ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಗುತ್ತಿಗೆದಾರರ ಮೇಲೆ ಐ.ಟಿ ದಾಳಿ

ರಾಜ್ಯ ಸರ್ಕಾರದಿಂದ ಮಾಹಿತಿ ಪಡೆದ ಬಳಿಕ ಕಾರ್ಯಾಚರಣೆ
Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದ ಮಾಹಿತಿ ಒದಗಿಸಿದ ವಾರದೊಳಗೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 11 ಗುತ್ತಿಗೆದಾರರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಒಬ್ಬರು ಮತ್ತು ಮೈಸೂರಿನ ಹತ್ತು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆದಿದೆ. ಆದರೆ, ಯಾವುದೇ ಸಚಿವರ ಮನೆಗಳ ಮೇಲೂ ದಾಳಿ ಮಾಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರ ಮನೆ ಮೇಲೆ ಐ.ಟಿ. ದಾಳಿ ನಡೆದಿದೆ ಎಂದು ಪುಕಾರು ಹಬ್ಬಿದ್ದರಿಂದ ಈ ಸ್ಪಷ್ಟನೆ ನೀಡಲಾಗಿದೆ.

‘ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಸಮಯದಲ್ಲಿ ಬಳಸಿಕೊಳ್ಳಲು ಸರ್ಕಾರ ಗುತ್ತಿಗೆದಾರರಿಗೆ ಭಾರಿ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ’ ಎಂಬ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕರ್ನಾಟಕ ಮತ್ತು ಗೋವಾ ಐ.ಟಿ ವೃತ್ತದ ತನಿಖಾ ವಿಭಾಗದ ಮಹಾ ನಿರ್ದೇಶಕರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ರಾಜ್ಯದ ಐದು ಪ್ರಮುಖ ಇಲಾಖೆಗಳಿಂದ ಗುತ್ತಿಗೆದಾರರಿಗೆ ಮೂರು ತಿಂಗಳಲ್ಲಿ ಬಿಡುಗಡೆ ಮಾಡಿದ ಕಾಮಗಾರಿ ಬಿಲ್ ಕುರಿತು ಮಾಹಿತಿ ಕೇಳಿದ್ದರು.

ಕಳೆದ ವಾರ ಕಂದಾಯ, ಲೋಕೋಪಯೋಗಿ, ಇಂಧನ, ಫಶುಸಂಗೋಪನೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳು ಐ.ಟಿಗೆ ಮಾಹಿತಿ‌ ನೀಡಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಡುಗಡೆಯಾಗಿದ್ದ ಹಣದ ಜತೆ ಹೋಲಿಕೆ‌ ಮಾಡಿದ ಬಳಿಕ ಈ ದಾಳಿ‌ ಮಾಡಲಾಗಿದೆ.

ಈಚೆಗೆ ಗುತ್ತಿಗೆದಾರರೊಬ್ಬರಿಗೆ ಬಿಡುಗಡೆ ಮಾಡಿದ ಹಣವನ್ನು ಮತ್ತೊಬ್ಬರ ಖಾತೆಗೆ ವರ್ಗಾಯಿಸಲಾಗಿತ್ತು. ಅವರು ಈ ಹಣವನ್ನು ಡ್ರಾ ಮಾಡಿಕೊಂಡಿದ್ದರು. ಐ.ಟಿ ಅಧಿಕಾರಿಗಳು ಅವರಿಂದ ₹ 55 ಲಕ್ಷ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ, ₹ 16 ಕೋಟಿ ಬಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಇದಲ್ಲದೆ, ದೇಶದ ಎಟಿಎಂಗಳಲ್ಲಿ ₹ 2000 ಹಾಗೂ ₹ 500 ಮುಖಬೆಲೆಯ ನೋಟುಗಳ ಕೊರತೆಯಾಗಿದ್ದು ಕರ್ನಾಟಕದಲ್ಲಿ ಇವು ಚಲಾವಣೆ ಆಗುವ ಸಾಧ್ಯತೆಯಿದೆ ಎಂಬ ವರದಿಯಿಂದಾಗಿ ರಾಜ್ಯಾದ್ಯಂತ ಐ.ಟಿ. ಕಣ್ಗಾವಲು ವ್ಯವಸ್ಥೆ ಮಾಡಿದೆ. ದೊಡ್ಡ ನೋಟುಗಳ ಚಲಾವಣೆ ಮೇಲೆ ನಿಗಾ ಇಟ್ಟಿದೆ.

ಚುನಾವಣೆ ನೀತಿ– ಸಂಹಿತೆ ಜಾರಿಗೆ ಬಂದ ಬಳಿಕ ಆದಾಯ ತೆರಿಗೆ ಇಲಾಖೆ 4.13 ಕೋಟಿ ನಗದು ವಶಪಡಿಸಿಕೊಂಡಿದೆ. ಇದರಲ್ಲಿ 4.03 ಕೋಟಿ ₹ 2000 ಹಾಗೂ ₹ 500 ನೋಟುಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT