಂದ್ರದ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಸಂಧಾನಕಾರರನ್ನು ನೇಮಕ ಮಾಡುವ ಮೂಲಕ ಕಾಶ್ಮೀರ ವಿಚಾರದಲ್ಲಿ ವಿಫಲವಾಗಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಅದು ಹೇಳಿದೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಮಾತುಕತೆ ನಡೆಸಲು ಸಿದ್ಧ ಎಂಬ ಇಂಗಿತವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವ್ಯಕ್ತಪಡಿಸಿದ ತಿಂಗಳುಗಳ ನಂತರ ಈ ಘೋಷಣೆ ಹೊರಬಿದ್ದಿದೆ. ಇದಕ್ಕೂ ಮುನ್ನ, ಪ್ರತ್ಯೇಕತಾವಾದಿಗಳೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂಬ ನಿಲುವನ್ನು ಕೇಂದ್ರ ಹೊಂದಿತ್ತು.

ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಬುರ್ಹಾನ್‌ ವಾನಿಯನ್ನು ಕಳೆದ ವರ್ಷ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ನಂತರ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಹೆಚ್ಚಳ ಆಗಿರುವುದರಿಂದ ಸಂಧಾನಕಾರರ ಮೂಲಕ ಶಾಂತಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ.‌

ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ವ್ಯಕ್ತಪಡಿಸಿದ ಆಶಯಗಳಿಗೆ ಅನುಸಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ‘ಮದ್ದುಗುಂಡುಗಳಿಂದ ಅಥವಾ ನಿಂದನೆಗಳಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಬದಲಿಗೆ ಪ್ರೀತಿಯಿಂದ ಬಿಕ್ಕಟ್ಟನ್ನು ಪರಿಹರಿಸಬಹುದು’ ಎಂದು ಮೋದಿ ಹೇಳಿದ್ದರು.

ಕಳೆದ ತಿಂಗಳು ರಾಜನಾಥ್‌ ಸಿಂಗ್‌ ಕೂಡ ಕಾಶ್ಮೀರಕ್ಕೆ ಭೇಟಿ ನೀಡಿ 87 ನಿಯೋಗಗಳೊಂದಿಗೆ ಮಾತುಕತೆ ನಡೆಸಿದ್ದರು.

‘ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸಿದೆ ಮತ್ತು ಬದ್ಧತೆಯನ್ನೂ ಪ್ರದರ್ಶಿಸಿದೆ. ದಿನೇಶ್ವರ್‌ ಶರ್ಮಾ ಅವರು ಕಾಶ್ಮೀರ ಸಮಾಜದ ವಿವಿಧ ವರ್ಗಗಳ ಅಭಿಪ್ರಾಯ, ಅದರಲ್ಲೂ ವಿಶೇಷವಾಗಿ ರಾಜ್ಯದ ಯುವಕರ ಅಭಿಪ್ರಾಯಗಳನ್ನು ಅವರೊಂದಿಗೆ ಸುಸ್ಥಿರ ಮಾತುಕತೆ ಮತ್ತು ಸಮಾಲೋಚನೆ ಮಾಡುವ ಮೂಲಕ ಅರ್ಥಮಾಡಿಕೊಳ್ಳಲಿದ್ದಾರೆ. ಅದನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ಕೇಂದ್ರಕ್ಕೆ ತಿಳಿಸಲಿದ್ದಾರೆ’ ಎಂದು ಸಿಂಗ್‌ ವಿವರಿಸಿದ್ದಾರೆ.

