ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಕ್ಷೀಣಿಸಿದ್ದ ಮಳೆ ಕರಾವಳಿ ಭಾಗದಲ್ಲಿ ಸೋಮವಾರದಿಂದ ಮತ್ತೆ ಬಿರುಸುಗೊಂಡಿದೆ. ಬೆಳಿಗ್ಗೆ ಹೊತ್ತು ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ, ಮಧ್ಯಾಹ್ನದ ನಂತರ ಸತತವಾಗಿ ಸುರಿಯತೊಡಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ (ಜುಲೈ 1ರವರೆಗೆ 789 ಮಿ.ಮೀ.) ಈ ಬಾರಿ ದುಪ್ಪಟ್ಟು (1417 ಮಿ.ಮೀ.) ಮಳೆ ಸುರಿದಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.
ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದ್ದು ಯಾವುದೇ ಹಾನಿ ಉಂಟಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯುತ್ತಿದೆ.
ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಚದುರಿದಂತೆ ಮಳೆಯಾಗಿದೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಸುತ್ತಮುತ್ತ ರಭಸದ ಮಳೆ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ (ಮಲಪ್ರಭಾ ನದಿಯ ಉಗಮ ಸ್ಥಾನ) ಪ್ರದೇಶದಲ್ಲಿ 102 ಮಿ.ಮೀ. ಮಳೆ ದಾಖಲಾಗಿದೆ. ಖಾನಾಪುರ ಪಟ್ಟಣದ ಸಮೀಪದ ಹಳೆ ಸೇತುವೆ ಮುಳುಗಡೆಯಾಗಿದೆ.
ಆಲಮಟ್ಟಿ ಜಲಾಶಯದ ಒಳಹರಿವು ಸ್ವಲ್ಪ ಕಡಿಮೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.