ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್ ಕೊಟ್ಟಿದ್ದ ₹30 ಲಕ್ಷ ಜಪ್ತಿ: ನಟನ ಅವಾಂತರ ಸೆರೆ ಹಿಡಿದ ಕ್ಯಾಮೆರಾ

Published 14 ಜೂನ್ 2024, 20:06 IST
Last Updated 14 ಜೂನ್ 2024, 20:06 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಠಾಣೆಗೆ ಶರಣಾಗುವಂತೆ ಹೇಳಿ ಕೆಲ ಆರೋಪಿಗಳಿಗೆ ನಟ ದರ್ಶನ್ ನೀಡಿದ್ದ ₹30 ಲಕ್ಷ ಹಣವನ್ನು ಪಶ್ಚಿಮ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಅದರ ಜತೆಗೆ, ‘ಪ್ರಕರಣದಲ್ಲಿ ಬಚಾವಾಗಲು ದರ್ಶನ್ ಮತ್ತಷ್ಟು ಮಂದಿಗೆ ₹5 ಕೋಟಿಯಷ್ಟು ಆಮಿಷವೊಡ್ಡಿದ್ದರು’ ಎಂಬ ಮಾಹಿತಿ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

‘ಜೂನ್ 8ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣದಿಂದ ಪಾರಾಗಲು ಆರೋಪಿಗಳಿಗೆ ದರ್ಶನ್ ₹30 ಲಕ್ಷ ನೀಡಿದ್ದರು. ಹಣ ಪಡೆದಿದ್ದ ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ಇತರರು, ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡು ಠಾಣೆಗೆ ಬಂದಿದ್ದರು. ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಪತ್ತೆಯಾಯಿತು. ಆರೋಪಿಗಳಿಂದ ಪೂರ್ಣ ನಗದು, ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದ ಅಡ್ಡೆ ‘ಪಟ್ಟಣಗೆರೆ ಶೆಡ್’:

ತನಿಖೆ ಚುರುಕುಗೊಳಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ‘ನಟ ದರ್ಶನ್‌ ಹಾಗೂ ಸಹಚರರು, ಪಟ್ಟಣಗೆರೆ ಶೆಡ್‌ನಲ್ಲಿ ಹಲವು ಬಾರಿ ವಾರಾಂತ್ಯಗಳನ್ನು ಕಳೆದಿದ್ದರು. ಇದೇ ಶೆಡ್‌ನಲ್ಲಿ ಹಲವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿ ಬಿಟ್ಟು ಕಳುಹಿಸಿದ್ದರು. ಇದೇ ಶೆಡ್‌ನಲ್ಲಿ ರೇಣುಕಸ್ವಾಮಿ ಅವರನ್ನು ಕೊಂದಿದ್ದರು’ ಎಂಬ ಸಂಗತಿಯನ್ನು ಪುರಾವೆ ಸಮೇತ ಪತ್ತೆ ಮಾಡಿದ್ದಾರೆ.

‘ರೇಣುಕಸ್ವಾಮಿ ಅವರನ್ನು ಆರೋಪಿಗಳು ಸಂಪರ್ಕಿಸಿದ್ದ ಮೊದಲ ದಿನದಿಂದ ಹಿಡಿದು ಠಾಣೆಗೆ ಬಂದು ಶರಣಾಗುವ ದಿನದವರೆಗಿನ ಹಲವು ಪುರಾವೆಗಳು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು, ಮೊಬೈಲ್ ಸಂಭಾಷಣೆ ವಿವರ, ಮೊಬೈಲ್ ನೆಟ್‌ವರ್ಕ್‌ ಮಾಹಿತಿ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಶೆಡ್‌ ಮಾಲೀಕ ಎನ್ನಲಾದ ಜಯಣ್ಣ ಹಾಗೂ ಭದ್ರತಾ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಟ ದರ್ಶನ್, ಕೆಲ ವರ್ಷಗಳಿಂದ ವಿಪರೀತ ಮದ್ಯ ಕುಡಿಯುತ್ತಿದ್ದು, ಅವರ ಹಿಂದೆ–ಮುಂದಿರುವ ಹುಡುಗರೂ ಮದ್ಯವ್ಯಸನಿಗಳು. ಎಲ್ಲರೂ ಸೇರಿ ತಮ್ಮ ವಿರೋಧಿಗಳನ್ನು ಅಪಹರಿಸಿಕೊಂಡು ಬಂದು, ಥಳಿಸುತ್ತಿದ್ದರು. ನಟ ದರ್ಶನ್ ಕಡೆಯಿಂದ ಹಲವು ನಿರ್ಮಾಪಕರು, ನಿರ್ದೇಶಕರು, ಸಹ ನಟರು, ಕೆಲ ಉದ್ಯಮಿಗಳು ಸಹ ಏಟು ತಿಂದಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಲಭ್ಯವಾಗಿದೆ. ‘ದೊಡ್ಡ ನಟ’ ಎಂಬ ಕಾರಣಕ್ಕೆ ಯಾರೂ ದೂರು ನೀಡಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಹಲವರ ಮೇಲೆ ರಾತ್ರಿ ಹಲ್ಲೆ ಮಾಡುತ್ತಿದ್ದ ದರ್ಶನ್, ಬೆಳಿಗ್ಗೆ ಅವರನ್ನು ಪುನಃ ಮನೆಗೆ ಕರೆಸಿ ಹಣ ಕೊಟ್ಟು ಕಳುಹಿಸಿದ್ದ ಘಟನೆಗಳೂ ನಡೆದಿವೆ. ಜೊತೆಗೆ, ಎಲ್ಲಿಯೂ ಬಹಿರಂಗವಾಗಿ ಯಾರ ಮೇಲೂ ಹಲ್ಲೆ ಮಾಡಿಲ್ಲ. ಯಾರನ್ನಾದರೂ ಅಪಹರಣ ಮಾಡಬೇಕಾದರೆ, ಸಹಚರರ ಮೂಲಕ ಮಾಡಿಸುತ್ತಿದ್ದರು. ನಂತರ, ಶೆಡ್‌ಗೆ ಹೋಗಿ ಬೆದರಿಕೆಯೊಡ್ಡುತ್ತಿದ್ದರು. ಕೆಲವರ ಮೇಲಂತೂ ವಿಪರೀತ ಎನಿಸುವಂತೆ ದಬ್ಬಾಳಿಕೆ ನಡೆಸಿದ್ದರೆಂಬ ಮಾಹಿತಿ ಇದೆ’ ಎಂದು ಹೇಳಿವೆ.

ಅಮಾನುಷ ರೀತಿಯಲ್ಲಿ ಹತ್ಯೆ

‘ರೇಣುಕಸ್ವಾಮಿ ಸಣ್ಣ ದೇಹವುಳ್ಳ ವ್ಯಕ್ತಿ. ಆರಡಿ ಎತ್ತರದ ನಟ ದರ್ಶನ್, ರೇಣುಕಸ್ವಾಮಿ ಅವರನ್ನು ಎತ್ತಿ ಎತ್ತಿ ಬಿಸಾಕಿದ್ದರು. ಮರ್ಮಾಂಗಕ್ಕೆ ಒದ್ದು, ತಲೆಗೆ ಕಟ್ಟಿಗೆಯ ತುಂಡಿನಿಂದ ಹೊಡೆದಿದ್ದರು. ಹಲ್ಲೆಯ ಇಂಚಿಂಚು ಮಾಹಿತಿಯನ್ನು ಸಹಚರರು ಬಾಯ್ಬಿಟ್ಟಿದ್ದಾರೆ. ಜೊತೆಗೆ, ಕೃತ್ಯವನ್ನು ನೋಡಿದ ಕೆಲ ಪ್ರತ್ಯಕ್ಷ ಸಾಕ್ಷಿಗಳೂ ಇದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಜೂನ್‌ 8ರಂದು ಮಧ್ಯಾಹ್ನ ನಗರದ ಪಬ್‌ವೊಂದರಲ್ಲಿ ನಟ ದರ್ಶನ್ ಹಾಗೂ ಇತರರು, ಪಾರ್ಟಿ ಮಾಡುತ್ತಿದ್ದರು. ‘ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದೇವೆ’ ಎಂಬುದಾಗಿ ಸಹಚರರು, ದರ್ಶನ್‌ಗೆ ಕರೆ ಮಾಡಿ ತಿಳಿಸಿದ್ದರು. ದರ್ಶನ್ ರಾತ್ರಿವರೆಗೂ ಪಬ್‌ನಲ್ಲಿದ್ದರು. ‘ಶೆಡ್‌ಗೆ ಬಂದಿದ್ದೇವೆ’ ಎಂಬುದಾಗಿ ಸಹಚರ ಹೇಳುತ್ತಿದ್ದಂತೆ, ಸಿಟ್ಟಿನಿಂದಲೇ ಪಬ್‌ನ ಕುರ್ಚಿಯಿಂದ ಎದ್ದಿದ್ದ ದರ್ಶನ್ ಕಾರು ಏರಿ ಶೆಡ್‌ನತ್ತ ಹೊರಟಿದ್ದರು. ಸಹಚರರು, ಅವರನ್ನು ಹಿಂಬಾಲಿಸಿದ್ದರು. ಈ ಎಲ್ಲ ದೃಶ್ಯಗಳೂ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸೂಕ್ತ ಪುರಾವೆಗಳು ಇದ್ದಿದ್ದರಿಂದಲೇ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ರೌಡಿ ಪಟ್ಟಿ ತೆರೆಯಲು ನೋಟಿಸ್

‘ನಟ ದರ್ಶನ್ ಹಾಗೂ ಸಹಚರರು, ಅಕ್ರಮ ಕೂಟ ಕಟ್ಟಿಕೊಂಡು ಕೃತ್ಯ ಎಸಗಿದ್ದಾರೆ. ರೌಡಿ ಪಟ್ಟಿಗೆ ದರ್ಶನ್ ಹೆಸರು ಸೇರಿಸಲು ಕಾನೂನಿನಲ್ಲಿ ಅವಕಾಶಗಳಿವೆ. ಜೊತೆಗೆ, ಕೆಲ ಪ್ರಕ್ರಿಯೆಗಳೂ ಇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತನಿಖೆಗಾಗಿ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಕಸ್ಟಡಿಗೆ ಪಡೆಯಲಾಗಿದೆ. ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆಯೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದಾದ ನಂತರ, ರೌಡಿ ಪಟ್ಟಿ ತೆರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಆರಂಭದಲ್ಲಿ ದರ್ಶನ್‌ಗೆ ನೋಟಿಸ್ ನೀಡಲಾಗುವುದು. ನಂತರ, ಇನ್‌ಸ್ಪೆಕ್ಟರ್, ಎಸಿಪಿ, ಡಿಸಿಪಿ ಮೂಲಕ ಕಮಿಷನರ್‌ ಅವರಿಗೆ ಪ್ರಸ್ತಾವ ಸಲ್ಲಿಕೆಯಾಗಲಿದೆ. ಬಳಿಕ ರೌಡಿ ಪಟ್ಟಿ ತೀರ್ಮಾನ ಆಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT