ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ₨ 800 ಕೋಟಿ ನೀಡಲಿದೆ.
ಈ ಹಣವನ್ನು ಸೈಬರ್ ಭದ್ರತಾ ಕ್ರಮಗಳಿಗೆ ಬಳಸಲಾಗುತ್ತದೆ. ಕಂಪ್ಯೂ ಟರ್ ವ್ಯವಸ್ಥೆ ಹಾಳು ಮಾಡುವ ವೈರಸ್ ಮತ್ತಿತರ ತೊಂದರೆ ನಿವಾರಣೆಗೆ ಸ್ಥಾಪಿಸಲಾಗುವ ಕೇಂದ್ರಕ್ಕೆ ಈ ಹಣ ಬಳಸಲಾಗುತ್ತದೆ. ‘ಸುಮಾರು 800 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಅಂತರ ಸಚಿವಾಲಯದ ಸಲಹೆ ಪಡೆಯಲಾಗುವುದು. ಕಂಪ್ಯೂಟರ್ಗಳನ್ನು ವೈರಸ್ನಿಂದ ದೂರವಿಟ್ಟು ಸ್ವಚ್ಛಗೊಳಿಸಲು ಈ ಕೇಂದ್ರ ನೆರವಾಗಲಿದೆ’ ಎಂದು ದೂರಸಂಪರ್ಕ
ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಬೇಕಿದೆ. ಇದರೊಂದಿಗೆ ಸರ್ಕಾರ 270 ಕೋಟಿ ವೆಚ್ಚದಲ್ಲಿ ಇ–ಆಡಳಿತ ಭದ್ರತಾ ಕೇಂದ್ರ ಸ್ಥಾಪಿಸಲಿದೆ.