ಶರ್ಮಾ ಅವರು ಹುರಿಯತ್‌ ಕಾನ್ಫರೆನ್ಸ್ ಸೇರಿದಂತೆ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆಯೇ ಎಂಬ ಪ್ರಶ್ನೆಗೆ, ‘ಸಂಪುಟ ಕಾರ್ಯದರ್ಶಿಯ ಸ್ಥಾನಮಾನ ಹೊಂದಿರುವ ಶರ್ಮಾ ಅವರು ವಿವಾದಕ್ಕೆ ಸಂಬಂಧಪಟ್ಟ ಯಾರೊಂದಿಗೆ ಬೇಕಾದರೂ ಮಾತನಾಡಬಹುದು. ಈ ವಿಚಾರದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರೊಂದಿಗೆ ಮಾತನಾಡಬೇಡಿ ಅಥವಾ ಇವರೊಂದಿಗೆ ಮಾತನಾಡಿ ಎಂದು ನಾವು ಅವರಿಗೆ ಹೇಳುವುದಿಲ್ಲ’ ಎಂದು ಸಿಂಗ್‌ ಉತ್ತರಿಸಿದ್ದಾರೆ.

ಈಗಲೇ ಹೇಳಲಾಗದು: ಇದೇ ಪ್ರಶ್ನೆಗೆ ಉತ್ತರಿಸಿದ ದಿನೇಶ್ವರ್‌ ಶರ್ಮಾ, ‘ನಾನು ಯಾರೊಂದಿಗೆಲ್ಲ ಮಾತುಕತೆ ನಡೆಸುತ್ತೇನೆ ಎಂದು ಹೇಳಲಾಗದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಶ್ಮೀರದಲ್ಲಿ ಸರ್ಕಾರ ವಿಫಲ: ವಿರೋಧ ಪಕ್ಷಗಳು

ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳು, ಕಾಶ್ಮೀರದಲ್ಲಿ ತನ್ನ ವೈಫಲ್ಯವನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಹೇಳಿವೆ.

‘ಮಾತುಕತೆ ಇಲ್ಲ’ ಎಂಬಲ್ಲಿಂದ ‘ಸಂಬಂಧಪಟ್ಟ ಎಲ್ಲರೊಂದಿಗೆ ಮಾತುಕತೆ’ ಎಂದು ಸರ್ಕಾರ ಈಗ ಮಾಡಿರುವ ಘೋಷಣೆಯು ಕಾಶ್ಮೀರ ಸಮಸ್ಯೆಗೆ ರಾಜಕೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದವರಿಗೆ ಸಿಕ್ಕ ಗೆಲುವು ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

‘ಕಾಶ್ಮೀರದಲ್ಲಿ ತೋಳ್ಬಲ ಪ್ರಯೋಗ ವಿಫಲವಾಗಿದೆ ಎಂದು ಕೊನೆಗೂ ಸರ್ಕಾರ ಒಪ್ಪಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.

‘ಇಂತಹ ಕ್ರಮಕ್ಕಾಗಿ ಹಲವು ಸಮಯಗಳಿಂದ ಒತ್ತಾಯಿಸುತ್ತಾ ಬಂದಿದ್ದ ವಿರೋಧ ಪಕ್ಷಗಳ ಮಾತುಗಳನ್ನು ಕೇಳದೇ ಕೇಂದ್ರ ಸರ್ಕಾರ ಈಗ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ಶ್ರೀನಗರ: ಸಂಧಾನಕಾರರನ್ನು ನೇಮಿಸುವ ಕೇಂದ್ರದ ನಿರ್ಧಾರಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಗಸ್ಟ್‌ 15ರ ಭಾಷಣಕ್ಕೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಬಲ ಪ್ರಯೋಗಿಸುವುದೊಂದೇ ಹಿಂಸಾಚಾರಕ್ಕೆ ಪರಿಹಾರ ಎಂದುಕೊಂಡವರಿಗೆ ಇದು ದೊಡ್ಡ ಸೋಲು ಎಂದು ವಿರೋಧ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್ ಮುಖಂಡ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಪ್ರತ್ಯೇಕತಾವಾದಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

* ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೆ ಆದ್ಯತೆ ನೀಡುತ್ತೇನೆ. ಸರ್ಕಾರ ಮತ್ತು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸಮಾಡಲು ಯತ್ನಿಸುವೆ

-ದಿನೇಶ್ವರ್‌ ಶರ್ಮಾ, ಮಧ್ಯಸ್ಥಿಕೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT